Advertisement
ಸುಬ್ರಹ್ಮಣ್ಯ: ಪುಣ್ಯಕ್ಷೇತ್ರ ಕುಕ್ಕೆ ಶ್ರೀ ಸುಬ್ರಹ್ಮಣ್ಯವನ್ನು ಸಂಪರ್ಕಿಸುವ ರಾಜ್ಯ ಹೆದ್ದಾರಿ ಗುಂಡ್ಯ-ಸುಬ್ರಹ್ಮಣ್ಯ ರಸ್ತೆಯ ಮೇಲೆ ಬೃಹತ್ ಗಾತ್ರದಲ್ಲಿ ಹೊಂಡಗಳು ನಿರ್ಮಾಣಗೊಂಡಿವೆ. ಮುಂದಿನ ತಿಂಗಳು ಕುಕ್ಕೆಯಲ್ಲಿ ಷಷ್ಠಿ ಉತ್ಸವ ಜರಗಲಿದ್ದು, ಆಗಮಿಸುವ ಭಕ್ತರಿಗೆ ಸಮಸ್ಯೆಯಾಗಲಿದೆ. ರಸ್ತೆಯಲ್ಲಿ ನಿರ್ಮಾಣವಾಗಿರುವ ಹೊಂಡಗಳಿಂದ ವಾಹನ ಅಪಘಾತಗಳು ಹೆಚ್ಚುತ್ತಿದ್ದು, ಪ್ರಾಣ ಹಾನಿಯೂ ಸಂಭವಿಸುತ್ತಿದೆ. ಮಂಗಳೂರು – ಬೆಂಗಳೂರು, ಧರ್ಮಸ್ಥಳ – ಸುಬ್ರಹ್ಮಣ್ಯ ಮಾರ್ಗದ ಮೂಲಕ ರಾಜ್ಯದ ವಿವಿಧೆಡೆಯಿಂದ ಆಗಮಿಸುವ ಯಾತ್ರಿಗಳು, ಭಕ್ತರು ಹಾಗೂ ಸಾರ್ವಜನಿಕರು ಗುಂಡ್ಯ ಮಾರ್ಗವಾಗಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಪ್ರಯಾಣ ಬೆಳೆಸುತ್ತಾರೆ. ಗುಂಡ್ಯದಿಂದ ಸುಬ್ರಹ್ಮಣ್ಯ ತನಕದ ರಸ್ತೆ ಸಂಪೂರ್ಣ ಹದಗೆಟ್ಟಿದೆ. ಗುಂಡ್ಯ- ಕುಲ್ಕುಂದ ನಡುವಿನ ರಸ್ತೆ ಪುತ್ತೂರು ಲೋಕೋಪಯೋಗಿ ಇಲಾಖೆಗೆ ಸೇರಿದ್ದು, ಕುಲ್ಕುಂದ-ಕುಮಾರಧಾರಾ ನಡುವಿನ ರಸ್ತೆ ಸುಳ್ಯ ಲೋಕೋಪಯೋಗಿ ಇಲಾಖೆ ವ್ಯಾಪ್ತಿಯಲ್ಲಿದೆ. ಎರಡೂ ಇಲಾಖೆಗಳ ವ್ಯಾಪ್ತಿಗೆ ಸೇರಿದ ರಸ್ತೆಗಳು ಸುಗಮ ಸಂಚಾರಕ್ಕೆ ಲಭ್ಯವಾಗುತ್ತಿಲ್ಲ.
