Advertisement

ರಾಜ್ಯಾದ್ಯಂತ ಸೋಲಾರ್‌ ಮೂಲಕ ವಿದ್ಯುತ್‌ ಮಗ್ಗಗಳ ನಿರ್ವಹಣೆ

10:59 AM May 16, 2017 | Harsha Rao |

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಂಪುಟ ಪುನಾರಚನೆ ಸಂದರ್ಭ ಮಂತ್ರಿಮಂಡಲಕ್ಕೆ ಸೇರ್ಪಡೆಗೊಂಡ ರುದ್ರಪ್ಪ ಲಮಾಣಿ ಅವರು ಮೊದಲ ಬಾರಿಗೆ ಸಚಿವರಾಗಿ ಮುಜರಾಯಿ ಹಾಗೂ ಜವಳಿ ಖಾತೆಯ ಹೊಣೆಗಾರಿಕೆ ವಹಿಸಿಕೊಂಡಿದ್ದಾರೆ.

Advertisement

ನಿಮ್ಮ ಇಲಾಖೆ ಸಾಧನೆ ಹೇಗಿದೆ?
ಸರ್ಕಾರದಲ್ಲಿ ನಾನು ಹೊಸದಾಗಿ ಸಚಿವನಾಗಿದ್ದೇನೆ. ಮೊದಲಿದ್ದವರೂ ಸಾಕಷ್ಟು ಕೆಲಸ ಮಾಡಿದ್ದರು. ನಾನು ಸಚಿವನಾಗಿ ಅಧಿಕಾರ ವಹಿಸಿಕೊಂಡ ಸಂದರ್ಭದಲ್ಲಿ ನೇಕಾರರಿಗೆ ನೂಲು ಮತ್ತು ಕೂಲಿಯ ಸಮಸ್ಯೆ ಇತ್ತು. ಕೆಎಚ್‌ಡಿಸಿ ಮೂಲಕ ನೂಲು ಮತ್ತು ಕೂಲಿ ಸಮಸ್ಯೆ ಬಗೆಹರಿಸುವ ಪ್ರಯತ್ನ ಮಾಡಿದ್ದೇವೆ. ಇಲಾಖೆಯ ಪುನಶ್ಚೇತನಕ್ಕೆ ಈಗಾಗಲೇ ಕ್ರಮ ಕೈಗೊಂಡಿದ್ದು, ಕರ್ನಾಟಕ ಕೈಮಗ್ಗ ನಿಗಮ ಮತ್ತು ಕಾವೇರಿ ಹ್ಯಾಂಡ್‌ಲೂಮ್ಸ್‌ನ್ನು ಸೇರಿಸಲು ತೀರ್ಮಾನ ಕೈಗೊಳ್ಳಲಾಗಿದ್ದು, ಅದಕ್ಕಾಗಿ ಬಜೆಟ್‌ನಲ್ಲಿ 150 ಕೋಟಿ ರೂ ಮೀಸಲಿಡಲಾಗಿದೆ.

– ಜವಳಿ ಕ್ಷೇತ್ರದ ಅಭಿವೃದ್ಧಿಗೆ ನೀವು ರೂಪಿಸಿರುವ ಯೋಜನೆಗಳೇನು?
ಇದುವರೆಗೂ ರಾಜ್ಯದಲ್ಲಿ ಜವಳಿ ಉದ್ಯಮ ಪ್ರಾರಂಭಿಸಲು ಬರುವವರಿಗೆ 99 ವರ್ಷ ಲೀಸ್‌ ಕೊಡಲಾಗುತ್ತಿತ್ತು. ಇದರಿಂದ ಜಮೀನು ಪಡೆದು ಉದ್ಯಮ ಹಾಕಲು ಯಾರೂ ಮುಂದೆ ಬರುತ್ತಿರಲಿಲ್ಲ. ಈಗ ಲೀಸ್‌ ಅವಧಿ 10 ವರ್ಷಕ್ಕೆ ಇಳಿಸಿದ್ದೇವೆ. ಹತ್ತು ವರ್ಷದ ನಂತರ ಅವರಿಗೆ ಮಾರಾಟ ಮಾಡುತ್ತೇವೆ. ಹೀಗಾಗಿ ಹೆಚ್ಚಿನ ಜನರು ಜವಳಿ ಉದ್ಯಮದಲ್ಲಿ ಬಂಡವಾಳ ಹೂಡಲು ಮುಂದೆ ಬರುತ್ತಿದ್ದಾರೆ.

