ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧದ ಡಾ.ಶಿವರಾಮ ಕಾರಂತ ಬಡವಾಣೆ ಅಕ್ರಮ ಡಿನೋಟಿಫಿಕೇಶನ್ ಆರೋಪ ಪ್ರಕರಣಕ್ಕೆ ಸಂಬಂಧಿಸಿದ ಕಡತಗಳಲ್ಲಿ ಕೆಲ ಮುಖ್ಯವಾದ ಟಿಪ್ಪಣಿಗಳ ಹಾಳೆಗಳನ್ನು ಕಿತ್ತು ಹಾಕಿರುವ ಸಂಗತಿ ಬೆಳಕಿಗೆ ಬಂದಿದೆ ಎಂದು ಭ್ರಷ್ಟಾಚಾರ ನಿಗ್ರಹ ದಳ ಹೈಕೋರ್ಟ್‌ಗೆ ತಿಳಿಸಿದೆ.
ಅಕ್ರಮ ಡಿನೋಟಿಫಿಕೇಶನ್ ಆರೋಪ ಸಂಬಂಧ ತಮ್ಮ ವಿರುದ್ಧ ಎಸಿಬಿ ದಾಖಲಿಸಿರುವ ಎಫ್ಐಆರ್ ರದ್ದುಪಡಿಸುವಂತೆ ಕೋರಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಅರವಿಂದಕುಮಾರ್ ಅವರಿದ್ದ ಏಕಸದಸ್ಯಪೀಠ ಗುರುವಾರ ನಡೆಸಿತು.
ವಿಚಾರಣೆ ವೇಳೆ ಎಸಿಬಿ ಪರ ವಾದ ಮಂಡಿಸಿದ ಮಾಜಿ ಅಡ್ವೊಕೇಟ್ ಜನರಲ್ ಪ್ರೊ.ರವಿವರ್ಮಕುಮಾರ್, ಅರ್ಜಿದಾರ ಯಡಿಯೂರಪ್ಪನವರ ವಿರುದ್ಧ ಎರಡು ಎಫ್ಐಆರ್‌ಗಳನ್ನು ದಾಖಲಿಸುವ ಮುನ್ನ ಪ್ರಾಥಮಿಕ ತನಿಖೆ ನಡೆಸಿ ಸಲ್ಲಿಕೆಯಾಗಿರುವ ವರದಿಯಲ್ಲಿ, ಈ ಪ್ರಕರಣಕ್ಕೆ ಸಂಬಂಧಿಸಿದ ಕಡತಗಳಲ್ಲಿ ಕೆಲ ಮುಖ್ಯವಾದ ಟಿಪ್ಪಣಿಗಳ ಹಾಳೆಗಳನ್ನು ಕಿತ್ತು ಹಾಕಲಾಗಿದೆ. ಈ ಮೂಲಕ ಸಾಕ್ಷ್ಯನಾಶಪಡಿಸುವ ಸಾಧ್ಯತೆಯಿದೆ ಎಂದು ನ್ಯಾಯಪೀಠಕ್ಕೆ ತಿಳಿಸಿದರು.
ಇದೇ ವೇಳೆ ಎಸಿಬಿ ಪರ ವಕೀಲರು ಟಿಪ್ಪಣಿ ಹಾಳೆಗಳನ್ನು ಹರಿದು ಹಾಕಿರುವುದಕ್ಕೆ ಸಂಬಂದಧಿಸಿದ ಕಡತವನ್ನು ನ್ಯಾಯಪೀಠಕ್ಕೆ ಸಲ್ಲಿಸಿದರು. ಒಂದೇ ಆರೋಪಕ್ಕೆ ಸಂಬಂಧಿಸಿದಂತೆ ಹಲವು ಅಕ್ರಮಗಳ ಕುರಿತು ಪ್ರತ್ಯೇಕವಾಗಿಯೇ ಎಫ್ಐಆರ್ ದಾಖಲಿಸಿಕೊಳ್ಳಲು ಅವಕಾಶವಿದೆ ಎಂದು ಸುಪ್ರೀಂಕೋರ್ಟ್‌ನ ಕೆಲ ತೀರ್ಪುಗಳನ್ನು ಉಲ್ಲೇಖೀಸಿದ ರವಿವರ್ಮಕುಮಾರ್, ಅರ್ಜಿದಾರ ಯಡಿಯೂರಪ್ಪ,
ಡಾ.ಶಿವರಾಮ ಕಾರಂತ ಬಡವಾಣೆಯ ಭೂ ಸ್ವಾಧೀನ ಪ್ರಕ್ರಿಯೆಯಿಂದ 20 ಮಂದಿಯ ಜಮೀನು ಕೈ ಬಿಡುವಂತೆ, ಬೇರೆ ಬೇರೆ ಸರ್ವೇ ನಂಬರ್‌ಗಳಲ್ಲಿರುವ ಜಮೀನುಗಳನ್ನು ಭೂ ಸ್ವಾಧೀನ ಪ್ರಕ್ರಿಯೆಯಿಂದ ಕೈ ಬಿಡುವಂತೆ ಪ್ರತ್ಯೇಕವಾಗಿಯೇ ಆದೇಶ ನೀಡಿರುವ ಆರೋಪವಿದೆ. ಹೀಗಾಗಿ ಪ್ರತ್ಯೇಕವಾಗಿಯೇ ಎಫ್ಐಆರ್‌ಗಳನ್ನು ದಾಖಲಿಸಿ ಎಸಿಬಿ ತನಿಖೆ ನಡೆಸಬೇಕಿದೆ.
