Advertisement

ಶಿಕ್ಷಣದಿಂದ ಉತ್ತಮ ಬದುಕನ್ನು ರೂಪಿಸಿಕೊಳ್ಳಿ: ಬಿ.ಶಂಕರಯ್ಯ 

12:55 PM Jun 23, 2017 | Team Udayavani |

ತಿ.ನರಸೀಪುರ: ಸರ್ಕಾರದ ಶೈಕ್ಷಣಿಕ ನೆರವು ಪಡೆದುಕೊಂಡು ಸದ್ಬಳಕೆ ಮಾಡಿಕೊಳ್ಳುವ ವಿದ್ಯಾರ್ಥಿಗಳು ಶಿಕ್ಷಣದಿಂದ ಉತ್ತಮ ಬದುಕನ್ನು ರೂಪಿಸಿಕೊ ಳ್ಳುವುದೇ ಸರ್ಕಾರಕ್ಕೆ ನೀಡುವ ಪ್ರತ್ಯುಪಕಾರ ಎಂದು ತಹಶೀಲ್ದಾರ್‌ ಬಿ.ಶಂಕರಯ್ಯ ಹೇಳಿದರು.

Advertisement

ಪಟ್ಟಣದ ನಂಜನಗೂಡು ರಸ್ತೆಯಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ಪಿಯು ವಿದ್ಯಾರ್ಥಿ ನಿಲಯದಲ್ಲಿ ನಡೆದ ವಿವಿಧ ನಿಲಯಗಳ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿಗೆ ಇಲಾಖೆಯ ಸವಲತ್ತುಗಳನ್ನು ವಿತರಿಸಿ ಮಾತನಾಡಿ, ಸಾಮಾಜಿಕವಾಗಿ ಹಿಂದುಳಿದಿರುವ ಪ.ಜಾತಿ/ಪಂಗಡ ಹಾಗೂ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ಶೈಕ್ಷಣಿಕ ನೆರವನ್ನು ಸದ್ಬಳಕೆ ಮಾಡಿಕೊಂಡು ಪ್ರಗತಿ ಸಾಧಿಸಿ ಎಂದರು.

ಶಿಕ್ಷಣದಿಂದಲೇ ಸಮಾನತೆಯ ಸಮಾಜ ನಿರ್ಮಾಣ ಮಾಡಬಹುದು ಎಂಬುದನ್ನು ಅರಿತಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಶೋಷಿತ ಸಮುದಾಯಗಳ ಮಕ್ಕಳಿಗೆ ಪಠ್ಯಪುಸ್ತಕ, ಸಮವಸ್ತ್ರ ಹಾಗೂ ವಿದ್ಯಾರ್ಥಿ ನಿಲಯ ಸೇರಿದಂತೆ ವಿವಿಧ ವಸತಿ ಶಾಲೆಗಳನ್ನು ಆರಂಭಿಸಿ ಮೂಲಭೂತ ಸೌಕರ್ಯವೆಲ್ಲವನ್ನೂ ಉಚಿತವಾಗಿ ನೀಡುತ್ತಿದೆ. ಅವುಗಳನ್ನು ಬಳಕೆ ಮಾಡಿಕೊಂಡ ವಿದ್ಯಾರ್ಥಿಗಳು ನಾಗರಿಕ ಪ್ರಜೆಗಳಾಗಿ ಉತ್ತಮ ಬದುಕು ರೂಪಿಸಿಕೊಂಡರೆ ಉಪಕಾರಕ್ಕೆ ನೀಡುವ ಪ್ರತ್ಯುಪಕಾರವಾಗುತ್ತದೆ ಎಂದು ತಿಳಿಸಿದರು.

ಸಮಾಜ ಕಲ್ಯಾಣಾಧಿಕಾರಿ ಕೆ.ಜಗದೀಶ್‌ ಮಾತನಾಡಿ, ಶೋಷಿತ ಸಮುದಾಯ ಹಿನ್ನೆಲೆಯಿಂದ ಬಂದಂತಹ ಕೆ.ಶಿವರಾಂ ಮತ್ತು ಡಾ.ಸುಭಾಷ್‌ ಭರಣಿ ಐಎಎಸ್‌ ಹಾಗೂ ಐಪಿಎಸ್‌ ಉನ್ನತ ಹುದ್ಧೆ ನಿರ್ವಹಿಸಿ ಇಂದಿನ ಮಕ್ಕಳಿಗೆ ಮಾದರಿಯಾಗಿದ್ದಾರೆ. ಸಮಾಜ ಕಲ್ಯಾಣ ಇಲಾಖೆಯಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳು ಓದಿನತ್ತ ಹೆಚ್ಚಿನ ಗಮನ ನೀಡಿದರೆ ಬದುಕಿನಲ್ಲಿ ಸಾಧನೆ ಮಾಡಬಹುದು ಎಂದರು.

ಪುರಸಭೆ ಸಮುದಾಯ ಸಂಘಟಕ ಮಹದೇವ, ಸಮಾಜ ಕಲ್ಯಾಣ ಇಲಾಖೆಯ ಕಚೇರಿ ಅಧೀಕ್ಷಕ ಕೃಷ್ಣಪ್ಪ, ನಿಲಯ ಪಾಲಕರಾದ ನಾಗರಾಜಮ್ಮ, ಕೋಮಲ, ಕಮಲಾಕ್ಷಿ, ರಾಮಚಂದ್ರ, ಮಹೇಶ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next