2012ರಲ್ಲಿ ಶಂಕುಸ್ಥಾಪನೆಗೊಂಡು, 2.60 ಲ. ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ಸುಸಜ್ಜಿತ ಮಹಿಳಾ ಮೀನು ಮಾರುಕಟ್ಟೆಯಲ್ಲಿ ಒಟ್ಟು 174 ಮಹಿಳೆಯರಿಗೆ ಮೀನು ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ. ರಾಷ್ಟ್ರೀಯ ಮೀನುಗಾರಿಕಾ ಮಂಡಳಿ 1.80 ಲ. ರೂ., ರಾಜ್ಯ ಮೀನುಗಾರಿಕಾ ಇಲಾಖೆ, ನಗರಸಭೆಯಿಂದ ತಲಾ 40 ಲ. ರೂ. ಅನುದಾನದಲ್ಲಿ ನಿರ್ಮಾಣಗೊಂಡಿದೆ.
ಉಡುಪಿ: ಭಾರೀ ವೆಚ್ಚದಲ್ಲಿ ನಿರ್ಮಾಣವಾದ ಈ ಸುಸಜ್ಜಿತ ಮಹಿಳಾ ಮೀನು ಮಾರುಕಟ್ಟೆಯಲ್ಲಿ ಸ್ವತ್ಛತೆಯಿಂದ ಮೀನು ಮಾರಾಟ ಮಾಡಿ ಹಾಗೂ ಗ್ರಾಹಕರು ಸ್ವತ್ಛ ವಾತಾವರಣದಿಂದ ಬರುವಂತಾಗಲಿ ಎಂದು ರಾಜ್ಯ ಮೀನುಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದರು.
ಅವರು ರಾಜ್ಯ ಮೀನುಗಾರಿಕಾ ಇಲಾಖೆ, ನಗರಸಭೆ ಹಾಗೂ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಸಹಯೋಗದಲ್ಲಿ 2.20 ಕೋ. ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ದೇಶದ ಅತೀ ದೊಡ್ಡ ಸುಸಜ್ಜಿತ ಮಹಿಳಾ ಮೀನುಮಾರುಕಟ್ಟೆ ಉದ್ಘಾಟಿಸಿದರು.
ಮೀನುಗಾರರಿಗೂ ಸವಲತ್ತು ಸಿಗಲಿ ಅಸಂಘಟಿತ ಕಾರ್ಮಿಕರಿಗೆ ಸಿಗುವಂತಹ ಸವಲತ್ತು ಮೀನುಗಾರ ವೃತ್ತಿಯಲ್ಲಿ ತೊಡಗಿಸಿಕೊಂಡವರಿಗೂ ಸಿಗುವಂತಾಗಲಿ ಎಂದು ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಮನವಿ ಮಾಡಿದರು.
ನಗರಾಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ಉಪಾಧ್ಯಕ್ಷೆ ಸಂಧ್ಯಾ, ತಾ| ಹಸಿ ಮೀನು ಮಾರಾಟಗಾರರ ಸಂಘದ ಅಧ್ಯಕ್ಷೆ ಬೇಬಿ ಎಚ್. ಸಾಲ್ಯಾನ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನರಸಿಂಹಮೂರ್ತಿ, ಜಿ.ಪಂ. ಸದಸ್ಯ ಜನಾರ್ದನ ತೋನ್ಸೆ, ನಗರಸಭಾ ಸದಸ್ಯೆ ಗೀತಾ ರವಿ ಶೇಟ್, ಪೌರಾಯುಕ್ತ ಡಿ. ಮಂಜುನಾಥಯ್ಯ, ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಕಿಶನ್ ಹೆಗ್ಡೆ ಕೊಳ್ಕೆಬೈಲು, ಬಂದರು ಮತ್ತು ಮೀನುಗಾರಿಕಾ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರ ಕೆ.ಆರ್. ದಯಾನಂದ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷಸತೀಶ್ ಅಮೀನ್ ಪಡುಕೆರೆ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ದಿವಾಕರ ಶೆಟ್ಟಿ, ಉಡುಪಿ ಮೀನುಗಾರರ ಸಂಘದ ಅಧ್ಯಕ್ಷ ಟಿ. ಹಿರಿಯಣ್ಣ ಕಿದಿಯೂರು, ಮೀನುಗಾರಿಕಾ ಇಲಾಖೆ ಎಂಜಿನಿಯರ್ ಕೆ.ಆರ್. ದಯಾ ನಂದ್, ಮೀನುಗಾರಿಕಾ ಇಲಾಖೆಯ ಉಪ ನಿರ್ದೇಶಕ ಗಣಪತಿ ಭಟ್ ಉಪಸ್ಥಿತರಿದ್ದರು.
ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಪ್ರದೀಪ್ ಡಿ’ಸೋಜಾ ಸ್ವಾಗತಿಸಿದರು. ಬಂದರು ಮತ್ತು ಮೀನುಗಾರಿಕಾ ಇಲಾಖೆಯ ಕಾರವಾರ ವಿಭಾಗದ ಸೂಪರಿಂಟೆಂಡೆಂಟ್ ಎಂಜಿನಿಯರ್ ಕೆ.ಎಸ್. ಜಂಬಳೆ ಪ್ರಾಸ್ತ ವಿಸಿದರು. ಸತೀಶ್ ಶೆಟ್ಟಿ ಚಿತ್ರಪಾಡಿ ಕಾರ್ಯಕ್ರಮ ನಿರ್ವಹಿಸಿದರು.