– ನೇಕಾರರು ಸಂಕಷ್ಟದಲ್ಲಿದ್ದಾರೆ ಎಂಬ ಮಾತಿದೆಯಲ್ಲ?
ನಾನು ಅಧಿಕಾರ ವಹಿಸಿಕೊಂಡ ಮೇಲೆ ನೇಕಾರರ ಸಾಲಮನ್ನಾ ಮಾಡಲಾಗಿದೆ. ನೇಕಾರ ವೃತ್ತಿ ನಡೆಸಲು 25 ಸಾವಿರ ರೂ.ವರೆಗೆ ಸಾಲ ಪಡೆದ ಸಾಲಮನ್ನಾ ಮಾಡಿದ್ದು, 2051 ಕೋಟಿ ರೂ. ಹಣ ಈಗಾಗಲೇ ಬಿಡುಗಡೆ ಮಾಡಿದ್ದೇವೆ. ನೇಕಾರರಿಗೆ ಅಗತ್ಯ ನೂಲು ಪಡೆಯಲು ಗದಗದಲ್ಲಿ ನೂಲು ಸಂಗ್ರಹಣಾ ಘಟಕ ಸ್ಥಾಪಿಸಲು ನಿರ್ಧರಿಸಲಾಗಿದೆ. ಕೈಮಗ್ಗ, ಪವರ್‌ಲೂಮ್‌ ಮತ್ತು ಟೈಲರಿಂಗ್‌ ಆಸಕ್ತಿಯುಳ್ಳವರಿಗೆ ಕೌಶಲ ತರಬೇತಿ ನೀಡಲಾಗುತ್ತಿದೆ. ವಸತಿ ರಹಿತ ನೇಕಾರರಿಗೆ ಮನೆ ಕಟ್ಟಿಕೊಳ್ಳಲು ನಿಗಮದಿಂದ ಸಾಲ ಸೌಲಭ್ಯ ಒದಗಿಸಲಾಗುವುದು. ವಸತಿ ರಹಿತರು ಒಂದು ಗುಂಪು
ಮಾಡಿಕೊಂಡು ಸರ್ಕಾರಕ್ಕೆ ಮನವಿ ಸಲ್ಲಿಸಿದರೆ, ಪ್ರತಿಯೊಬ್ಬರಿಗೂ 1 ರಿಂದ 2.5 ಲಕ್ಷದ ವರೆಗೆ ಸಾಲ ನೀಡಲಾಗುತ್ತದೆ.

– ಯಾದಗಿರಿಯಲ್ಲಿ ಜವಳಿ ಪಾರ್ಕ್‌ ಮಾಡೋ ಯೋಜನೆ ಎಲ್ಲಿಗೆ ಬಂತು ?
ಯಾದಗಿರಿ ಜಿಲ್ಲೆ ಬಂಡೇಳಿ ಗ್ರಾಮದಲ್ಲಿ ಹೈಟೆಕ್‌ ಜವಳಿ ಟ್ರೇನಿಂಗ್‌ ಸೆಂಟರ್‌ ಮಾಡಲು ಐದು ಎಕರೆ ಜಮೀನು ನಿಗದಿ ಮಾಡಲಾಗಿದೆ. ಹೈದರಾಬಾದ್‌ ಕರ್ನಾಟಕ ಅಭಿವೃದ್ಧಿ ಮಂಡಳಿಯಿಂದ 2.5 ಕೋಟಿ ರೂ. ಹಣ ಬಿಡುಗಡೆ ಮಾಡಲಾಗಿದೆ. ಕಾಮಗಾರಿಗೆ ಟೆಂಡರ್‌ ಪ್ರಕ್ರಿಯೆ ಆರಂಭವಾಗಿದೆ. ನಮ್ಮ ಅವಧಿಯಲ್ಲಿಯೇ ಯೋಜನೆ ತರಬೇತಿ ಕೇಂದ್ರವನ್ನು ಆರಂಭಿಸುತ್ತೇವೆ.

