ಕಲಬುರಗಿ: ರಾಜ್ಯದಲ್ಲಿ ಡೆಂಘೀ ಪ್ರಕರಣ ಕಾಣಿಸುತ್ತಿದ್ದು, ಈಗಾಗಲೇ ಜಿಲ್ಲೆಯಲ್ಲಿ ಮುಂಗಾರು ಮಳೆ ಪ್ರಾರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಮನೆ ಹೊರಗಡೆ ಬಿಸಾಕಿದ ಘನತ್ಯಾಜ್ಯ ವಸ್ತುಗಳನ್ನು ಎಸೆಯವುದರಿಂದ ಅಲ್ಲಿ ಮಳೆ ನೀರು ನಿಂತು ಸೊಳ್ಳೆಗಳು ಮೊಟ್ಟೆ ಇಡುತ್ತವೆ.
ಸಂತಾನೋತ್ಪತ್ತಿ ಮಾಡಿ ಸಂತತಿ ಬೆಳೆಸಿ ಮಲೇರಿಯಾ, ಡೆಂಘೀ ಮತ್ತಿತರ ರೋಗ ಹರಡುವಿಕೆಗೆ ಕಾರಣವಾಗುತ್ತವೆ ಎಂದು ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ದೇವಕಿ ಚೆನ್ನಮಲ್ಲಯ್ಯ ಹಿರೇಮಠ ತಿಳಿಸಿದರು. ನಗರದಲ್ಲಿ ಜಿಲ್ಲಾ ಆರೋಗ್ಯಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಏರ್ಪಡಿಸಿದ ಮಲೇರಿಯಾ ಮಾಸಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಜಿಲ್ಲೆಯ ಪ್ರತಿಯೊಂದು ಮನೆ ಮನೆಗೆ ಭೇಟಿ ನೀಡಿ ಸಾರ್ವಜನಿಕರಿಗೆ ಈ ಕುರಿತು ಅರಿವು ಮೂಡಿಸುವುದು ಆರೋಗ್ಯ ಇಲಾಖೆ ಆದ್ಯ ಕರ್ತವ್ಯವಾಗಿದೆ. ಸಾರ್ವಜನಿಕರು ಆರೋಗ್ಯ ಇಲಾಖೆ ಸಿಬ್ಬಂದಿಗೆ ಸಹಕಾರ ನೀಡಬೇಕು ಎಂದರು. ಮುಖ್ಯ ಅತಿಥಿಯಾಗಿದ್ದ ಜಿಲ್ಲಾ ಆರೋಗ್ಯಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ| ಶಿವರಾಜ ಸಜ್ಜನಶೆಟ್ಟಿ ಮಾತನಾಡಿದರು.
ಮಲೇರಿಯಾ ಹರಡಲು ಕಾರಣವಾಗಿರುವ ಸೊಳ್ಳೆಗಳು ಸ್ವಚ್ಛ ನೀರಿನಲ್ಲಿ ಸಂತನೋತ್ಪತ್ತಿ ಮಾಡುವುದರಿಂದ ಮಲೇರಿಯಾ ಜಾಗೃತಿಯನ್ನು ಮೂಡಿಸಬೇಕಾಗಿದೆ. ಈ ನಿಟ್ಟಿನಲ್ಲಿ ಮಲೇರಿಯಾ ಮಾಸವನ್ನು ಆಚರಿಸುವುದು ಸೂಕ್ತವಾಗಿದೆ ಎಂದು ಹೇಳಿದರು. ಜಿಲ್ಲೆಯಲ್ಲಿ ಈಗಾಗಲೇ ಮಲೇರಿಯಾ ಮುಂಜಾಗೃತೆ ಮತ್ತು ನಿಯಂತ್ರಣ ಕ್ರಮಗಳನ್ನು ಅನುಸರಿಸಲಾಗುತ್ತಿದೆ.
ಕಳೆದ ತಿಂಗಳಿಂದ ಜಿಲ್ಲೆಯ ಎಲ್ಲ ಆರೋಗ್ಯ ಸಿಬ್ಬಂದಿಗಳು ಗ್ರಾಮೀಣ ಪ್ರದೇಶಗಳಲ್ಲಿ ಮನೆ ಮನೆಗೆ ಭೇಟಿ ನೀಡಿ ಜನರಲ್ಲಿ ಅರಿವು ಮೂಡಿಸಿ ಸೊಳ್ಳೆಗಳ ಸಂತಾನೋತ್ಪತ್ತಿ ತಾಣಗಳ ನಿರ್ಮೂಲನಾ ಕಾರ್ಯಕ್ರಮ ಜರುಗಿಸಲಾಗುತ್ತಿದೆ. ಮುಂಗಾರು ಮಳೆ ಈಗಾಗಲೇ ಪ್ರಾರಂಭವಾಗಿದ್ದು, ಮನೆಯ ಹೊರಗಡೆ ಘನತ್ಯಾಜ್ಯ ವಸ್ತುಗಳನ್ನು ಎಸೆದರೆ ಅವುಗಳಲ್ಲಿ ನೀರು ನಿಂತು ಸೊಳ್ಳೆ ಸಂತತಿ ಹೆಚ್ಚಾಗುವುರಿಂದ ಸಾರ್ವಜನಿಕರು ಘನ ತ್ಯಾಜ್ಯಗಳನ್ನು ಸೂಕ್ತ ವಿಲೇವಾರಿ ಮಾಡಬೇಕೆಂದು ಮನವಿ ಮಾಡಿದರು.
ಜಿಲ್ಲಾ ಆಸ್ಪತ್ರೆಯ ಜಿಲ್ಲಾ ಶಸ್ತ್ರಜ್ಞ ಡಾ| ಬಾಲಚಂದ್ರ ಜೋಷಿ, ಜಿಲ್ಲಾ ಸರ್ವೇಕ್ಷಣಾ ಧಿಕಾರಿ ಡಾ| ಶಿವಶರಣಪ್ಪಾ, ತಾಲೂಕಾ ಆರೋಗ್ಯಾ ಧಿಕಾರಿ ಡಾ| ರಾಜಕುಮಾರ, ಜಿಲ್ಲೆಯ ಆರೋಗ್ಯ ಇಲಾಖೆ ಕಾರ್ಯಕ್ರಮ ಅಧಿಕಾರಿಗಳು, ಜಿಲ್ಲಾ ಕೀಟ ಶಾಸ್ತ್ರಜ್ಞ ಚಾಮರಾಜ ದೊಡ್ಮನಿ, ಗಂಗೋತ್ರಿ, ಜಿಲ್ಲಾ ವಿಬಿಡಿ ಸಮಾಲೋಚಕ ಕಾರ್ಣಿಕ ಕೋರೆ ಹಾಜರಿದ್ದರು.
ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿ ಕಾರಿ ಡಾ| ಬಸವರಾಜ ಗುಳಗಿ ಅಧ್ಯಕ್ಷತೆ ವಹಿಸಿದ್ದರು. ನರ್ಸಿಂಗ ಶಾಲೆಯ ವಿದ್ಯಾರ್ಥಿಗಳು ಜಾಥಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಘೋಷಣಾ ಫಲಕ ಪ್ರದರ್ಶಿಸಿದರಲ್ಲದೇ ವಿವಿಧ ಘೋಷಣೆ ಕೂಗಿ ಸಾರ್ವಜನಿಕರ ಗಮನ ಸೆಳೆದರು.