Advertisement

ಮೀನು ಮಾರುಕಟ್ಟೆಯಲ್ಲಿ ಸ್ವಚ್ಛತೆ ಕಾಪಾಡಿ

03:05 PM Jun 16, 2020 | Suhan S |

ಭಟ್ಕಳ: ಪಟ್ಟಣದ ಹಳೇ ಬಸ್‌ ನಿಲ್ದಾಣದಲ್ಲಿರುವ ಮೀನು ಮಾರುಕಟ್ಟೆ ಸುಸಜ್ಜಿತ ಹೊಸ ಮೀನು ಮಾರುಕಟ್ಟೆಗೆ ಸ್ಥಳಾಂತರಿಸಲು ಅಭಿಪ್ರಾಯ ಸಂಗ್ರಹಣೆ ಸಭೆ ಶಾಸಕ ಸುನೀಲ್‌ ನಾಯ್ಕ ನೇತೃತ್ವದಲ್ಲಿ ಪುರಸಭಾ ಸಭಾ ಭವನದಲ್ಲಿ ನಡೆಯಿತು.

Advertisement

ಪುರಸಭಾ ಸದಸ್ಯರು ಹಾಗೂ ನಾಗರಿಕರ ಹಲವು ಪ್ರಶ್ನೆಗಳಿಗೆ ಸಮಜಾಯಿಷಿ ನೀಡಿದ ಅವರು, ಇಲ್ಲಿ ಸಭೆ ಕರೆದಿರುವುದು ಅಭಿಪ್ರಾಯ ಸಂಗ್ರಹಕ್ಕಾಗಿಯೇ ವಿನಃ ಬೇರೆ ಯಾವುದೇ ಉದ್ದೇಶವಿಲ್ಲ. ಎಲ್ಲರಿಂದಲೂ ಮಾಹಿತಿ ಸಂಗ್ರಹಿಸಿಯೇ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಾರೆ. ಯಾರಿಗೂ ತಿಳಿಸದೇ ಮಾಡುವುದಾದರೆ ಸಭೆ ಕರೆಯುವ ಅವಶ್ಯಕತೆ ಏನಿತ್ತು ಎಂದರಲ್ಲದೇ, ಈ ಕುರಿತು ಇನ್ನೂ ಹಲವಾರು ಸಭೆ ಮಾಡಲು ನಾನು ಸಿದ್ಧನಿದ್ದೇನೆ. ಇಲ್ಲಿ ಯಾರನ್ನು ಕತ್ತಲೆಯಲ್ಲಿಡುವ ಪ್ರಶ್ನೆಯೇ ಇಲ್ಲ, ಎಲ್ಲರ ಅಭಿಪ್ರಾಯವನ್ನು ಜಿಲ್ಲಾಡಳಿತಕ್ಕೆ ತಿಳಿಸಿ ಮತ್ತೆ ಜಿಲ್ಲಾಡಳಿತದೊಂದಿಗೆ ಸಭೆ ನಡೆಸುವ ಕುರಿತು ಹೇಳಿದರು.

ಪುರಸಭಾ ಆಡಳಿತಾಧಿಕಾರಿ ಹಾಗೂ ಸಹಾಯಕ ಆಯುಕ್ತ ಭರತ್‌ ಎಸ್‌. ಮಾತನಾಡಿ, ಸರಕಾರ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಸುಸಜ್ಜಿತ ಮೀನು ಮಾರುಕಟ್ಟೆಯನ್ನು ಕಟ್ಟಿಸಿದೆ. ಅದು ಸದುಪಯೋಗವಾಬೇಕು ಮತ್ತು ಮೀನು ಮಾರುಕಟ್ಟೆಯಲ್ಲಿ ಸ್ವತ್ಛತೆ ಕಾಪಾಡಬೇಕು. ಈಗಿರುವ ಮಾರುಕಟ್ಟೆ ಸ್ಥಳಾಂತರಿಸಿ ಸ್ವಚ್ಛತೆ ಕಾಪಾಡುವ ಉದ್ದೇಶ ಸರಕಾರದ್ದು ಎಂದರು.