Advertisement

– ನಷ್ಟದಲ್ಲಿರುವ ನೂಲಿನ ಗಿರಣಿಗಳ ಪುನಶ್ಚೇತನಕ್ಕೆ ಏನು ಕ್ರಮ ಕೈಗೊಂಡಿದ್ದೀರಿ ?
ರಾಜ್ಯದಲ್ಲಿ 9 ನೂಲಿನ ಗಿರಣಿಗಳು ನಷ್ಟ ಅನುಭವಿಸುತ್ತಿವೆ. ಅವುಗಳಲ್ಲಿ 6 ನೂಲಿನ ಗಿರಣಿಗಳಿಗೆ 49.29 ಕೋಟಿ ರೂ.
ಹಣವನ್ನು ಈಕ್ವಿಟಿ ಶೇರ್‌ ಆಗಿ ಪರಿವರ್ತಿಸಲಾಗಿದೆ. 117 ಕೋಟಿ ರೂ. ಸಾಲದ ಮೇಲಿನ ಬಡ್ಡಿ ಮತ್ತು ದಂಡದ ಬಡ್ಡಿಯನ್ನು ಮನ್ನಾ ಮಾಡಲಾಗಿದೆ. ಸಹಕಾರಿ ಕ್ಷೇತ್ರದಲ್ಲಿರುವ ಮೂರು ನೂಲಿನ ಗಿರಣಿಗಳಿಗೆ 51 ಕೋಟಿ ರೂ. ಈಕ್ವಿಟಿಯಾಗಿ ಪರಿವರ್ತಿಸಿ, ಬಡ್ಡಿ ಮತ್ತು ದಂಡದ ಮೇಲಿನ ಬಡ್ಡಿಯನ್ನು ಮನ್ನಾ ಮಾಡಿದ್ದೇವೆ.

– ವಿದ್ಯುತ್‌ ಮಗ್ಗಗಳ ಸಮಸ್ಯೆ ಪರಿಹರಿಸಲು ಏನು ಕ್ರಮ ಕೈಗೊಂಡಿದ್ದೀರಿ ?
ರಾಜ್ಯದಲ್ಲಿ ವಿದ್ಯುತ್‌ ಮಗ್ಗಗಳು ವಿದ್ಯುತ್‌ ಸಮಸ್ಯೆ ಎದುರಿಸುತ್ತಿದ್ದು, 16-17ನೇ ಸಾಲಿನಲ್ಲಿ ಪ್ರತಿ ಘಟಕಕ್ಕೂ 5 ಲಕ್ಷ ರೂ. ಸಹಾಯ ಧನ ನೀಡಿದ್ದು, ಶೇಕಡಾ 50ರಷ್ಟು ರಿಯಾಯ್ತಿ ನೀಡಲಾಗಿದೆ. ವಿದ್ಯುತ್‌ ಸಮಸ್ಯೆ ನಿವಾರಿಸಲು ಪಾವಗಡದ ಬೊಮ್ಮಗಟ್ಟ ಗ್ರಾಮದಲ್ಲಿ ಸೋಲಾರ್‌ ಘಟಕ ಸ್ಥಾಪನೆ ಮಾಡಲಾಗುತ್ತಿದ್ದು, ಪ್ರಯೋಗಾತ್ಮಕವಾಗಿ ಸೋಲಾರ್‌ನಿಂದ ಪವರ್‌ಲೂಮ್‌ ನಡೆಸಲು ಆರಂಭಿಸಿದ್ದೇವೆ. ಈ ಯೋಜನೆ ಯಶಸ್ವಿಯಾದರೆ, ರಾಜ್ಯಾದ್ಯಂತ ಸೋಲಾರ್‌ ಮೂಲಕ ವಿದ್ಯುತ್‌ ಮಗ್ಗಗಳನ್ನು ನಡೆಸಲು ಯೋಜನೆ ವಿಸ್ತರಿಸುತ್ತೇವೆ.