ಸದ್ಯ ಎಸಿಬಿ ದಾಖಲಿಸಿರುವ ಎರಡು ಎಫ್ಐಆರ್‌ಗಳಿಗೆ ತಡೆಯಾಜ್ಞೆ ನೀಡಬಾರದು ಎಂದು ಕೋರಿದರು. ಎಸಿಬಿ ಪರ ವಕೀಲರ ವಾದ ಆಲಿಸಿದ ನ್ಯಾಯಪೀಠ, ಅರ್ಜಿದಾರ ಬಿ.ಎಸ್.ಯಡಿಯೂರಪ್ಪ ಅವರನ್ನು ಬಂಧಿಸದಂತೆ ನೀಡಲಾಗಿರುವ ಮಧ್ಯಂತರ ಆದೇಶವನ್ನು ವಿಸ್ತರಿಸಿ ಅರ್ಜಿ ವಿಚಾರಣೆಯನ್ನು ಶುಕ್ರವಾರಕ್ಕೆ ( ಸೆ.8) ಮುಂದೂಡಿತು.
ಕಪೋಲ ಕಲ್ಪಿತ ಕಾರಣ
ಯಡಿಯೂರಪ್ಪ ಅವರ ವಿರುದ್ಧ ಎಸಿಬಿ ದಾಖಲಿಸಿರುವ ಎರಡನೇ ಎಫ್ಐಆರ್ ಸಂಬಂಧ ಆಕ್ಷೇಪಣಾ ವಾದ ಮಂಡಿಸಿದ ಪ್ರೊ. ರವಿವರ್ಮಕುಮಾರ್, ಬಿ.ಹನುಮಂತಪ್ಪ ಎಂಬುವವರು ಸಲ್ಲಿಸಿದ್ದ ಅರ್ಜಿ ಅನ್ವಯ ಯಶವಂತಪುರ ಹೋಬಳಿ ಸೋಮಶೆಟ್ಟಿ ಗ್ರಾಮದ ಸರ್ವೇ ನಂಬರ್ 22/2ರಲ್ಲಿರುವ 18ಗುಂಟೆ ಹಾಗೂ ಸರ್ವೇ ನಂಬರ್ 24/1ರಲ್ಲಿರುವ ಜಮೀನನ್ನು ಭೂ ಸ್ವಾಧೀನ ಪ್ರಕ್ರಿಯೆಯಿಂದ ಕೈ ಬಿಡುವಂತೆ ಯಡಿಯೂರಪ್ಪ ಸೂಚಿಸಿದ್ದಾರೆ.
ಇದಕ್ಕೆ ಅರ್ಜಿದಾರರ ಸ್ವಂತ ಭೂಮಿ ಅದೊಂದೇ ಆಗಿದ್ದು, ಮನೆಯೂ ಅದೇ ಜಮೀನಿನಲ್ಲಿದೆ ಹೀಗಾಗಿ ಮಾನವೀಯತೆ ಆಧಾರದಲ್ಲಿ ಭೂ ಸ್ವಾಧೀನ ಪ್ರಕ್ರಿಯೆ ಮಾಡಲು ಸೂಚಿಸಲಾಗಿದೆ ಎಂದು ಕಪೋಲಕಲ್ಪಿತ ಕಾರಣ ನೀಡಿದ್ದಾರೆ ಎಂದು ನ್ಯಾಯಪೀಠಕ್ಕೆ ತಿಳಿಸಿದರು.