ಸಭೆಯಲ್ಲಿ ಮಾತನಾಡಿದ ಪುರಸಭಾ ಮಾಜಿ ಸದಸ್ಯ ಕೃಷ್ಣಾ ನಾಯ್ಕ, ಆಸರಕೇರಿ ಈಗಿರುವ ಮೀನು ಮಾರುಕಟ್ಟೆಯನ್ನು ಅಲ್ಲಿಯೇ ಮುಂದುವರಿಸಬೇಕು. ಹೊಸ ಮೀನುಮಾರುಕಟ್ಟೆಯು ಸಂತೆ ಮಾರುಕಟ್ಟೆಯ ಪಕ್ಕದಲ್ಲಿಯೇ ಇದ್ದು ವಾರದ ಸಂತೆ ಮತ್ತು ಬೇರೆ ಬೇರೆ ದಿನಗಳಲ್ಲಿ ಅಲ್ಲಿಗೆ ಮೀನುಗಾರ ಮಹಿಳೆಯರು ಹೋಗುವುದಕ್ಕೂ ತೀರಾ ತೊಂದರೆ ಪಡೆಬೇಕಾಗಬಹುದು ಎಂದರು.

ಮಾಜಿ ಸದಸ್ಯ ವೆಂಕಟೇಶ ನಾಯ್ಕ ಮಾತನಾಡಿ, ಮೀನು ಮಾರುಕಟ್ಟೆ ಇದೆ ಎನ್ನುವ ಉದ್ದೇಶದಿಂದಲೇ ಪುರಸಭೆಯ ಬೇರೆ ಬೇರೆ ಅಂಗಡಿಗಳನ್ನು ಹೆಚ್ಚಿನ ಬೆಲೆಗೆ ಹರಾಜು ಕೂಗಿ ಪಡೆದವರಿದ್ದಾರೆ. ಚೌಥನಿ ಮುಖ್ಯ ರಸ್ತೆ, ಕೋರ್ಟ್‌ ಎದುರು, ಸರ್ಕಲ್‌ ಬಳಿಯಲ್ಲಿ ಮೀನು ಮಾರಾಟ ಮಾಡುತ್ತಿರುವುದರಿಂದ ವಾಹನ ಸಂಚಾರಕ್ಕೆ ತೀವ್ರ ತೊಂದರೆಯಾಗುತ್ತಿದೆ. ಈ ಸಮಸ್ಯೆಗಳನ್ನು ಬಗೆಹರಿಸುವುದನ್ನು ಮೊದಲು ಮಾಡಿ ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.

Advertisement

ಪುರಸಭಾ ಸದಸ್ಯ ಮೋಹನ ನಾಯ್ಕ ಮಾತನಾಡಿ, ಇಲ್ಲಿಯ ತನಕ ಮೀನು ಮಾರುಕಟ್ಟೆ ಸ್ಥಳಾಂತರದ ವಿಷಯದಲ್ಲಿಯೇ ಸಭೆಗಳು ನಡೆಯುತ್ತಿದೆ. ಈ ಹಿಂದೆ ಅಂಗಡಿಕಾರರಿಗೂ ಅನ್ಯಾಯವಾಗಿದೆ. ಅದರ ಕುರಿತೂ ಕೂಡಾ ಸಭೆಯನ್ನು ನಡೆಸಿ ಅವರಿಗೆ ನ್ಯಾಯ ಕೊಡಿ ಎಂದು ಕೋರಿದರು. ಪುರಸಭಾ ಅಂಗಡಿಕಾರರು ಕೋವಿಡ್‌-19 ಲಾಕ್‌ಡೌನ್‌ ಸಮಯದಲ್ಲಿ ತಮ್ಮ ಅಂಗಡಿಗಳು ಮುಚ್ಚಿದ್ದು, ಅವುಗಳ ಭಾಡಿಗೆ ಮನ್ನಾ ಮಾಡಬೇಕು ಎಂದರು.

ಪುರಸಭಾ ಮೀನುಮಾರುಕಟ್ಟೆ ಟೆಂಡರ್‌ ವಹಿಸಿಕೊಂಡ ಕ್ವಾಜಾ ಅವರು ಕೂಡಾ ತಮ್ಮ ಟೆಂಡರ್‌ ಹಣವನ್ನು ಕಡಿತಗೊಳಿಸಬೇಕು ಎಂದರು. ಸಭೆಯಲ್ಲಿ ಪುರಸಭಾ ಸದಸ್ಯರು, ಅಧಿಕಾರಿಗಳು, ಮೀನುಗಾರ ಮಹಿಳೆಯರು, ನಾಗರಿಕರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next