– ಮುಜರಾಯಿ ಸಚಿವರಾದವರು ಮುಂದಿನ ಚುನಾವಣೆಯಲ್ಲಿ ಸೋಲುತ್ತಾರೆ ಅಂತಾರಲ್ಲಾ ?
ನಾನು ಆ ನಂಬಿಕೆಯನ್ನು ಸುಳ್ಳು ಮಾಡುತ್ತೇನೆ. ನಾನು ದೇವರ ಸೇವೆ ಮಾಡುತ್ತಿದ್ದೇನೆ. ದೇವರ ಹೆಸರಲ್ಲಿ ಬಂದ ಹಣ ಲೂಟಿ ಮಾಡಿ, ದೇವರಿಗೆ ಮೋಸ ಮಾಡಿದ್ದರೆ ದೇವರು ನೋಡಿಕೊಳ್ಳುತ್ತಾನೆ.

– ಮುಜರಾಯಿ ಇಲಾಖೆ ದೇವಾಲಯಗಳಲ್ಲಿ ಮೂಲಸೌಕರ್ಯಗಳೇ ಇಲ್ಲ ಎಂಬ ದೂರಿದೆಯಲ್ಲಾ ?
ಮುಜರಾಯಿ ದೇವಸ್ಥಾನಗಳಿಗೆ ಮೊದಲು ವಾರ್ಷಿಕ 24 ಸಾವಿರ ರೂ ತಸ್ತಿಕ್‌ ನೀಡಲಾಗುತ್ತಿತ್ತು. ನಮ್ಮ ಸರ್ಕಾರ ಬಂದ
ಮೇಲೆ ಅದನ್ನು 36 ಸಾವಿರಕ್ಕೆ ಹೆಚ್ಚಳ ಮಾಡಿತು. ಈಗ ಮತ್ತೆ 12 ಸಾವಿರ ಹೆಚ್ಚಳ ಮಾಡಿ ಡಬಲ್‌ ಮಾಡಿದ್ದೇವೆ. ದೇವಸ್ಥಾನಗಳ ನೌಕರರಿಗೆ ಕನಿಷ್ಠ ಸಂಬಳ ಕೂಡ ಇರಲಿಲ್ಲ. ಈಗ 6.5ರಿಂದ 13 ಸಾವಿರವರೆಗೂ ಸಂಬಳವನ್ನು ಹೆಚ್ಚಳ ಮಾಡಿದ್ದೇವೆ.

– ಲಾಭ ತರುವ ದೇವಸ್ಥಾನಗಳಿಂದ ಬರುವ ಹಣ ಏನು ಮಾಡುತ್ತೀರಿ ?
ರಾಜ್ಯದಲ್ಲಿ ಅಧಿಕ ಲಾಭ ತರಲು ದೇವಸ್ಥಾನಗಳ ಸಂಖ್ಯೆ ಕಡಿಮೆ ಇದೆ. ಆ ದೇವಸ್ಥಾನಗಳಲ್ಲಿ ಬರುವ ಹಣವನ್ನು ಮೂಲಸೌಕರ್ಯ ಕಲ್ಪಿಸಲು ಬಳಸಲು ಸೂಚನೆ ನೀಡಲಾಗಿದೆ. ಅಲ್ಲದೇ ಪ್ರಮುಖ ಐದಾರು ದೇವಸ್ಥಾನಗಳನ್ನು ದತ್ತು ಪಡೆಯಲು ಸೂಚಿಸಲಾಗಿದ್ದು, ಆದಾಯವಿಲ್ಲದ ದೇವಸ್ಥಾನಗಳ ಅಭಿವೃದ್ಧಿಗೆ ಕ್ರಮ ವಹಿಸಿದ್ದೇವೆ. ಇಲಾಖೆಯಲ್ಲಿ ಜನರ ಬೇಡಿಕೆ ಈಡೇರಿಸುವಷ್ಟು ಹಣ ಇಲ್ಲದಿರುವುದೇ ಸಮಸ್ಯೆ.

