ಬೆಂಗಳೂರು: ದೇಶಕ್ಕಾಗಿ ತಮ್ಮ ಪ್ರಾಣ ತ್ಯಾಗ ಮಾಡಿದ ಮೇಜರ್ ಅಕ್ಷಯ್ ಗಿರೀಶ್ ಕುಮಾರ್ ಅವರು ಯುವ ಪೀಳಿಗೆಗೆ ಮಾದರಿ ಎಂದು ಮೇಯರ್ ಗಂಗಾಂಬಿಕೆ ಅಭಿಪ್ರಾಯಪಟ್ಟರು. ಯಲಹಂಕ ಉಪನಗರದ ವಾರ್ಡ್‌ನ 13ನೇ “ಎ’ ಮುಖ್ಯರಸ್ತೆ ಹಾಗೂ 3ನೇ ಅಡ್ಡರಸ್ತೆಯ “ಎ’ ಸೆಕ್ಟರ್ ರಸ್ತೆಗೆ ಮೇಜರ್ ಅಕ್ಷಯ್ ಗಿರೀಶ್ ಕುಮಾರ್ ರಸ್ತೆ ಎಂದು ನಾಮಕರಣ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ಅಕ್ಷಯ್ ಗಿರೀಶ್ ಅವರು ದೇಶಕ್ಕಾಗಿ ತಮ್ಮ ಪ್ರಾಣತ್ಯಾಗ ಮಾಡಿದ್ದಾರೆ. ಆ ಹಿನ್ನೆಲೆಯಲ್ಲಿ ಅವರ ಹೆಸರು ಶಾಶ್ವತವಾಗಿ ಉಳಿಯಬೇಕೆಂಬ ಉದ್ದೇಶದಿಂದ ಪ್ರಮುಖ ರಸ್ತೆಗೆ ಅವರ ಹೆಸರನ್ನು ನಾಮಕರಣ ಮಾಡಲಾಗಿದೆ ಎಂದು ಹೇಳಿದರು.
ಶಾಸಕ ಎಸ್.ಆರ್.ವಿಶ್ವನಾಥ್ ಮಾತನಾಡಿ, ದೇಶದ ರಕ್ಷಣೆಗೆ ಹೋರಾಡಿ ಹುತಾತ್ಮರಾದ ಮೇಜರ್ ಅಕ್ಷಯ್ ಗಿರೀಶ್ ಕುಮಾರ್ ಅವರ ಸಾಧನೆ ಸ್ಮರಣೀಯ. ಯಲಹಂಕದ ಪ್ರಮುಖ ರಸ್ತೆಗೆ ಅವರ ಹೆಸರು ನಾಮಕರಣ ಮಾಡಬೇಕೆಂಬ ಈ ಭಾಗದ ಜನರ ಆಸೆ ಈಡೇರಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಹುತಾತ್ಮ ಅಕ್ಷಯ್ ಅವರ ತಂದೆ ಗಿರೀಶ್ ಕುಮಾರ್ ಮಾತನಾಡಿ, ಯಲಹಂಕ ಉಪನಗರದ ಪ್ರಮುಖ ರಸ್ತೆಗೆ ಪುತ್ರನ ಹೆಸರನ್ನು ನಾಮಕರಣ ಮಾಡಿರುವುದಕ್ಕೆ ಬಿಬಿಎಂಪಿಗೆ ಧನ್ಯವಾದ ಅರ್ಪಿಸುತ್ತೇನೆ. ದೇಶಕ್ಕಾಗಿ ಮಡಿದ ವೀರ ಯೋಧರ ಹೆಸರನ್ನು ರಸ್ತೆಗಳಿಗೆ ನಾಮಕರಣ ಮಾಡುವುದರಿಂದ ದೇಶ ಸೇವೆ ಮಾಡಲು ಯುವಕರಿಗೆ ಪ್ರೇರಣೆ ನೀಡಿದಂತಾಗುತ್ತದೆ ಎಂದು ಎಂದರು.
ಉಪಮೇಯರ್ ಭದ್ರೇಗೌಡ, ಪಾಲಿಕೆ ಸದಸ್ಯ ಎಂ.ಸತೀಶ್, ಬಿಜೆಪಿ ಮುಖಂಡ ಎ.ಸಿ.ಮುನಿಕೃಷ್ಣಪ್ಪ, ಇತರರು ಹಾಜರಿದ್ದರು.