Advertisement

ಬಾಂಗ್ಲಾದೇಶಕ್ಕೆ ರಫ್ತಾಯ್ತು ಮೆಕ್ಕೆ ಜೋಳ

03:29 PM Nov 20, 2020 | Suhan S |

ಬಾಗಲಕೋಟೆ: ಕೋವಿಡ್ ಹಾಗೂ ಪ್ರವಾಹದ ಸಂಕಷ್ಟದಲ್ಲೂ ರೈತರು ಕಷ್ಟಪಟ್ಟು ಬೆಳೆದ ಜಿಲ್ಲೆಯ ಮೆಕ್ಕೆಜೋಳ ಪಕ್ಕದ ಬಾಂಗ್ಲಾದೇಶಕ್ಕೆ ಸಾಗಾಟ ಮಾಡಲಾಗಿದೆ.

Advertisement

ಜಿಲ್ಲೆಯ ಸುಮಾರು 12,853 ರೈತರು ಮೆಕ್ಕೆಜೋಳ ಬೆಳೆದಿದ್ದು, ಜಿಲ್ಲೆಯ ಕೃಷಿ ಉತ್ಪನ್ನ ಮಾರುಕಟ್ಟೆ ಮೂಲಕ ಖರೀದಿ ಮಾಡಲಾಗಿದೆ. ಜಿಲ್ಲೆಯ ವರ್ತಕರು ರೈತರಿಂದ ಖರೀದಿಸಿದ್ದ ಸುಮಾರು 25 ಸಾವಿರ ಕ್ವಿಂಟಲ್‌ ಮೆಕ್ಕೆಜೋಳವನ್ನು ಗುರುವಾರ ಗೂಡ್ಸ್‌ ರೈಲಿನ ಮೂಲಕ ಬಾಂಗ್ಲಾದೇಶಕ್ಕೆ ಕಳುಹಿಸಲಾಯಿತು. ಸುಮಾರು 42 ಬೋಗಿಗಳಲ್ಲಿ ತುಂಬಿದ್ದ 25 ಸಾವಿರ ಕ್ವಿಂಟಲ್‌ ಮೆಕ್ಕೆಜೋಳ ರಫ್ತು ಕಾರ್ಯಕ್ಕೆ ಬಾಗಲಕೋಟೆ ಶಾಸಕ ಡಾ| ವೀರಣ್ಣ ಚರಂತಿಮಠ ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ಅವರು, ನಗರದ ಎಪಿಎಂಸಿ ವರ್ತಕರು ರೈತರಿಂದ ಖರೀದಿಸಿದ್ದ 2500 ಟನ್‌ ಮೆಕ್ಕೆಜೋಳವನ್ನು 42ಬೋಗಿಗಳ ಗೂಡ್ಸ್‌ ರೈಲಿನಲ್ಲಿ ಬಾಗಲಕೋಟೆಯಿಂದ ನೇರವಾಗಿ ಬಾಂಗ್ಲಾದೇಶಕ್ಕೆ ರಫ್ತು ಮಾಡಿದ್ದಾರೆ. ಗೂಡ್ಸ್‌ ರೈಲಿನ ಬಾಡಿಗೆ ಹಣ 75 ಲಕ್ಷವನ್ನು ರೈಲ್ವೆ ಇಲಾಖೆಗೆ ಪಾವತಿಸಿದ್ದಾರೆ. ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿದ್ದರಿಂದ ರೈತರು ಅತ್ಯುತ್ತಮ ಗುಣಮಟ್ಟದ ಮೆಕ್ಕೆಜೋಳ ಬೆಳೆದಿದ್ದಾರೆ. ಸದ್ಯ ಉತ್ತಮ ಬೆಲೆ ಕೂಡ ಸಿಕ್ಕಿದೆ. ಬೇರೆ ದೇಶಕ್ಕೆ ಮೆಕ್ಕೆಜೋಳ ರಫ್ತು ಮಾಡುವುದರಿಂದ ಹೆಚ್ಚಿನ ಅನುಕೂಲವಾಗಲಿದೆ ಎಂದರು.