– ನೋಟು ಅಮಾನ್ಯಗೊಂಡ ನಂತರ ರಾಜ್ಯದ ದೇವಸ್ಥಾನಗಳ ಹುಂಡಿಗೆ ಹಣ ಹರಿದು ಬಂತಾ?
ಪ್ರಧಾನಿ ನರೇಂದ್ರಮೋದಿ 1 ಸಾವಿರ ಮತ್ತು 500 ನೋಟು ನಿಷೇಧ ಮಾಡಿದ ನಂತರ ರಾಜ್ಯದ ಯಾವ ದೇವಸ್ಥಾನದ
ಹುಂಡಿಗೂ ಹೆಚ್ಚಿನ ಹಣ ಹರಿದು ಬಂದಿಲ್ಲ. ನಮ್ಮ ಇಲಾಖೆಯ ದೇವಸ್ಥಾನಗಳಿಗೆ ಬಂದ ಹಣವನ್ನು ತಕ್ಷಣ ಬ್ಯಾಂಕ್‌ಗಳಿಗೆ
ವರ್ಗಾಯಿಸಿ ಬದಲಾಯಿಸಲು ಸೂಚಿಸಲಾಗಿತ್ತು. ಆ ನಂತರ ಹೊಸ ನೋಟು ಬಂದ ಮೇಲೆ ಅಂತಹ ವ್ಯತ್ಯಾಸವೇನೂ ಆಗಿಲ್ಲ.

– ಹೊರ ರಾಜ್ಯದ ದೇವಸ್ಥಾನಗಳಲ್ಲಿ ಕರ್ನಾಟಕದ ರಾಜ್ಯದ ಭಕ್ತರಿಗೆ ಉಳಿದುಕೊಳ್ಳಲು ಸರಿಯಾದ ವ್ಯವಸ್ಥೆ ಇಲ್ಲ ಅನ್ನುವ ಆರೋಪ ಇದೆಯಲ್ಲ ?
ಹೌದು, ಅದು ಸರ್ಕಾರದ ಗಮನಕ್ಕೂ ಬಂದಿದೆ. ತಿರುಪತಿಯಲ್ಲಿ ಪ್ರವಾಸಿ ನಿಲಯ ಸ್ಥಾಪಿಸಲು ಸರ್ಕಾರ ಮುಂದಾಗಿತ್ತು. ಆದರೆ, ಟಿಟಿಡಿಯವರು ಕೋರ್ಟ್‌ಗೆ ಹೋಗಿರುವುದರಿಂದ ಅದು ಸ್ಥಗಿತಗೊಂಡಿದೆ. ಶ್ರೀಶೈಲದಲ್ಲಿಯೂ ವಸತಿ ನಿಲಯ ಸ್ಥಾಪಿಸಲು ಅಲ್ಲಿನ ಸರ್ಕಾರದೊಂದಿಗಿನ ಒಪ್ಪಂದ ನವೀಕರಿಸಬೇಕಿದೆ. ಶೀಘ್ರವೇ ಒಪ್ಪಂದ ನವೀಕರಿಸಿ ವಸತಿ ನಿಲಯ ಸ್ಥಾಪಿಸಲಾಗುವುದು. ಮಹಾರಾಷ್ಟ್ರದ ತುಳಜಾಪುರದಲ್ಲಿ 2 ಕೋಟಿ ರೂ. ವೆಚ್ಚದಲ್ಲಿ ವಸತಿ ನಿಲಯ ಸ್ಥಾಪಿಸಲು ನಿರ್ಧರಿಸಲಾಗಿದೆ. ಕೇರಳದ ಶಬರಿಮಲೈನಲ್ಲಿಯೂ 4.5 ಎಕರೆ ಜಮೀನು ಗುರುತಿಸಿದ್ದು, ಶೀಘ್ರವೆ ಅಲ್ಲಿಯೂ ಪ್ರವಾಸಿ ನಿಲಯ ನಿರ್ಮಿಸುತ್ತೇವೆ.

