ತೀರ್ಥಕೆರೆಯಲ್ಲಿ ಮಿಂದರೆ ದೇಹದ ತುರಿಕೆ,ಕಜ್ಜಿ,ಕೆಡು,ಚರ್ಮರೋಗಗಳು ವಾಸಿಯಾಗುವುದೆಂಬ ನಂಬಿಕೆಯಲ್ಲಿ ಭಕ್ತರು ಅನ್ಯರಾಜ್ಯಗಳಿಂದಲೂ ತೀರ್ಥ ಸ್ನಾನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿವರ್ಷವೂ ಆಗಮಿಸುವರು. ಈ ಬಾರಿಯೂ ಬೆಳ್ಳಂಬೆಳಗ್ಗೆಯೇ ವಿಶೇಷ ವಾಹನಗಳ ಮೂಲಕ ಭಕ್ತರು ತೀರ್ಥಸ್ನಾನಕ್ಕಾಗಿ ಆಗಮಿಸಿದ್ದರು.
ಕುಂಬಳೆ: ಕುಂಬಳೆ ಸೀಮೆಯ ಇತಿಹಾಸ ಪ್ರಸಿದ್ದ ದೇವಾಲಯಗಳಲ್ಲೊಂದಾದ ಮುಜುಂಗಾವು ಪಾರ್ಥಸಾರಥಿ ಶ್ರೀಕೃಷ್ಣ ದೇವಾಲಯದ ತೀರ್ಥ ಕೆರೆಯಲ್ಲಿ ತುಲಾ ಸಂಕ್ರಮಣ ದಿನವಾದ ಬುಧವಾರ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ತೀರ್ಥಸ್ನಾನ ಮಾಡಿ ಪುನೀತರಾದರು.
ಮುಂಜಾನೆ ಕ್ಷೇತ್ರದಲ್ಲಿ ಸಾಮೂಹಿಕ ಪ್ರಾರ್ಥನೆ ಮಾಡಿದ ಬಳಿಕ ತೀರ್ಥ ಕೆರೆಯಿಂದ ಕ್ಷೇತ್ರದ ಪ್ರಧಾನ ಅರ್ಚಕ ಕಿಶೋರ್ ಪೆರ್ಮುಕತ್ತಾಯರು ವೇದಘೋಷಗಳ ಮೆರವಣಿಗೆಯಲ್ಲಿ ಬೆಳ್ಳಿ ಕಲಶದಲ್ಲಿ ತೀರ್ಥ ತಂದು ದೇವರಿಗೆ ಅಭಿಷೇಕ ಮಾಡಿದರು. ಬಳಿಕ ಅಪಾರ ಸಂಖ್ಯೆಯ ಭಕ್ತರು ಮಧ್ಯಾಹ್ನದ ತನಕ ತೀರ್ಥ ಮಿಂದು ಬೆಳ್ತಿಗೆ ಹುರುಳಿ ಮಿಶ್ರಣವನ್ನು ತಲೆಗೆ ನಿವಾಳಿಸಿ, ತೀರ್ಥಕೊಳಕ್ಕೆ ಎಸೆಯುತ್ತಾ ತೀರ್ಥಕೆರೆಗೆ ದಕ್ಷಿಣೆ ಹಾಕಿ ಬಳಿಕ ದೇವರ ದರ್ಶನ ಪಡೆದರು.
ಕ್ಷೇತ್ರದ ಬ್ರಹ್ಮಶ್ರೀ ದೇಲಂಪಾಡಿ ಬಾಲಕೃಷ್ಣ ತಂತ್ರಿ ಅವರು ಕ್ಷೇತ್ರದಲ್ಲಿ ವೈದಿಕ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿದರು. ಬೆಳಗ್ಗಿನ ಪೂಜೆಯ ಬಳಿಕ ನವಕ, ಗಣಪತಿ ಪೂಜೆ, ಪಲ್ಲಪೂಜೆ, ಮಧ್ಯಾಹ್ನ ಮಹಾಪೂಜೆ ಜರಗಿತು. ಬೆಳಗ್ಗಿನಿಂದ ಸಂಜೆ ತನಕ ನಡೆದ ಅನ್ನಸಂತರ್ಪಣೆಯಲ್ಲಿ ಸುಮಾರು 20 ಸಹಸ್ರ ಮಂದಿ ಭಕ್ತರು ಭಾಗವಹಿಸಿರುವರು. ಭಕ್ತರು ದೇವರಿಗೆ ಪ್ರಿಯವಾದ ಮುಳ್ಳು ಸೌತೆಯನ್ನು ಅರ್ಪಿಸಿದರು. ಕಾರ್ಯಕ್ರಮದ ವ್ಯವಸ್ಥೆಗೆ ಸುಮಾರು 25ರಷ್ಟು ವೈದಿಕರು, ವಿವಿಧ ಸಂಘ ಸಂಸ್ಥೆಗಳ 300ಕ್ಕೂ ಮಿಕ್ಕಿ ಸ್ವಯಂ ಸೇವಕರು, ಮಹಿಳಾ ಪೊಲೀಸ್ ಪೇದೆ ಸಹಿತ 50 ಕ್ಕೂ ಹೆಚ್ಚು ಪೊಲೀಸರು ಭಾಗವಹಿಸಿದ್ದರು.
ಮುಂಜಾಗ್ರತೆ: ತೀರ್ಥಕೆರೆಯಲ್ಲಿ ಯಾವುದೇ ಅಪಾಯವಾಗದಂತೆ ಮುಂಜಾಗ್ರತೆಯಾಗಿ ಕಾಸರಗೋಡು ಅಗ್ನಿಶಾಮಕದಳ ತಂಡದ 7 ಮಂದಿ ಸಿಬಂದಿಗಳು ಡಿಂಕಿ, ಲೈಫ್‌ಜಾಕೆಟ್, ಲೈಫ್‌ಬಾಯ್ ಉಪಕರಣಗಳೊಂದಿಗೆ ತೀರ್ಥಕೆರೆಯ ಸುತ್ತ ಕಾವಲು ಕಾಯುತ್ತಿದ್ದರು. ಕುಂಬಳೆ, ಬದಿಯಡ್ಕ, ಪೆರ್ಲ, ಪುತ್ತಿಗೆ ಭಾಗಕ್ಕೆ ಸಂಚರಿಸುವ ಎಲ್ಲ ಖಾಸಗಿ ಬಸ್ಸುಗಳು ಮುಜಂಗಾವು ಕ್ಷೇತ್ರದ ತನಕ ಪ್ರಯಾಣ ಬೆಳೆಸಿದವು.