ಬೆಂಗಳೂರು: ಅನಾರೋಗ್ಯ ದಿಂದ ಬಳಲುತ್ತಿದ್ದ “ಮೆಜೆಸ್ಟಿಕ್’ ಚಿತ್ರ ಖ್ಯಾತಿಯ ನಿರ್ದೇಶಕ ಪಿ.ಎನ್.ಸತ್ಯ (45) ಶನಿವಾರ ಸಂಜೆ ನಿಧನರಾದರು. ಒಂದು ವರ್ಷದಿಂದ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಸತ್ಯ ಅವರು, ಇತ್ತೀಚೆಗೆ ಚಿಕಿತ್ಸೆ ಪಡೆದು, ಚೇತರಿಸಿಕೊಂಡಿದ್ದರು.
ಎರಡು ವಾರದಿಂದ ನಾಗರಬಾವಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದ ಹಿನ್ನೆಲೆಯಲ್ಲಿ ಶುಕ್ರವಾರ ಅವರನ್ನು ಮನೆಗೆ ಕರೆದುಕೊಂಡು ಬರಲಾಗಿತ್ತು. ಶನಿವಾರ ಸಂಜೆ ರಕ್ತದೊತ್ತಡ ಕಡಿಮೆಯಾಗಿ ಅವರು ಕೊನೆಯುಸಿರೆಳೆದಿದ್ದಾರೆ. ಮೃತರಿಗೆ ಪತ್ನಿ ಹಾಗೂ ಇಬ್ಬರು ಮಕ್ಕಳಿದ್ದಾರೆ.
2002ರಲ್ಲಿ “ಮೆಜೆಸ್ಟಿಕ್’ ಚಿತ್ರದ ಮೂಲಕ ನಿರ್ದೇಶಕರಾದ ಪಿ.ಎನ್.ಸತ್ಯ, ಆ ಚಿತ್ರದ ಮೂಲಕ ದರ್ಶನ್ ಅವರನ್ನೂ ನಾಯಕರನ್ನಾಗಿ ಚಿತ್ರರಂಗಕ್ಕೆ ಪರಿಚಯಿಸಿದ್ದರು. ಆ ಚಿತ್ರ ಕನ್ನಡ ಚಿತ್ರರಂಗದಲ್ಲಿ ದೊಡ್ಡ ಯಶಸ್ಸು ಪಡೆಯಿತು. ಆ ಬಳಿಕ ದರ್ಶನ್ ಅವರೊಂದಿಗೆ “ದಾಸ’, “ಸರ್ದಾರ’, “ಶಾಸ್ತ್ರೀ’, “ತಂಗಿಗಾಗಿ’ ಚಿತ್ರಗಳನ್ನು ನಿರ್ದೇಶಿಸಿದ್ದರು. ಆ ನಂತರ ಸುದೀಪ್ ಅವರಿಗೆ “ಗೂಳಿ’, ಶಿವರಾಜಕುಮಾರ್ ಜತೆ “ಡಾನ್’, “ಹ್ಯಾಟ್ರಿಕ್·ಹೊಡಿಮಗ’ ಚಿತ್ರಗಳನ್ನು ಸತ್ಯ ನಿರ್ದೇಶಿಸಿದ್ದರು. ದುನಿಯಾ ವಿಜಯ್‌ಗೆ “ಶಿವಾಜಿ ನಗರ’, ಆದಿತ್ಯ ನಟನೆಯಲ್ಲಿ “ಬೆಂಗಳೂರು ಅಂಡರ್‌ವರ್ಲ್ಡ್’ ಚಿತ್ರಕ್ಕೂ ಸತ್ಯ ನಿರ್ದೇಶನವಿತ್ತು.
ಪಿ.ಎನ್.ಸತ್ಯ, ನಿರ್ದೇಶನದೊಂದಿಗೆ ನಟನೆಯಲ್ಲೂ ತೊಡಗಿದ್ದರು. ಸಾಕಷ್ಟು ಚಿತ್ರಗಳಲ್ಲಿ ವಿವಿಧ ಪಾತ್ರ ನಿರ್ವಹಿಸಿದ್ದ ಪಿ.ಎನ್.ಸತ್ಯ, “ಪಾಗಲ್’ ಎಂಬ ಚಿತ್ರದಲ್ಲಿ ನಾಯಕರಾಗಿ ನಟಿಸಿದ್ದರು. ಬಹುತೇಕ ಸ್ಟಾರ್ ನಟರೊಂದಿಗೆ ಚಿತ್ರಗಳನ್ನು ನಿರ್ದೇಶಿಸಿದ್ದ ಖ್ಯಾತಿ ಇವರದ್ದಾಗಿತ್ತು. ಸತ್ಯ ಕನ್ನಡ ಚಿತ್ರರಂಗದಲ್ಲಿ ಆ್ಯಕ್ಷನ್ ನಿರ್ದೇಶಕ ಎಂದೇ ಗುರುತಿಸಿಕೊಂಡಿದ್ದರು. ಅವರ ನಿರ್ದೇಶನದ ಎಲ್ಲ ಚಿತ್ರಗಳು ಪಕ್ಕಾ ಆ್ಯಕ್ಷನ್ ಚಿತ್ರಗಳು ಎಂಬುದು ವಿಶೇಷ. ಬಸವೇಶ್ವರ ನಗರದ ಅವರ ಸಹೋದರಿ ಮನೆಯಲ್ಲಿ ಸತ್ಯ ಅವರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಭಾನುವಾರ (ಇಂದು) ಬನಶಂಕರಿಯ ಚಿತಾಗಾರದಲ್ಲಿ ಅಂತ್ಯಕ್ರಿಯೆ ನೆರವೇರಲಿದೆ.