– ಮುಜರಾಯಿ ದೇವಸ್ಥಾನಗಳಿಗೆ ಪ್ರವಾಸಿಗರನ್ನು ಸೆಳೆಯಲು ಏನಾದ್ರೂ ಯೋಜನೆ ರೂಪಿಸಿದ್ದೀರಾ ?
ರಾಜ್ಯದ ಪ್ರಸಿದ್ಧ ದೇವಸ್ಥಾನಗಳಿಗೆ ಪ್ರವಾಸಿಗರು ಭೇಟಿ ನೀಡುವ ಮೊದಲು ಅಲ್ಲಿನ ಎಲ್ಲ ಮಾಹಿತಿ ದೊರೆಯುವಂತೆ ಮೊಬೈಲ್‌ ಆ್ಯಪ್‌ ಸಿದ್ಧಪಡಿಸಲಾಗುತ್ತಿದೆ. ಎಲ ಪ್ರಮುಖ ಪ್ರವಾಸಿ ತಾಣಗಳಲ್ಲಿ ಪೂಜಾ ಮಾಹಿತಿ, ವಸತಿ ವ್ಯವಸ್ಥೆ, ದೇವರ ದರ್ಶನಕ್ಕೆ ಅವಕಾಶ ನೀಡುವ ಬಗ್ಗೆ ಮೊಬೈಲ್‌ ಆ್ಯಪ್‌ನಲ್ಲಿ ಮಾಹಿತಿ ಒದಗಿಸಲಾಗುತ್ತದೆ.

– ನಿಮ್ಮ ಹವ್ಯಾಸಗಳು ?

ರಾಜಕೀಯ ಮಾಡೋದು ಬಿಟ್ರೆ ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿದ್ದೇನೆ. ಬಡವರು ಮತ್ತು ಕೆಳ ವರ್ಗದವರಿಗೆ ಶಿಕ್ಷಣ
ಕೊಡಿಸಬೇಕೆಂಬ ಹಂಬಲ ನನ್ನದು. ಹೀಗಾಗಿ ಪ್ರಾಥಮಿಕ ಶಿಕ್ಷಣದಿಂದ ಹಿಡಿದು ಉನ್ನತ ಶಿಕ್ಷಣದ ವರೆಗೆ ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿದ್ದೇವೆ. ತವರಿನಲ್ಲಿ ಸಿದ್ಧಾರೂಢರ ಮಠ ಕಟ್ಟಿದ್ದು, ಸತ್ಸಂಗ ನಡೆಸುತ್ತೇನೆ. ಪ್ರತಿವರ್ಷ ಸಾಮೂಹಿಕ ಮದುವೆ ಮಾಡಿಸುತ್ತೇನೆ.   ರಾಜಕೀಯ ಬೇಡ ಎನ್ನುತ್ತೇನೆ ನನ್ನ ಪತ್ನಿ ಪ್ರಾಥಮಿಕ ಶಾಲಾ ಶಿಕ್ಷಕಿ, ನಾನು ಶಾಸಕ, ಸಚಿವನಾದ ನಂತರವೂ ಶಿಕ್ಷಕಿ ವೃತ್ತಿ ಮುಂದುವರಿಸಿದ್ದಾಳೆ. ಮಗಳು ಎಂಬಿಬಿಎಸ್‌ ಮಾಡಲು ನೀಟ್‌ ಪರೀಕ್ಷೆ
ಬರೆದಿದ್ದಾಳೆ. ಮಗ ಲಾಯರ್‌ ಆಗಬೇಕೆಂದಿದ್ದಾನೆ. ಈಗ ರಾಜಕೀಯ ಮಾಡುವುದು ಕಷ್ಟ ಇದೆ. ರಾಜಕೀಯ ಬಿಟ್ಟು
ಬೇರೇನಾದರೂ ಮಾಡುವಂತೆ ನಾನೇ ಸೂಚಿಸುತ್ತೇನೆ.

Advertisement

Udayavani is now on Telegram. Click here to join our channel and stay updated with the latest news.

Next