ಸೃಜನ್ ಲೋಕೇಶ್ ನಿರ್ಮಾಣದ ಜೊತೆಗೆ ನಾಯಕರಾಗಿ ನಟಿಸಿರುವ “ಎಲ್ಲಿದ್ದೇ ಇಲ್ಲಿ ತನಕ’ ಚಿತ್ರ ಇಂದು ಬಿಡುಗಡೆಯಾಗುತ್ತಿದೆ. ಈಗಾಗಲೇ ಚಿತ್ರದ ಟ್ರೇಲರ್, ಹಾಡುಗಳು ಹಿಟ್ ಆಗಿರುವುದರಿಂದ ಚಿತ್ರ ಕೂಡಾ ಹಿಟ್ ಆಗುವ ವಿಶ್ವಾಸ ಚಿತ್ರತಂಡಕ್ಕಿದೆ. ಈ ಚಿತ್ರದಲ್ಲಿ ಸೃಜನ್‌ಗೆ ನಾಯಕಿಯಾಗಿ ಹರಿಪ್ರಿಯಾ ನಟಿಸಿದ್ದಾರೆ. ಉಳಿದಂತೆ ಗಿರಿಜಾ ಲೋಕೇಶ್, ತಾರಾ, ತಬಲ ನಾಣಿ ಸೇರಿದಂತೆ ಅನೇಕರು ನಟಿಸಿದ್ದಾರೆ.
ಈ ಚಿತ್ರವನ್ನು ತೇಜಸ್ವಿ ನಿರ್ದೇಶಿಸಿದ್ದಾರೆ. ಅವರ ಪ್ರಕಾರ, ಚಿತ್ರ ಎಲ್ಲಾ ವರ್ಗದವರಿಗೂ ಇಷ್ಟವಾಗುತ್ತದೆ. ಜೊತೆಗೆ ತಮ್ಮದೇ ನಿರ್ಮಾಣ ಎಂಬ ಕಾರಣಕ್ಕೆ ಸೃಜನ್ ಯಾವುದಕ್ಕೂ ರಾಜಿಯಾಗುತ್ತಿರಲಿಲ್ಲ. ಕಥೆಗೆ ಏನು ಬೇಕೋ ಅದನ್ನು ನೀಡುವ ಮೂಲಕ ಒಂದು ಗುಣಮಟ್ಟದ ಸಿನಿಮಾ ಮಾಡಲಾಗಿದೆ. ಈ ಚಿತ್ರದ ನಂತರ ಚಿತ್ರದ ಶೀರ್ಷಿಕೆಯಂತೆ ಸೃಜನ್‌ರನ್ನು ಜನರು, “ಎಲ್ಲಿದ್ದೇ ಇಲ್ಲಿ ತನಕ’ ಎಂದು ಪ್ರಶ್ನಿಸುತ್ತಾರೆ ಎಂದು ಚಿತ್ರದ ಬಗ್ಗೆ ಮಾತನಾಡಿದರು.
ಚಿತ್ರದಲ್ಲಿ ನಟಿಸಿರುವ ಗಿರಿಜಾ ಲೋಕೇಶ್, ಚಿಕ್ಕವನಿದ್ದಾಗ ಸೃಜನ್ ನಮಗೆ ಸಾಕಷ್ಟು ಕಷ್ಟ ಕೊಟ್ಟಿದ್ದಾನೆ. ಶೂಟಿಂಗ್ ಹೋಗಲು ಬಿಡುತ್ತಿರಲಿಲ್ಲ. ಎಂಥ ಮಗು ಹುಟ್ಟಿತು ಎಂದು ಬೇಸರಿಸಿಕೊಂಡಿದ್ದೂ ಉಂಟು. ಇಂದು ಈ ಮಟ್ಟಕ್ಕೆ ಬೆಳೆದಿದ್ದಾನೆ ಎಂಬುದು ಖುಷಿಯ ವಿಚಾರ. ಕೊನೆ ತನಕ ಚಿತ್ರರಂಗದಲ್ಲೇ ಇರು ಎಂದಷ್ಟೇ ಅವನಿಗೆ ಹೇಳಬಲ್ಲೆ ಎನ್ನುತ್ತಾ ಚಿತ್ರಕ್ಕೆ ಶುಭ ಕೋರಿದರು. ನಟಿ ತಾರಾ ಕೂಡಾ ಚಿತ್ರದಲ್ಲಿ ನಟಿಸಿದ್ದಾರೆ. “ನಾನು ಸಿನಿಮಾ ನೋಡಿದ್ದೇನೆ. ಚೆನ್ನಾಗಿ ಮೂಡಿಬಂದಿದೆ. ಸರಳ, ಸುಂದರ ಕಥೆ. ಇಡೀ ಫ್ಯಾಮಿಲಿ ಜೊತೆಯಾಗಿ ಕುಳಿತು ನೋಡಬಹುದಾದ ಸಿನಿಮಾ. ಸೃಜನ್‌ರಲ್ಲಿ ಸಾಕಷ್ಟು ಒಳ್ಳೆಯ ಗುಣಗಳು, ಭವಿಷ್ಯದ ಯೋಚನೆಗಳಿವೆ’ ಎನ್ನುತ್ತಾ ಚಿತ್ರಕ್ಕೆ ಶುಭ ಕೋರಿದರು. ನಾಯಕಿ ಹರಿಪ್ರಿಯಾಗೆ ಈ ಚಿತ್ರ ದೊಡ್ಡ ಹಿಟ್ ಆಗುವ ವಿಶ್ವಾಸವಿದೆ. ಅದಕ್ಕೆ ಕಾರಣ ಸೃಜನ್ ಅವರ ಶ್ರದ್ಧೆ, ಪ್ರಾಮಾಣಿಕತೆ. “ಸೃಜನ್‌ಗಿರುವ ಶ್ರದ್ಧೆ, ಪ್ರಾಮಾಣಿಕತೆಯಿಂದ ಈ ಸಿನಿಮಾಕ್ಕೆ ಒಳ್ಳೆಯದಾಗುತ್ತದೆ. ನನ್ನ ಪಾತ್ರ ಕೂಡಾ ಹೊಸತನದಿಂದ ಕೂಡಿದೆ’ ಎಂದರು. ಉಳಿದಂತೆ ಚಿತ್ರದಲ್ಲಿ ನಟಿಸಿದ ಹಿರಿಯ ನಟ ಎಂ.ಎಸ್ ಉಮೇಶ್, ತಬಲ ನಾಣಿ ತಮ್ಮ ಅನುಭವ ಹಂಚಿಕೊಂಡರು. ಚಿತ್ರಕ್ಕೆ ವೇಣು ಅವರ ಛಾಯಾಗ್ರಹಣವಿದೆ.