ಬೊಕೊರೊ: ಜಾರ್ಖಂಡ್‌ನ ಬೊಕಾರೊದಲ್ಲಿ ನವದೆಹಲಿ-ಭುವನೇಶ್ವರ ರಾಜಧಾನಿ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 22812) ಸಂಚರಿಸುವಾಗ ಸಂತಾಲ್ದಿಹ್ ರೈಲ್ವೆ ಕ್ರಾಸಿಂಗ್ ಬಳಿ ರೈಲ್ವೆ ಗೇಟ್‌ಗೆ ಟ್ರಾಕ್ಟರ್ ಡಿಕ್ಕಿ ಹೊಡೆದ ಘಟನೆ ಮಂಗಳವಾರ ನಡೆದಿದೆ.
ಜಾರ್ಖಂಡ್ ರಾಜ್ಯದಲ್ಲಿ ಮತ್ತೊಂದು ದೊಡ್ಡ ರೈಲು ಅಪಘಾತವನ್ನು ತಪ್ಪಿಸಲಾಗಿದೆ ಎಂದು ರೈಲ್ವೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಭೋಜುಡಿಹ್ ರೈಲು ನಿಲ್ದಾಣದ ಬಳಿಯ ಸಂತಾಲ್ಡಿಹ್ ರೈಲ್ವೆ ಕ್ರಾಸಿಂಗ್‌ನಲ್ಲಿ ಈ ಘಟನೆ ಸಂಭವಿಸಿದ್ದು, ಟ್ರ್ಯಾಕ್ಟರ್ ರೈಲ್ವೆ ಹಳಿ ಮತ್ತು ಗೇಟ್ ನಡುವೆ ಸಿಲುಕಿಕೊಂಡಿತು.
ರೈಲ್ವೆ ಕ್ರಾಸಿಂಗ್‌ನಲ್ಲಿ ರೈಲ್ವೆ ಗೇಟ್ ಮುಚ್ಚುವಾಗ ಟ್ರ್ಯಾಕ್ಟರ್ ಡಿಕ್ಕಿ ಹೊಡೆದಿದೆ. ಆದರೆ, ರೈಲು ಚಾಲಕ ಬ್ರೇಕ್ ಹಾಕಿದ್ದರಿಂದ ದೊಡ್ಡ ರೈಲು ಅಪಘಾತ ತಪ್ಪಿತು ಎಂದು ಆಗ್ನೇಯ ರೈಲ್ವೆಯ ಆದ್ರಾ ವಿಭಾಗದ ಡಿಆರ್‌ಎಂ ಮನೀಶ್ ಕುಮಾರ್ ತಿಳಿಸಿದ್ದಾರೆ.
ಸಂಜೆ 5 ಗಂಟೆ ಸುಮಾರಿಗೆ ಈ ಘಟನೆ ಸಂಭವಿಸಿದ್ದು, ರೈಲು ಸುಮಾರು 45 ನಿಮಿಷ ತಡವಾಯಿತು ಎಂದು ಕುಮಾರ್ ಹೇಳಿದ್ದಾರೆ.
ಟ್ರ್ಯಾಕ್ಟರ್ ಅನ್ನು ವಶಪಡಿಸಿಕೊಳ್ಳಲಾಗಿದೆ ಮತ್ತು ಸಂಬಂಧಪಟ್ಟ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ . ಟ್ರ್ಯಾಕ್ಟರ್ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಗೇಟ್ ಮ್ಯಾನ್ ಅನ್ನು ಅಮಾನತುಗೊಳಿಸಲಾಗಿದೆ ಎಂದು ಅವರು ಹೇಳಿದರು.