ಮಾಗಡಿ: ಸಾರ್ವಜನಿಕರ ಹಿತದೃಷ್ಟಿಯಿಂದ ಶುಕ್ರವಾರದಿಂದ ತಾಲೂಕನ್ನು ಅನ್‌ಲಾಕ್ ಮಾಡಲಾಗಿದ್ದು, ವರ್ತಕರು, ಮಾರುಕಟ್ಟೆ ವ್ಯಾಪಾರಿಗಳು, ಸಾರ್ವಜನಿಕರು ಸಾಮಾಜಿಕ ಅಂತರ ಕಾಪಾಡಿ ಸೋಂಕು ನಿರ್ಮೂಲನೆಗೆ ಶ್ರಮಿಸಬೇಕು ಎಂದು ಶಾಸಕ ಎ. ಮಂಜುನಾಥ್ ಮನವಿ ಮಾಡಿದರು.
ಪಟ್ಟಣದ ತಾಪಂ ಸಭಾಂಗಣದಲ್ಲಿ ಕೋವಿಡ್ ಲಾಕ್‌ಡೌನ್ ಸಡಿಲ ಕುರಿತು ಏರ್ಪಡಿಸಿದ್ದ ಅಧಿಕಾರಿಗಳ ಮಟ್ಟದ ತುರ್ತು ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಳೆದ 10 ದಿನಗಳಿಂದಲೂ ಮಾಗಡಿ ಪಟ್ಟಣ ಲಾಕ್‌ಡೌನ್ ಆಗಿದ್ದರಿಂದ ಕೋವಿಡ್ ಸೋಂಕಿತರ ಸಂಖ್ಯೆ ಕಡಿಮೆಯಾಗಿದೆ ಎಂದು ಹೇಳಿದರು.
ಮಾಗಡಿ ತಾಲೂಕಿನಲ್ಲಿನ ಸೋಂಕಿತರನ್ನು ರಾಮನಗರ ಕೋವಿಡ್ ಆಸ್ಪತ್ರೆಗೆ ಸೇರಿಸುವ ಬದಲಾಗಿ ಕೆಲ ಅಧಿಕಾರಿಗಳು ಬೇಕು ಅಂತಲೇ ಸಣ್ಣತನದಿಂದ ರಾಜರಾಜೇಶ್ವರಿ ಆಸ್ಪತ್ರೆಗೆ ಸೇರಿಸಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ ಎಂದು ಹೇಳಿದರು.
ತಾಲೂಕು ಆರೋಗ್ಯಾಧಿಕಾರಿ ಡಾ.ಸತೀಶ್ ಮಾತನಾಡಿ, ತಾಲೂಕಿನಲ್ಲಿ ಇಲ್ಲಿಯವರೆಗೂ 176 ಪ್ರಕರಣ ದಾಖಲಾಗಿದೆ. ಈ ಪೈಕಿ ಪಟ್ಟಣ 6 ಮಂದಿ, ಗ್ರಾಮೀಣ 3 ಮಂದಿ ಸೇರಿ 9 ಮಂದಿ ಮೃತಪಟ್ಟಿದ್ದಾರೆ. 94 ಮಂದಿ ಗುಣಮುಖರಾಗಿದ್ದಾರೆ. ಒಟ್ಟಾರೆ 2664 ಮಂದಿ ಗಂಟಲು ಸ್ವಾಬ್ ಪಡೆದು ಪರೀಕ್ಷಿಸಲಾಗಿದೆ. 24 ಗಂಟೆಯೊಳಗೆ ಸೋಂಕಿತರ ರಿಪೋರ್ಟ್ ಬಂದರೆ ಪಾಸಿಟಿವ್ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತದೆ ಎಂದು ಸಭೆಗೆ ವಿವರಿಸಿದರು.
ತಾಲೂಕು ಪಂಚಾಯ್ತಿ ಅಧ್ಯಕ್ಷ ನಾರಾಯಣಪ್ಪ, ತಹಶೀಲ್ದಾರ್ ಬಿ.ಜಿ. ಶ್ರೀನಿವಾಸ್ ಪ್ರಸಾದ್, ತಾಲೂಕು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಟಿ.ಪ್ರದೀಪ್, ಪುರಸಭೆ ಮುಖ್ಯಾಧಿಕಾರಿ ಎಂ.ಎನ್. ಮಹೇಶ್, ಕ್ಷೇತ್ರ ಶಿಕ್ಷಣಾಧಿಕಾರಿ ಎಸ್. ಸಿದ್ದೇಶ್ವರ್, ಜಿಪಂ ಎಇಇ ಪ್ರಸನ್ನಕುಮಾರ್, ಪಿಡಬ್ಲೂಡಿ ಎಇಇ ರಾಮಣ್ಣ, ಕೃಷಿ ಸಹಾಯಕ ನಿರ್ದೇಶಕ ಶಿವಶಂಕರ್, ತೋಟಗಾರಿಕೆ ಸಹಾಯಕ ನಿರ್ದೇಶಕ ನಾಗರಾಜು, ಸಿಡಿಪಿಒ ಸುಧೀಂದ್ರ, ಪಶು ಇಲಾಖೆ ಸಹಾಯಕ ನಿರ್ದೇಶಕ ಜನಾರ್ಧನ್, ಆರೋಗ್ಯ ಶಿಕ್ಷಣಾಧಿಕಾರಿ ರಂಗನಾಥ್, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಗಂಗಾಧರ್ ಮತ್ತಿತರರು ಉಪಸ್ಥಿತರಿದ್ದರು.