ದಾವಣಗೆರೆ: ಮಳೆ ಕಣ್ಣಾಮುಚ್ಚಾಲೆಯಾಟ, ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿರುವ ಬೀಜ, ಗೊಬ್ಬರ, ಕ್ರಿಮಿನಾಶಕಗಳ ಬೆಲೆ, ಕೂಲಿಕಾರ್ಮಿಕರ ಕೊರತೆ…ಹೀಗೆ ಅನೇಕ ಸಂಕಷ್ಟಗಳ ನಡುವೆ ಮೆಕ್ಕೆಜೋಳ ಬೆಳೆದ ಅನ್ನದಾತರು ಪ್ರತಿ ಹಂಗಾಮಿನಲ್ಲಿ ಖರೀದಿ ಕೇಂದ್ರ ಪ್ರಾರಂಭಕ್ಕೆ ಒತ್ತಾಯಿಸಿ ಹೋರಾಟಕ್ಕೆ ಇಳಿಯುವುದು ಮಾತ್ರ ತಪ್ಪುತ್ತಲೇ ಇಲ್ಲ. ಅದು ಬಾರಿಯೂ ಮುಂದುವರಿದಿದೆ.
ಪ್ರತಿ ವರ್ಷ ಮುಂಗಾರು ಪ್ರಾರಂಭವಾಗುತ್ತಲೇ ಮಳೆಯ ಲೆಕ್ಕಾಚಾರ ಹಾಕುವ ರೈತರು, ಬಿತ್ತನೆಗೆ ಹದವಾದ ಮಳೆಬಂದರೆ ಬಿತ್ತನೆ ಮಾಡಬೇಕು. ಒಂದೊಮ್ಮೆ ಮಳೆಬರದೇ ಇದ್ದರೆ ಮುಗಿಲ ದರ್ಶನ ಮಾಡಬೇಕು.ಮಳೆಗಾಗಿ ಹರಕೆ, ದೇವರೆ ಮೊರೆ,ಪ್ರಾರ್ಥನೆ ಖಾಯಂ. ಹದವಾದ ಮಳೆಯಾಗಿ, ಕೈಗೆ ಒಳ್ಳೆಯ ಬೆಳೆ ಬಂದರೆ ಮುಕ್ತ ಮಾರುಕಟ್ಟೆಯಲ್ಲಿ ನಿರೀಕ್ಷಿತ ಬೆಲೆ ಸಿಗದಂತಾಗುವುದು ಸಾಮಾನ್ಯ.ಹತ್ತಾರು ಸಮಸ್ಯೆಗಳ ನಡುವೆಯೂ ಕಷ್ಟಪಟ್ಟು ಬೆಳೆದಂತಹ ಬೆಳೆಗೆ ಉತ್ತಮಧಾರಣೆ ದೊರೆತರೆ ರೈತರ ಜೀವನ ಹಸನು. ಇಲ್ಲದೇ ಹೋದರೆ ಬೇಸಾಯ ಎಂದರೆ ನೀ ಸಾಯ..ಮನೆ ಮಂದಿಯೆಲ್ಲಾ ಸಾಯ… ಎನ್ನುವ ನಾಣ್ಣುಡಿ ನೆನಪಿಸಿಕೊಂಡು ಮತ್ತೆ ಮುಂದಿನ ಹಂಗಾಮಿನವರೆಗೆ ಕಾಯಬೇಕಾದ ರೈತರ ನೆರವಿಗೆ ಸರ್ಕಾರಗಳು ಸಕಾಲದಲ್ಲಿನೆರವಿಗೆ ಬರುವುದೇ ಇಲ್ಲ ಎನ್ನುವುದಕ್ಕೆ ರೈತರು ಪ್ರತಿ ಹಂಗಾಮಿನ ನಂತರ ಖರೀದಿ ಕೇಂದ್ರ ಪ್ರಾರಂಭಕ್ಕೆ ಒತ್ತಾಯಿಸಿ ಹೋರಾಟಕ್ಕೆ ಇಳಿಯುವುದೇ ಸಾಕ್ಷಿ.
