Advertisement

ಮೆಕ್ಕೆಜೋಳ ಬೆಳೆಗಾರರಿಗೆ 5 ಸಾವಿರ ರೂ. ಸಹಾಯಧನ

03:22 PM Jun 09, 2020 | mahesh |

ದಾವಣಗೆರೆ: 2019-20ನೇ ಸಾಲಿನಲ್ಲಿ ಮೆಕ್ಕೆಜೋಳ ಬೆಳೆದು ಲಾಕ್‌ಡೌನ್‌ ಸಮಸ್ಯೆಯಿಂದ ಸಂಕಷ್ಟಕ್ಕೆ  ಒಳಗಾದ ರೈತರಿಗೆ ನೇರ ನಗದು ವರ್ಗಾವಣೆಮೂಲಕ 5 ಸಾವಿರ ರೂ.  ಸಹಾಯಧನ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಮಹಾಂತೇಶ್‌ ಬೀಳಗಿ ತಿಳಿಸಿದರು.
ಸೋಮವಾರ ತಮ್ಮ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕೃಷಿ ಇಲಾಖೆ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಲಾಕ್‌ಡೌನ್‌ನಿಂದಾಗಿ ಮಕ್ಕೆಜೋಳ ಬೆಳೆ ಬೇಡಿಕೆ ಕಳೆದುಕೊಂಡಿತ್ತು. ರೈತರು ಸಂಕಷ್ಟಕ್ಕೆ ಒಳಗಾಗಿದ ಹಿನ್ನೆಲೆಯಲ್ಲಿ ಆರ್ಥಿಕ ನೆರವು ನೀಡುವುದು ಅವಶ್ಯಕವಾಗಿದೆ ಎಂದರು. ಯೋಜನೆಯ ಕುರಿತು ಜಿಲ್ಲಾ ಮಟ್ಟದಲ್ಲಿ ವ್ಯಾಪಕವಾಗಿ ಪ್ರಚಾರ ಕೈಗೊಳ್ಳಬೇಕು. ಯೋಜನೆ ಅನುಷ್ಠಾನದಲ್ಲಿ ಹೋಬಳಿ ಹಾಗೂ ತಾಲೂಕು ಮಟ್ಟದಲ್ಲಿ ನಿಗದಿತ ಸಮಯದೊಳಗೆ ಸಮರ್ಪಕವಾಗಿ ಕಾರ್ಯನಿರ್ವಹಿಸಬೇಕು. ಸಂಬಂಧಪಟ್ಟ ವಿವಿಧ ಇಲಾಖೆಗಳೊಂದಿಗೆ ಸಮನ್ವಯತೆಯೊಂದಿಗೆ ಹೋಬಳಿ ಮಟ್ಟದಲ್ಲಿ ಹೆಚ್ಚಿನ ತಂಡ ರಚಿಸುವ ಮೂಲಕ ಕ್ಷೇತ್ರ ತಪಾಸಣೆ ತ್ವರಿತವಾಗಿ ಕೈಗೊಳ್ಳುವ ಬಗ್ಗೆ ಖಾತ್ರಿಪಡಿಸಿಕೊಳ್ಳಬೇಕು ಎಂದು ಸೂಚಿಸಿದರು. ತಾಲೂಕುಗಳಿಂದ ಪರಿಹಾರ ನೀಡಲು ತಯಾರಿಸಿರುವ ರೈತರ ಪಟ್ಟಿಯನ್ನು ಪರಿಹಾರ ನೀಡುವ ಸಲುವಾಗಿ ಅನುಮೋದಿಸಬೇಕು. ಕಾಲಕಾಲಕ್ಕೆ ಪ್ರಗತಿ ಪರಿಶೀಲನಾ ಸಭೆ ನಡೆಸಿ ನಿಗತ ಅವಧಿಯಲ್ಲಿ ಯೋಜನೆಯಡಿ ಆರ್ಥಿಕ ಹಾಗೂ ಭೌತಿಕ ಗುರಿ ಸಾಧಿಸುವ ನಿಟ್ಟಿನಲ್ಲಿ ಕ್ರಮ ವಹಿಸಬೇಕು ಎಂದರು.

