ನವದೆಹಲಿ:ಇಬ್ಬರು ಉಗ್ರರೊಂದಿಗೆ ನಾಲ್ವರು ನಾಗರಿಕರು ಭದ್ರತಾ ಪಡೆಗಳ ಗುಂಡಿಗೆ ಬಲಿಯಾಗಿರುವ ಶೋಪಿಯಾನ್ ಫೈರಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜಮ್ಮು ಕಾಶ್ಮೀರ ಸರಕಾರ ಯೂ ಟರ್ನ್ ಹೊಡೆದಿದ್ದು, ಈ ಪ್ರಕರಣದ ಎಫ್ಐಆರ್ ನಲ್ಲಿ ಮೇಜರ್ ಆದಿತ್ಯಾ ಅವರ ಹೆಸರನ್ನು ಉಲ್ಲೇಖಿಸಿಲ್ಲ ಎಂದು ಸುಪ್ರೀಂಕೋರ್ಟ್ ಗೆ ತಿಳಿಸಿದೆ.
ತನ್ನ ಪುತ್ರ ಮೇಜರ್ ಆದಿತ್ಯಾ ವಿರುದ್ಧ ದಾಖಲಾಗಿರುವ ಎಫ್ ಐಆರ್ ಅನ್ನು ವಜಾಗೊಳಿಸಬೇಕೆಂದು ಕೋರಿ ತಂದೆ ನಿವೃತ್ತ ಕರ್ನಲ್ ಕರ್ಮಾವೀರ್ ಸಿಂಗ್ ಅವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ಸುಪ್ರೀಂಕೋರ್ಟ್ ನಡೆಸಿದೆ.
ಜಮ್ಮು ಕಾಶ್ಮೀರ ಸರಕಾರ ಸುಪ್ರೀಂಕೋರ್ಟ್ ಗೆ ಸಲ್ಲಿಸಿರುವ ಸ್ಟೇಟಸ್ ರಿಪೋರ್ಟ್ (ಸ್ಥಿತಿಗತಿ ವಿವರ ವರದಿ)ನಲ್ಲಿ, ಶೋಪಿಯಾನ್ ಫೈರಿಂಗ್ ಪ್ರಕರಣದಲ್ಲಿ ದಾಖಲಿಸಿಕೊಂಡಿರುವ ಎಫ್ಐಆರ್ ನಲ್ಲಿ ಆರ್ಮಿ ಅಧಿಕಾರಿ(ಆದಿತ್ಯಾ) ಹೆಸರಿಲ್ಲ ಎಂದು ಹೇಳಿದೆ.
ಈ ಹಿನ್ನೆಲೆಯಲ್ಲಿ ಶೋಪಿಯಾನ್ ಫೈರಿಂಗ್ ಪ್ರಕರಣದ ತನಿಖೆಗೆ ಸುಪ್ರೀಂಕೋರ್ಟ್ ತ್ರಿಸದಸ್ಯ ಪೀಠ ತಡೆ ನೀಡಿದ್ದು, ಮುಂದಿನ ವಿಚಾರಣೆಯನ್ನು ಏಪ್ರಿಲ್ 24ಕ್ಕೆ ನಿಗದಿಪಡಿಸಿ ಮುಂದೂಡಿದೆ.
ಮೇಜರ್ ಆದಿತ್ಯಾ ಅವರು ಸೇನಾ ಅಧಿಕಾರಿ. ಹೀಗಾಗಿ ಜಮ್ಮು ಕಾಶ್ಮೀರ ಪೊಲೀಸರು ಅವರನ್ನು ಸಾಧಾರಣಾ ಕ್ರಿಮಿನಲ್ಸ್ ರೀತಿ ಪರಿಗಣಿಸಬಾರದು ಎಂದು ಸುಪ್ರೀಂಕೋರ್ಟ್ ಸೂಚನೆ ನೀಡಿದೆ.