Advertisement

ವಿದ್ಯುತ್‌ ಅವಘಡ ಸಂಭವಿಸದಂತೆ ಸುರಕ್ಷತೆ ಕಾಪಾಡಿ

10:07 PM Sep 14, 2019 | Lakshmi GovindaRaju |

ಚಿಕ್ಕಬಳ್ಳಾಪುರ: ಇತ್ತೀಚಿನ ದಿನಗಳಲ್ಲಿ ವಿದ್ಯುತ್‌ ಅವಘಡಗಳು ಸಂಭವಿಸಿ ಅಮಾಯಕರು ಬಲಿಯಾಗುತ್ತಿದ್ದು, ಸಾರ್ವಜನಿಕರು ವಿದ್ಯುತ್‌ ಅವಘಡ ಸಂಭವಿಸದಂತೆ ಸುರಕ್ಷತಾ ಕ್ರಮಗಳಿಗೆ ಆದ್ಯತೆ ನೀಡಬೇಕೆಂದು ಬೆಸ್ಕಾಂ ಕಾರ್ಯಪಾಲಕ ಅಭಿಯಂತರ ಶಿವಶರಣು ತಿಳಿಸಿದರು.

Advertisement

ನಗರದ ಜೂಯನಿರ್‌ ಕಾಲೇಜು ಆವರಣದಲ್ಲಿರುವ ಸರ್ಕಾರಿ ಪ್ರೌಢ ಶಾಲೆಯಲ್ಲಿ ಬೆಸ್ಕಾಂ ವತಿಯಿಂದ ತಾಲೂಕಿನ ಶಾಲಾ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ವಿದ್ಯುತ್‌ ಸುರಕ್ಷತಾ ನಿಯಮಗಳ ಬಗ್ಗೆ ಅರಿವು ಮೂಡಿಸಲು ಹಮ್ಮಿಕೊಂಡಿದ್ದ ವಿವಿಧ ಸ್ಪರ್ಧೆಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.

ನಿರ್ಲಕ್ಷಿಸಿದರೆ ಪ್ರಾಣ ಹಾನಿ: ಮನುಷ್ಯನ ಸುಗಮ ಜೀವನಕ್ಕೆ ವಿದ್ಯುತ್‌ ಬೇಕು. ಬದುಕಿನ ಪ್ರತಿ ಹಂತದಲ್ಲಿ ನಾವು ವಿದ್ಯುತ್‌ ಬಳಕೆ ಮಾಡುವ ಸಂದರ್ಭದಲ್ಲಿ ಪ್ರಾಣ ರಕ್ಷಣೆಗೆ ಪೂರಕವಾಗಿ ಸುರಕ್ಷತಾ ಕ್ರಮಗಳನ್ನು ಮುನ್ನೆಚ್ಚರಿಕೆಯಿಂದ ಕೈಗೊಳ್ಳಬೇಕು. ಬಹಳಷ್ಟು ಸಂದರ್ಭದಲ್ಲಿ ನಿರ್ಲಕ್ಷ್ಯ ತೋರಿ ಸುರಕ್ಷತೆಗೆ ಒತ್ತು ಕೊಡದೇ ರೈತರು, ಕಾರ್ಮಿಕರು ವಿದ್ಯುತ್‌ ಅವಘಡಗಳಿಗೆ ಬಲಿಯಾಗುತ್ತಿದ್ದಾರೆ ಎಂದರು.

ಬೆಸ್ಕಾಂ ವಿದ್ಯುತ್‌ ಅವಘಡಗಳನ್ನು ತಪ್ಪಿಸಲು ಸಾಕಷ್ಟು ಎಚ್ಚರಿಕೆ ಹಾಗೂ ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳುತ್ತಿದೆ. ಆದರೂ ಗ್ರಾಮೀಣ ಪ್ರದೇಶದಲ್ಲಿ ವಿದ್ಯುತ್‌ ಕಳ್ಳತನಕ್ಕೆ ಹೋಗಿ ಆಕಸ್ಮಿಕವಾಗಿ ವಿದ್ಯುತ್‌ ಸ್ಪರ್ಶಿಸಿ ಸಾವು ಸಂಭವಿಸುತ್ತಿವೆ ಎಂದರು.

ಅರಿವು ಇರಬೇಕು: ಬೆಸ್ಕಾಂ ಮುಖ್ಯ ಲೆಕ್ಕಾಧಿಕಾರಿ ಜಿ.ನಾರಾಯಣಸ್ವಾಮಿ ಮಾತನಾಡಿ, ದಿನನಿತ್ಯ ಬಳಸುವ ವಿದ್ಯುತ್ಛಕ್ತಿಯ ಅನುಕೂಲತೆಗಳನ್ನು ತಿಳಿದಿರುವ ಗ್ರಾಹಕರು ಅದರ ಬಳಕೆಯಲ್ಲಿ ನಿರ್ಲಕ್ಷ್ಯ ತೋರಿದಲ್ಲಿ ಉಂಟಾಗುವ ಅನಾಹುತಗಳ ಕುರಿತು ಅರಿವು ಹೊಂದಿರಬೇಕೆಂದರು.

Advertisement

ಕಾರ್ಯಕ್ರಮದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಶಿಕ್ಷಣ ಸಂಯೋಜಕ ಚಂದ್ರಶೇಖರ್‌, ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಎಸ್‌.ಮಂಜುನಾಥ್‌, ಉಪನ್ಯಾಸಕ ಸಿ.ಎಲ್‌.ಸತೀಶ್‌ಕುಮಾರ್‌, ಪ್ರೌಢ ಶಾಲೆಯ ಶಾಲೆ ಮುಖ್ಯ ಶಿಕ್ಷಕಿ ಅರುಣಾ ಸೇರಿದಂತೆ ಬೆಸ್ಕಾಂನ ಅಧಿಕಾರಿಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಪ್ರಬಂಧ, ಭಾಷಣ, ಚಿತ್ರಕಲೆ: ಚಿಕ್ಕಬಳ್ಳಾಪುರ ತಾಲೂಕಿನ ಪ್ರೌಢಶಾಲೆ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ವಿದ್ಯುತ್‌ ಸುರಕ್ಷತೆ ಮತ್ತು ವಿದ್ಯುತ್‌ ಅವಘಡ ತಡೆಗಟ್ಟುವ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ವಿದ್ಯುತ್‌ ಸುರಕ್ಷತೆ ಕುರಿತಂತೆ ಭಾಷಣ, ಚಿತ್ರಕಲೆ ಮತ್ತು ಪ್ರಬಂಧ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕಾಲೇಜುಗಳಿಂದ 30 ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು.

ವಿದ್ಯುತ್‌ ಸುರಕ್ಷತೆ ಕುರಿತು ಚಿತ್ರ ಬಿಡಿಸಿ, ಬಣ್ಣ ತುಂಬುವುದು, 2 ಪುಟ ಮೀರದಂತೆ ಪ್ರಬಂಧ ರಚನೆ ಹಾಗೂ ಭಾಷಣ ಸ್ಪರ್ಧೆ ಹಮ್ಮಿಕೊಳ್ಳಲಾಗಿತ್ತು. ವಿಜೇತ ವಿದ್ಯಾರ್ಥಿಗಳಿಗೆ ನಗದು ಬಹುಮಾನ ಹಾಗೂ ಪ್ರಶಂಸನಾ ಪತ್ರಗಳನ್ನು ವಿತರಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next