ಕಾಟಾಚಾರಕ್ಕೆ ದುರಸ್ತಿ
ದೊಡ್ಡ ಹೊಂಡಗಳಿರುವಲ್ಲಿ ದುರಸ್ತಿ ಮಾಡಿ, ತಾತ್ಕಾಲಿಕ ವ್ಯವಸ್ಥೆ ಕಲ್ಪಿಸಲಾಗಿತ್ತು. ಆ ವೇಳೆ ಕೆಲವು ಕಿ.ಮೀ. ತನಕ ಮಾತ್ರ ಹೊಂಡ ಮುಚ್ಚಲಾಗಿದ್ದು, ಉಳಿದ ಕಡೆ ದುರಸ್ತಿಗೊಳಿಸದ ಪರಿಣಾಮ ಹೊಂಡಗಳು ವಿಸ್ತರಿಸಿಕೊಂಡಿವೆ. ಗುಂಡ್ಯ- ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿ ಕಿರಿದಾಗಿದೆ. ರಾಜ್ಯದಲ್ಲಿ ಹಿಂದೊಮ್ಮೆ ಜೆಡಿಎಸ್ ಸರಕಾರ ಆಡಳಿತದಲ್ಲಿದ್ದಾಗ ಮುಖ್ಯಮಂತ್ರಿಯಾಗಿದ್ದ ಎಚ್.ಡಿ. ಕುಮಾರಸ್ವಾಮಿ ಈ ರಸ್ತೆಗೆ ಅನುದಾನ ಒದಗಿಸಿದ್ದರು. ಬಳಿಕ ರಸ್ತೆ ವಿಸ್ತರಣೆಗೊಳಿಸಿ ಅಭಿವೃದ್ಧಿಯಾಗಿತ್ತು. ಸಂಚಾರಕ್ಕೆ ಯಾವುದೇ ತೊಂದರೆ ಇರಲಿಲ್ಲ. ಇತ್ತೀಚಿನ ಕೆಲವು ವರ್ಷಗಳಲ್ಲಿ ಈ ರಸ್ತೆ ದುರಸ್ತಿಯಾಗಿಲ್ಲ. ಪ್ರಮುಖ ರಸ್ತೆ
ಪ್ರಮುಖ ಸಂಪರ್ಕ ರಸ್ತೆಯಾಗಿರುವ ಗುಂಡ್ಯ- ಸುಬ್ರಹ್ಮಣ್ಯ ಮಾರ್ಗದಲ್ಲಿ ನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತಿವೆ. ಗುಂಡ್ಯ ಮೂಲಕ ಬೆಂಗಳೂರು – ಮಂಗಳೂರು ಕಡೆಯಿಂದ ಸುಬ್ರಹ್ಮಣ್ಯ ತಲುಪುವವರಿಗೆ ಹಾಗೂ ಧರ್ಮಸ್ಥಳಕ್ಕೆ ತೆರಳುವವರಿಗೆ ಈ ರಸ್ತೆ ಬಹಳ ಪ್ರಯೋಜನಕಾರಿಯಾಗಿದೆ. ಕಡಬ ಮೂಲಕ ಸುಬ್ರಹ್ಮಣ್ಯ ತಲುಪುವವರು ಕೈಕಂಬ ಜಂಕ್ಷನ್ ಮೂಲಕ ಸುಬ್ರಹ್ಮಣ್ಯಕ್ಕೆ ಆಗಮಿಸುತ್ತಾರೆ. ಈ ಮಾರ್ಗದಲ್ಲಿ ವಾಹನ ದಟ್ಟಣೆ ಅಧಿಕವಾಗಿ ರಸ್ತೆಗಳು ಕೆಟ್ಟಿವೆ.
Related Articles
ಗಣ್ಯರಿಗೂ ಇದೇ ಮಾರ್ಗ
ರಾಜ್ಯದಲ್ಲಿ ಎಲ್ಲ ರಸ್ತೆಗಳು ಅಭಿವೃದ್ಧಿಯಾಗುತ್ತಿದ್ದರೂ ಎರಡು ಪ್ರಮುಖ ಪುಣ್ಯ ಕ್ಷೇತ್ರಗಳಿಗೆ ಸಂಪರ್ಕಿಸುವ ರಸ್ತೆ ಮಾತ್ರ ಇನ್ನೂ ಅಭಿವೃದ್ಧಿಗೊಂಡಿಲ್ಲ. ಕುಕ್ಕೆ ಕ್ಷೇತ್ರಕ್ಕೆ ಆಗಮಿಸುವ ಗಣ್ಯರೂ ಇದೇ ರಸ್ತೆಯ ಮೂಲಕವೇ ಆಗಮಿಸಬೇಕಾಗಿದೆ. ಆದರೂ ಈ ರಸ್ತೆ ದುರಸ್ತಿಯಾಗದೆ ಉಳಿದಿದೆ.
Advertisement
ವಾರದೊಳಗೆ ದುರಸ್ತಿಇಲಾಖೆಯ ಸಿಬಂದಿ ದೀಪಾವಳಿ ರಜೆ ಹಿನ್ನೆಲೆಯಲ್ಲಿ ಊರಿಗೆ ತೆರಳಿದ್ದಾರೆ. ಅವರು ಬಂದ ಬಳಿಕ ಈ ರಸ್ತೆಗಳ ಗುಂಡಿಗಳನ್ನು ತಾತ್ಕಾಲಿಕವಾಗಿ ಮುಚ್ಚುವ ಕೆಲಸವನ್ನು ಇಲಾಖೆ ಕಡೆಯಿಂದ ಮಾಡಲಾಗುವುದು. ವಾರದೊಳಗೆ ಸಮಸ್ಯೆ ಬಗೆಹರಿಸಿಕೊಡುತ್ತೇವೆ.
– ಸಂದೇಶ್, ಲೋಕೋಪಯೋಗಿ ಇಲಾಖೆ ಎಂಜಿನಿಯರ್ — ಬಾಲಕೃಷ್ಣ ಭೀಮಗುಳಿ