ಜೋಹಾನ್ಸ್ ಬರ್ಗ್: ಸತತ ಸೋಲಿನಿಂದ ಕಂಗೆಟ್ಟಿರುವ ದಕ್ಷಿಣ ಆಫ್ರಿಕಾ ತಂಡದಲ್ಲಿ ಮೇಜರ್ ಬದಲಾವಣೆ ಮಾಡಲಾಗಿದೆ. ಏಕದಿನ ತಂಡದ ನಾಯಕ ಫಾಫ್ ಡುಪ್ಲೆಸಿಸ್ ಅವರನ್ನೇ ತಂಡದಿಂದ ಕೈ ಬಿಟ್ಟಿದ್ದು ಹೊಸ ಶಕೆಗೆ ನಾಂದಿ ಹಾಡಿದೆ.
ಏಕದಿನ ತಂಡದಿಂದ ಫಾಫ್ ಡು ಪ್ಲೆಸಿಸ್ ರನ್ನು ಕೈ ಬಿಟ್ಟಿರುವ ದ. ಆಫ್ರಿಕಾ ಮಂಡಳಿ ಹೊಸ ನಾಯಕನಾಗಿ ಕ್ವಿಂಟನ್ ಡಿ ಕಾಕ್ ರನ್ನು ಆಯ್ಕೆ ಮಾಡಿದೆ. ವಿಕೆಟ್ ಕೀಪರ್ ಬ್ಯಾಟ್ಸಮನ್ ಆಗಿರುವ ಕ್ವಿಂಟನ್ ಡಿ ಕಾಕ್ ಮುಂದೆ ದಕ್ಷಿಣ ಆಫ್ರಿಕಾವನ್ನು ಮುನ್ನಡೆಸಲಿದ್ದಾರೆ.
ಮುಂದಿನ ತಿಂಗಳು ನಡೆಯಲಿರುವ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಗೆ ತಂಡವನ್ನು ಪ್ರಕಟಿಸಿದ್ದು, ಐವರು ಹೊಸ ಮುಖಗಳಿಗೆ ಮಣೆ ಹಾಕಿದೆ.
ಇನ್ನೂ ಅಂತಾರಾಷ್ಟ್ರೀಯ ಪಂದ್ಯವಾಡದ ಲುಥೋ ಸಿಪಮಾಲ, ಸಿಸಾಂಡ ಮಗಲಾ, ಫಾರ್ಚೂನ್, ಜಾನ್ನೆಮಾನ್ ಮಲಾನ್ ಮತ್ತು ಕೈಲ್ ವೆರೈನ್ ರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ವೇಗಿ ಕಗಿಸೋ ರಬಾಡಗೆ ಈ ಸರಣಿಯಿಂದ ವಿಶ್ರಾಂತಿ ನೀಡಲಾಗಿದ್ದು, ಕ್ರಿಸ್ ಮೋರಿಸ್ ಮತ್ತು ಡ್ವೈನ್ ಪ್ರೆಟೋರಿಯಸ್ ತಂಡದಿಂದ ಹೊರಬಿದ್ದಿದ್ದಾರೆ.
ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಲಿಯ ನೂತನ ನಿರ್ದೇಶಕರಾಗಿರುವ ಗ್ರೇಮ್ ಸ್ಮಿತ್ ಈ ಬಗ್ಗೆ ಹೇಳಿಕೆ ನೀಡಿದ್ದು, ಕ್ವಿಂಟನ್ ಡಿ ಕಾಕ್ ಎಂತಹ ಆಟಗಾರ ಎನ್ನುವುದು ಎಲ್ಲರಿಗೂ ಗೊತ್ತಿದೆ. ಕೆಲವು ವರ್ಷಗಳಿಂದ ಆತನ ಬೆಳವಣಿಗೆ ಗಮನಿಸಿದ್ದೇವೆ ಎಂದಿದ್ದಾರೆ.