ಇತ್ತೀಚಿನ ವರ್ಷದಲ್ಲಿ ದಾಖಲೆ ಪ್ರಮಾಣದಲ್ಲಿ ಮೆಕ್ಕೆಜೋಳ ಬೆಳೆಯುವ ಮೂಲಕ “ಮೆಕ್ಕೆಜೋಳ ಕಣಜ’ ಎಂದೇ ಖ್ಯಾತಿವೆತ್ತಿರುವದಾವಣಗೆರೆ ಜಿಲ್ಲೆಯ ರೈತರು ಪ್ರತಿ ವರ್ಷ ಮೆಕ್ಕೆಜೋಳ ಖರೀದಿ ಕೇಂದ್ರ ಪ್ರಾರಂಭಿಸಿ ಎಂದು ಹೋರಾಟಕ್ಕೆಇಳಿಯುತ್ತಲೇ ಇದ್ದಾರೆ.ಜಿಲ್ಲಾಡಳಿತ ಮೆಕ್ಕೆಜೋಳ ಖರೀದಿ ಕೇಂದ್ರಪ್ರಾರಂಭಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುತ್ತಲೇ ಇರುತ್ತದೆ. ಆದರೆ ಕಳೆದ 6 ವರ್ಷದಿಂದ ಮೆಕ್ಕೆಜೋಳ ಖರೀದಿ ಕೇಂದ್ರ ಪ್ರಾರಂಭ ಮಾತ್ರಆಗಿಲ್ಲ. ಈ ವರ್ಷವೂ ರೈತರು ಮೆಕ್ಕೆಜೋಳಖರೀದಿ ಕೇಂದ್ರದ ಒತ್ತಾಯದ ಹೋರಾಟ ನಡೆಸುತ್ತಿದ್ದಾರೆ. ಜಿಲ್ಲಾಡಳಿತ ಸಹ ಪ್ರಸ್ತಾವನೆ ಸಲ್ಲಿಸಿದೆ. ಆದರೂ, ಖರೀದಿ ಕೇಂದ್ರ ಪ್ರಾರಂಭ ಆಗುವುದು ಸದ್ಯದ ಪರಿಸ್ಥಿತಿಯಲ್ಲಿ ಕಷ್ಟ ಸಾಧ್ಯ.ಎಪಿಎಂಸಿ ತಿದ್ದುಪಡಿ ಕಾಯ್ದೆಯಲ್ಲಿ ರೈತರೇ ತಮ್ಮ ಬೆಳೆಗಳ ಬೆಲೆ ನಿಗದಿಪಡಿಸಿ ಹೇಳುವ ಅವಕಾಶ ಮಾಡಿಕೊಡ ಬಹುದಿತ್ತು. ಆದರೆ ಬ್ರಿಟಿಷರ ಕಾಲದಂತೆ ವರ್ತಕರು ಹೇಳಿದ ಧಾರಣೆಗೆ ರೈತರು ಬೆಳೆ ಮಾರಾಟ ಮಾಡುವಂತಹ ವ್ಯವಸ್ಥೆ ಇದೆ. ಅಮೂಲಾಗ್ರಬದಲಾವಣೆಯಿಂದ ಮಾತ್ರ ರೈತರ ಬದುಕುಹಸನಾಗಲಿಕ್ಕೆ ಸಾಧ್ಯ. ಇಲ್ಲದೇ ಹೋದಲ್ಲಿ ಪ್ರತಿ ವರ್ಷ ಕಷ್ಟಪಟ್ಟ ಬೆಳೆದ ಬೆಳೆಗಳನ್ನ ಕಷ್ಟಪಟ್ಟು ಮಾರಾಟ ಮಾಡುವುದು ತಪ್ಪಲಾರದು.