ತೀವ್ರ ಮಳೆ, ಪ್ರವಾಹ ಹಾಗೂ ಕೋವಿಡ್ ದಿಂದ ರೈತರು ಸಂಕಷ್ಟದಲ್ಲಿದ್ದರು. ಮೆಕ್ಕೆಜೋಳ ಬೆಳೆದ ರೈತರಿಗೆ ಸರ್ಕಾರವೂ ತಲಾ 5 ಸಾವಿರ ಸಹಾಯಧನ ನೀಡಿದೆ. ಇದರ ಜತೆಗೆ ಉತ್ತಮ ಗುಣಮಟ್ಟದ ಮೆಕ್ಕೆಜೋಳವನ್ನು ವಿದೇಶಕ್ಕೆ ರಫ್ತು ಮಾಡುತ್ತಿದ್ದು, ಬಾಗಲಕೋಟೆಯ ರೈತರ ಹಾಗೂ ವರ್ತಕರ ಸಂಘಟಿತ ವಿಶೇಷ ಸಾಧನೆ ಇದಾಗಿದೆ ಎಂದರು.

ಗೂಡ್ಸ್‌ ರೈಲಿನ 42 ಬೋಗಿಗಳಲ್ಲಿ 2500 ಟನ್‌ ಮೆಕ್ಕೆಜೋಳ ರಫ್ತು ಮಾಡಲಾಗಿದೆ. ಸುಮಾರು 350ರಿಂದ 400 ಕೋಟಿ ಮೌಲ್ಯದ ಮೆಕ್ಕೆಜೋಳ ಇದಾಗಿದೆ. ಅಲ್ಲದೇ ಈ ಬಾರಿ ಮಧ್ಯಪ್ರದೇಶ ಹಾಗೂ ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ಮಳೆಯಾಗಿದ್ದರಿಂದ ಅಲ್ಲಿ ಮೆಕ್ಕೆಜೋಳ ಹೆಚ್ಚಿನ ಪ್ರಮಾಣದಲ್ಲಿ ಬೆಳೆದಿಲ್ಲ. ಬಾಗಲಕೋಟೆ, ವಿಜಯಪುರ ಜಿಲ್ಲೆಗಳಲ್ಲಿ ಬೆಳೆದ ಮೆಕ್ಕೆಜೊಳಕ್ಕೆ ವಿದೇಶಗಳಲ್ಲಿ ಉತ್ತಮ ಬೆಲೆ ಇದೆ ಎಂದರು.

Advertisement

ವರ್ತಕ ವಿಶ್ವನಾಥ ಅಥಣಿ ಮಾತನಾಡಿ, ಜಿಲ್ಲೆಯ ರೈತರಿಂದ ಖರೀದಿಸಿದ ಮೆಕ್ಕೆಜೋಳನ್ನು ಪ್ರಯೋಗಾಲಯದಲ್ಲಿ ಪರೀಕ್ಷೆಗೆ ಒಳಪಡಿಸಲಾಗಿದೆ. ಗ್ರೇನ್‌ಸೈಜ್‌ನ ಮೆಕ್ಕೆಜೋಳಕ್ಕೆ ಭಾರೀ ಬೇಡಿಕೆ ಇದ್ದು, ಅದನ್ನೇ ಬಾಗಲಕೋಟೆಯಿಂದ ಪ್ರಥಮ ಬಾರಿಗೆ ಬಾಂಗ್ಲಾದೇಶಕ್ಕೆ ರಫ್ತು ಮಾಡಲಾಗುತ್ತಿದೆ ಎಂದರು.

ವರ್ತಕರೂ ಆಗಿರುವ ಬಿವಿವಿ ಸಂಘದ ಗೌರವ ಕಾರ್ಯದರ್ಶಿ ಮಹೇಶ ಅಥಣಿ, ವರ್ತಕರಾದ ರವಿ ಕುಮಟಗಿ, ಮುರಗೇಶ ನಾಗರಾಳ, ನಗರಸಭೆ ಪೌರಾಯುಕ್ತ ಮುನಿಶಾಮಪ್ಪ ಮುಂತಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next