ಬಳ್ಳಾರಿ: ಬಲಿಜ ಸಮುದಾಯಕ್ಕೆ 2ಎ ಮೀಸಲಾತಿ ಸೌಲಭ್ಯ ಕಲ್ಪಿಸಬೇಕು. ಪ್ರತ್ಯೇಕ ಅಭಿವೃದ್ಧಿ ಮಂಡಳಿ ಸ್ಥಾಪಿಸಬೇಕು ಎಂದು ಆಗ್ರಹಿಸಿ ಬಲಿಜ ಸೇವಾ ಸಂಘದ ಸದಸ್ಯರು ಜಿಲ್ಲಾಡಳಿತ ಮತ್ತು ನಗರ ಶಾಸಕ ಜಿ. ಸೋಮಶೇಖರರೆಡ್ಡಿ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು.
ರಾಜ್ಯದಲ್ಲಿ ಬಲಿಜ ಸಮುದಾಯ ಕಳೆದ ಮೂರು ದಶಕಗಳಿಂದ ನಿರ್ಲಕ್ಷ್ಯಕ್ಕೊಳಗಾಗಿದೆ. ಸಾಕಷ್ಟು ಸಂಕಷ್ಟ ಪರಿಸ್ಥಿತಿ ಎದುರಿಸುತ್ತಿದೆ. ಸಮುದಾಯದ ಬಹುತೇಕ ಕುಟುಂಬಗಳು ಕಡುಬಡತನದಿಂದ ಜೀವನ ಸಾಗಿಸುತ್ತಿದ್ದಾರೆ. 1984ರಿಂದ 1994 ಏಪ್ರಿಲ್ವರೆಗೆ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಪ್ರವರ್ಗ 2(ಎ) ಅಡಿ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ಸೌಲಭ್ಯ ಕಲ್ಪಿಸಿತ್ತು. ಆದರೆ, 1994ರಲ್ಲಿ ಅಂದಿನ ರಾಜ್ಯ ಸರ್ಕಾರ, ಎಚ್.ವಿಶ್ವನಾಥ್ ಅಧ್ಯಕ್ಷತೆಯಲ್ಲಿ ನೇಮಿಸಿದ ಉಪಸಮಿತಿಯು 2(ಎ) ಪಟ್ಟಿಯಲ್ಲಿರುವ ಮೀಸಲಾತಿಯನ್ನು ಪುನರ್‌ಪರಿಶೀಲಿಸುವಂತೆ ಸರ್ಕಾರಕ್ಕೆ ಸೂಚಿಸಿತ್ತು. ಅದರಂತೆ 2(ಎ) ಪಟ್ಟಿಯಲ್ಲಿದ್ದ 103 ಜಾತಿಗಳ ಪೈಕಿ ಕೇವಲ ಬಲಿಜ ಸಮುದಾಯವನ್ನು ಮಾತ್ರ ಪಟ್ಟಿಯಿಂದ ಕೈಬಿಟ್ಟು, 3(ಎ)ಗೆ ಸೇರಿಸಲಾಯಿತು.
ಸರ್ಕಾರದ ಈ ಕ್ರಮಕ್ಕೆ ಆಗ ಹಿಂದುಳಿದ ವರ್ಗಗಳ ಆಯೋಗ ಯಾವುದೇ ಶಿಫಾರಸ್ಸನ್ನು ಮಾಡಿರಲಿಲ್ಲ. ದುರಂತವೆಂದರೆ ಈ ಕುರಿತ ಸೂಚನೆಯಲ್ಲಿ ಪ್ರಿಯಂಬಲ್ (ಪೂರ್ವ ಪೀಠಿಕೆ) ಸಹ ಇರಲಿಲ್ಲ. ಸಮುದಾಯವೂ ಇದನ್ನು ಪ್ರಶ್ನಿಸದೆ, ಪ್ರತಿಭಟನೆಯನ್ನು ನಡೆಸದ ಹಿನ್ನೆಲೆಯಲ್ಲಿ ದಶಕಗಳಿಂದ ಅನ್ಯಾಯವಾಗಿದೆ ಎಂದು ಸಂಘದ ಅಧ್ಯಕ್ಷ ವಕೀಲ ಎಚ್.ರವಿಕುಮಾರ್ ತಿಳಿಸಿದ್ದಾರೆ.
1994 ರಿಂದ 2011 ರವರೆಗೆ ನಮ್ಮ ಸಮುದಾಯದ ಮಕ್ಕಳಿಗೆ ಶೈಕ್ಷಣಿಕವಾಗಿ ಯಾವುದೇ ಸೌಲಭ್ಯ ಸಿಕ್ಕಿರಲಿಲ್ಲ. ಸಮುದಾಯದ ಸತತ ಹೋರಾಟ, ಅಂದಿನ ಹಾಗೂ ಇಂದಿನ ಹಾಲಿ ಸಂಸದ ಪಿ.ಸಿ.ಮೋಹನ್ ಅವರ ಒತ್ತಾಯಕ್ಕೆ ಅಂದಿನ ಸರ್ಕಾರ ಸಮುದಾಯಕ್ಕೆ ಶಿಕ್ಷಣಕ್ಕೆ 2(ಎ) ಮೀಸಲಾತಿ ಸೌಲಭ್ಯವನ್ನು ಕಲ್ಪಿಸಿದ್ದು, ಅದನ್ನು ಕೂಡಲೇ ಉದ್ಯೋಗಕ್ಕೂ ವಿಸ್ತರಿಸಬೇಕು. ಜತೆಗೆ ಸಮುದಾಯದ ಅಭಿವೃದ್ಧಿಗಾಗಿ ಪ್ರತ್ಯೇಕ ಅಭಿವೃದ್ಧಿ ಮಂಡಳಿ ಸ್ಥಾಪಿಸಬೇಕು ಎಂದವರು ಮನವಿಯಲ್ಲಿ ಕೋರಿದ್ದಾರೆ.
ಈ ವೇಳೆ ಕಾರ್ಯದರ್ಶಿ ಬಿ. ಎರ್ರಿಸ್ವಾಮಿ, ಸಮನ್ವಯ ಸಮಿತಿ ಸದಸ್ಯ ಜಿ. ರಂಗಸ್ವಾಮಿ, ಜಿ. ಶ್ರೀನಿವಾಸುಲು, ಆನಂದ ಕುಮಾರ್, ಜೆ.ಎನ್.ರಾಜೇಶ್, ರಾಜಶೇಖರ್, ಗೌರವಾಧ್ಯಕ್ಷ ರಾಮಪ್ಪ, ಉಪಾಧ್ಯಕ್ಷ ಜೆ.ನಾರಾಯಣಿ, ಜಿ. ಲೋಕೇಶ್, ಖಚಾಂಚಿ ಜಿ. ತಾರಕರಾಮ, ಬಲಿಜ ಸಂಘದ ಮುಂಖಡರುಗಳಾದ ಸಪ್ತಗಿರಿ ಸತ್ಯನಾರಾಯಣ, ಅನಿಲ್ನಾಯ್ಡು, ಎಂ. ಈಶ್ವರರೆಡ್ಡಿ ಇತರರಿದ್ದರು.