Advertisement

ರೈತರಿಗೆ ಅಲ್ಪಾವಧಿ ಆರ್ಥಿಕ ನೆರವು ನೀಡಲು ಇ-ಆಡಳಿತದಿಂದ 2019-20ನೇ ಸಾಲಿನಲ್ಲಿ ಮೆಕ್ಕೆಜೋಳ ಬೆಳೆದ ರೈತರಿಗೆ ಬೆಳೆ ಸಮೀಕ್ಷೆ ತಂತ್ರಾಂಶದಲ್ಲಿ ಈಗ ದಾಖಲಾಗಿರುವ ಬೆಳೆ
ವಿವರಗಳ ಆಧಾರದ ಮೇರೆಗೆ ಪಾವತಿಸಬೇಕು. ಜೊತೆಗೆ ಬೆಳೆ ಸಮೀಕ್ಷೆಯಲ್ಲಿ ಇರುವಂತೆ ಮಕ್ಕೆಜೋಳ ಬೆಳೆಗಾರರ ಪಟ್ಟಿಯನ್ನು ಗ್ರಾಮ ಪಂಚಾಯತಿ, ರೈತ ಸಂಪರ್ಕ ಕೆಂದ್ರ ಹಾಗೂ ತಾಲೂಕು ಕಚೇರಿ ನಾಪಫಲಕದಲ್ಲಿ ಪ್ರದರ್ಶಿಸಬೇಕು. ಬೆಳೆ ಸಮೀಕ್ಷೆಯಲ್ಲಿ ದಾಖಲಾಗದಿರುವ ರೈತರಿಂದ ಅರ್ಜಿ ಪಡೆದು ಹೋಬಳಿ ಮಟ್ಟದಲ್ಲಿ ಕೃಷಿ ಅಧಿಕಾರಿ, ಸಹಾಯಕ ಅಧಿಕಾರಿ ಹಾಗೂ
ಗ್ರಾಮಲೆಕ್ಕಿಗರನ್ನು ಒಳಗೊಂಡ ತಂಡವನ್ನು ರಚಿಸಿ ಪರಿಶೀಲಿಸಬೇಕು. ಸ್ಥಳೀಯವಾಗಿ ಪಂಚನಾಮೆ ಮಾಡಿಕೊಂಡು ಪರಿಹಾರ ವಿತರಿಸಲು ತಾಲೂಕು ಮಟ್ಟದ ಸಮಿತಿಗೆ ಶಿಫಾರಸು ಮಾಡಬೇಕು ಎಂದು ತಿಳಿಸಿದರು. ಕೃಷಿ ಇಲಾಖೆ ಜಂಟಿ ನಿರ್ದೇಶಕ ಶರಣಪ್ಪ ಮುದಗಲ್‌, ಡಾ| ಹಂಸವೇಣಿ ಇತರರು ಇದ್ದರು.

ರೈತರ ಸಂಕಷ್ಟಕ್ಕೆ ಸ್ಪಂದಿಸಿ
ಲಾಕ್‌ಡೌನ್‌ ವೇಳೆ ಅಧಿಕಾರಿಗಳು ರೈತರ ಸಂಕಷ್ಟಕ್ಕೆ ಸ್ಪಂದಿಸಬೇಕು. ಈ ಬಾರಿ ಮಳೆ ಜಾಸ್ತಿ ಬರಬಹುದು. ಹಾಗಾಗಿ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಬೇಕು. ಕೊರೊನಾ
ಸಂದರ್ಭದಲ್ಲಿ ಕಾರ್ಯ ನಿರ್ವಹಿಸಿದಂತೆ ಪ್ರವಾಹ ಬಂದರೆ ಕೊರೊನಾ ಜೊತೆ ಜೊತೆಗೆ ಕೆಲಸ ಮಾಡಲು ಸನ್ನದ್ಧರಾಗಬೇಕು. ಯಾವುದೇ ರೀತಿಯ ಪ್ರಾಣ ಹಾನಿ, ಜೀವ
ಹಾನಿ ಆಗದಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿಯವರು ಸೂಚಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next