2014 ರಿಂದಲೂ ಇದೇ ಗೋಳು : 2014 ರಿಂದ ಕೇಂದ್ರ ಸರ್ಕಾರ ಮೆಕ್ಕೆಜೋಳ ಆಹಾರ ಪದಾರ್ಥ ಅಲ್ಲ ಎಂದು ಖರೀದಿ ಪ್ರಕ್ರಿಯೆ ಪಟ್ಟಿಯಿಂದ ಮೆಕ್ಕೆಜೋಳವನ್ನು ಹೊರಗಿಇಟ್ಟಿರುವುದೇ ಪ್ರಮುಖ ಕಾರಣ ಎನ್ನುತ್ತಾರೆ ರೈತ ಸಂಘದ ರಾಜ್ಯಾಧ್ಯಕ್ಷ ಹುಚ್ಚವ್ವನಹಳ್ಳಿಮಂಜುನಾಥ್. ಕೇಂದ್ರ ಸರ್ಕಾರ ಮೆಕ್ಕೆಜೋಳವನ್ನು ಜನರು ಆಹಾರವನ್ನಾಗಿ ಬಳಕೆ ಮಾಡುವುದಿಲ್ಲ ಎಂಬ ಕಾರಣಹೇಳಿ 2014 ರಿಂದ ಖರೀದಿ ನಿಲ್ಲಿಸಿದೆ. ಹಾಗಾಗಿ ಮೆಕ್ಕೆಜೋಳ ಖರೀದಿ ಕೇಂದ್ರ ಪ್ರಾರಂಭ ಮಾಡಲಿಕ್ಕೆ ಆಗುತ್ತಿಲ್ಲ. ರೈತರು ಪ್ರತಿ ಹಂಗಾಮಿನ ನಂತರ ನಡೆಸುವ ಹೋರಾಟಕ್ಕಾದರೂ ಸ್ಪಂದಿಸಿ ಸರ್ಕಾರ ಮೆಕ್ಕೆಜೋಳ ಖರೀದಿಗೆ ಹಸಿರು ನಿಶಾನೆ ನೀಡಿದರೆ ಮಾತ್ರ ಖರೀದಿ ಕೇಂದ್ರ ಕಾರ್ಯರೂಪಕ್ಕೆ ಬರುತ್ತವೆ.ಇಲ್ಲ ಅಂದರೆ ಇಲ್ಲವೇ ಇಲ್ಲ ಎನ್ನುತ್ತಾರೆ. ಪ್ರತಿ ಹಂಗಾಮಿನಲ್ಲಿ ಮೆಕ್ಕೆಜೋಳಕ್ಕೆ ಬೆಂಬಲ ಬೆಲೆ ನಿಗದಿಪಡಿಸುವಂತಹ ಸರ್ಕಾರ ಯಾರೇ ಆಗಲಿ, ನಿಗದಿತ ದರಕ್ಕಿಂತಲೂ ಕಡಿಮೆ ಧಾರಣೆಗೆ ಮೆಕ್ಕೆಜೋಳ ಇಲ್ಲವೇ ಯಾವುದೇಬೆಳೆ ಖರೀದಿ ಮಾಡಿದರೆ ವರ್ತಕರ ಪರವಾನಗಿ ರದ್ದು ಮಾಡುವುದು,ಕ್ರಿಮಿನಲ್ ದಾವೆ ಹೂಡುವಂತಹ ಕಠಿಣಕ್ರಮಗಳನ್ನು ಜಾರಿಗೆ ತಂದಲ್ಲಿಪ್ರಾಯಶಃ ಖರೀದಿ ಕೇಂದ್ರದ ಅವಶ್ಯಕತೆಯ ಪ್ರಶ್ನೆಯೇ ಇರುವುದಿಲ್ಲ ಎಂಬುದು ಅವರ ಅಭಿಪ್ರಾಯ. ಎಪಿಎಂಸಿ ತಿದ್ದುಪಡಿಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಇಂತಹ ಕಾನೂನುಗಳ ಅಳವಡಿಸುವ ಮೂಲಕ ರೈತರ ನೆರವಿಗೆ ಧಾವಿಸಬಹುದಿತ್ತು. ಅಂತಹ ತಿದ್ದುಪಡಿ ಮಾಡುವ ಗೋಜಿಗೆ ಸರ್ಕಾರಗಳು ಹೋಗುವುದಿಲ್ಲ. ತಾನು ರೂಪಿಸಿದ ಕಾನೂನು ಎಲ್ಲಿಯೂಉಲ್ಲಂಘನೆ ಆಗದಂತೆ ನೋಡಿಕೊಳ್ಳುವ ಜವಾಬ್ದಾರಿ ಸರ್ಕಾರದ ಮೇಲೆ ಇರುತ್ತದೆ ಎಂದು ಮಂಜುನಾಥ್ ಹೇಳುತ್ತಾರೆ.
-ರಾ. ರವಿಬಾಬು