ಬೆಂಗಳೂರು: ಮುಂದಿನ ವರ್ಷ ನಡೆಯಲಿರುವ ವಿಧಾನಸಭೆ ಚುನಾವಣೆಗೆ ಭರದ ಸಿದ್ಧತೆಯಲ್ಲಿ ತೊಡಗಿರುವ ಕಾಂಗ್ರೆಸ್, ಭಾರೀ ಮಟ್ಟದಲ್ಲಿ ಕೆಪಿಸಿಸಿ ಪುನಾರಚನೆ ಮಾಡಿದೆ.
ಕರ್ನಾಟಕ ಪ್ರದೇಶ ಕಾಂಗ್ರೆಸ್ ಘಟಕಕ್ಕೆ ಡಾ| ಜಿ. ಪರಮೇಶ್ವರ್ ಅವರು ಪುನರಾಯ್ಕೆಯಾದ ಬೆನ್ನಲ್ಲೆ ಗಜ ಗಾತ್ರದ ಪಟ್ಟಿಗೆ ಅಖೀಲ ಭಾರತ ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷ ರಾಹುಲ್ ಗಾಂಧಿ ಒಪ್ಪಿಗೆ ಸೂಚಿಸಿದ್ದು, ಈಗ ಬಹಿರಂಗಗೊಳಿಸಲಾಗಿದೆ.
ಒಬ್ಬ ವ್ಯಕ್ತಿಗೆ ಒಂದೇ ಹುದ್ದೆ ಲೆಕ್ಕಾಚಾರದಲ್ಲಿ ಪಟ್ಟಿ ಸಿದ್ಧಪಡಿಸಲಾಗಿದೆ. ಹಾಲಿ ಶಾಸಕರು, ಸಚಿವರನ್ನು ಪಕ್ಷದ ಪದಾಧಿಕಾರಿಗಳ ಹುದ್ದೆಯಿಂದ ಕೈಬಿಡಲಾಗಿದೆ.
96 ಕಾರ್ಯದರ್ಶಿಗಳನ್ನು ನೇಮಕ ಮಾಡಲಾಗಿದ್ದು, ಯುವ ಮುಖಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಅಲ್ಲದೆ ಮಂತ್ರಿಗಳು ಹಾಗೂ ಹಿರಿಯ ನಾಯಕರ ಮಕ್ಕಳಿಗೆ ಪಕ್ಷದಲ್ಲಿ ಅವಕಾಶ ಕಲ್ಪಿಸಲಾಗಿದೆ. ತೂಗು ದೀಪ ಶ್ರೀನಿವಾಸ ಪತ್ನಿ ಹಾಗೂ ನಟ ದರ್ಶನ್ ತಾಯಿ ಮೀನಾ ತೂಗುದೀಪ ಶ್ರೀನಿವಾಸ, ನಟಿ ಭಾವನಾ, ನಟ ಹಾಗೂ ನಿರ್ಮಾಪಕ ಮದನ್ ಮಲ್ಲು, ಸಚಿವ ಕಾಗೋಡು ತಿಮ್ಮಪ್ಪ ಅವರ ಮಗಳು ರಾಜನಂದಿನಿ, ರಾಜ್ಯಸಭಾ ಸದಸ್ಯ ಕೆ. ರೆಹಮಾನ್ ಪುತ್ರ ಮನ್ಸೂರ್ ರೆಹಮಾನ್ ಖಾನ್, ವಿಧಾನಸಭಾಧ್ಯಕ್ಷ ಕೆ.ಬಿ. ಕೋಳಿವಾಡ ಅವರ ಪುತ್ರ ಪ್ರಕಾಶ್ ಕೋಳಿವಾಡ, ಮಾಧ್ಯಮ ವಿಭಾಗದ ಉಸ್ತುವಾರಿ ಎಂ. ನಾರಾಯಣಸ್ವಾಮಿ ಪಕ್ಷದ ಪದಾಧಿಕಾರಿಗಳ ಪಟ್ಟಿಯಲ್ಲಿ ಕಾರ್ಯದರ್ಶಿಸ್ಥಾನ
ಪಡೆದಿದ್ದಾರೆ.