Advertisement
ಮೈಲಾಟಿಯಲ್ಲಿ 24.84 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿದ ಉದುಮ ಸ್ಪಿನ್ನಿಂಗ್ ಮಿಲ್ 2011ರ ಜನವರಿ 28ರಂದು ಅಂದಿನ ಕೈಗಾರಿಕಾ ಸಚಿವ ರಾಗಿದ್ದ ಎಳಮರಂ ಕರೀಂ ಉದ್ಘಾಟಿಸಿದ್ದರು. ಕೇವಲ ಏಳು ತಿಂಗಳಲ್ಲಿ ಕಾಮಗಾರಿಯನ್ನು ಪೂರ್ತಿಗೊಳಿಸಿದ ಈ ಮಿಲ್‌ನ ಬಗ್ಗೆ ಬಹಳಷ್ಟು ನಿರೀಕ್ಷೆಯಿರಿಸಿಕೊಳ್ಳಲಾಗಿತ್ತು. ಆದರೆ ಇನ್ನೂ ಸ್ಪಿನ್ನಿಂಗ್ ಮಿಲ್ ಕಾರ್ಯಾರಂಭ ಗೊಳ್ಳದೆ ಇರುವುದರಿಂದ ನಿರೀಕ್ಷೆಗಳೆಲ್ಲ ಹುಸಿಯಾಗುತ್ತಿದ್ದು, ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಜೋಡಿಸಿದ ಯಂತ್ರಗಳು ತುಕ್ಕು ಹಿಡಿಯುತ್ತಿವೆ. ಕೇರಳ ಟೆಕ್ಸ್‌ಟೈಲ್ ಕೋರ್ಪರೇಶನ್ ಸ್ವಾಧೀನದಲ್ಲಿರುವ ಉದುಮ ಸ್ಪಿನ್ನಿಂಗ್ ಮಿಲ್‌ನಂತೆ ಅದೇ ವರ್ಷದಲ್ಲಿ ಆಲಪ್ಪುಳದ ಹರಿಪಾಡ್ ಮತ್ತು ಕಣ್ಣೂರು ಜಿಲ್ಲೆಯ ಪಿಣರಾಯಿಯಲ್ಲಿ ಮಿಲ್‌ಗಳನ್ನು ಸ್ಥಾಪಿಸಲಾಗಿತ್ತು. ಈ ಮಿಲ್‌ಗಳು ಉದ್ಘಾಟನೆಗೊಳ್ಳದೆ ಇದೇ ಅವಸ್ಥೆಯಲ್ಲಿವೆೆ.
Related Articles
ಹಿಂದಿನ ಯುಡಿಎಫ್ ಸರಕಾರ ಅಧಿಕಾರಕ್ಕೆ ಬರುವ ಕೆಲವೇ ತಿಂಗಳ ಹಿಂದೆ ಮಿಲ್‌ನ್ನು ಉದ್ಘಾಟಿಸಲಾಗಿತ್ತು. 160 ಮಂದಿಗೆ ಉದ್ಯೋಗ ಕಲ್ಪಿಸುವ ಅವಕಾಶವಿತ್ತು. ಉದ್ಯೋಗಕ್ಕಾಗಿ ಎಡರಂಗ ಸರಕಾರ 100ರಷ್ಟು ಮಂದಿ ಯನ್ನು ಆಯ್ಕೆ ಮಾಡಿ ತರಬೇತಿ ಗಾಗಿ ಕಳುಹಿಸಿತ್ತು. ನೇಮಕಾತಿ ನಡೆಯುವ ಹೊತ್ತಿಗೆ ಚುನಾವಣೆ ಘೋಷಣೆಯಾಗಿತ್ತು. ಅಧಿಕಾರಕ್ಕೆ ಬಂದ ಯುಡಿಎಫ್ ಸರಕಾರ ಎಲ್‌ಡಿಎಫ್ ಸರಕಾರ ನೇಮಕಾತಿಗಾಗಿ ಉದ್ದೇಶಿಸಿದ ವ್ಯಕ್ತಿಗಳನ್ನು ನೇಮಿ ಸಲು ಹಿಂದೇಟು ಹಾಕಿತು. ಈ ಹಿನ್ನೆಲೆಯಲ್ಲಿ ಉದ್ಯೋಗಾರ್ಥಿಗಳು ಹೈಕೋರ್ಟ್ ಮೊರೆ ಹೋಗಿದ್ದು, ಕಳೆದ ಆರು ವರ್ಷಗಳಿಂದ ಅಂತಿಮ ತೀರ್ಮಾನವಾಗದೆ ನ್ಯಾಯಾಲಯದ ಪರಿಗಣನೆಯಲ್ಲಿದೆ.
Advertisement
ಉದೋಗಾರ್ಥಿಗಳ ನೇಮಕಾತಿಯ ಬಗ್ಗೆ ನ್ಯಾಯಾಲಯದ ತೀರ್ಪಿಗಾಗಿ ಕಾಯುತ್ತಿರುವುದರಿಂದಾಗಿ ಸ್ಪಿನ್ನಿಂಗ್ ಮಿಲ್ ಆರಂಭಿಸಲು ವಿಳಂಬವಾಗುತ್ತಿದೆ ಎಂಬುದಾಗಿ ಕಾರಣ ನೀಡಲಾಗುತ್ತಿದೆ. “ಟ್ರಯಲ್ ರನ್’ ನ ಬಳಿಕ ಮುಚ್ಚಲ್ಪಟ್ಟ ಮಿಲ್‌ನ ತಾಂತ್ರಿಕ ವಿಭಾಗದಲ್ಲಿ ನೇಮಿತರಾದ ಕ್ವಾಲಿಟಿ ಮೆನೇಜರ್, ಕಮರ್ಶಿಯಲ್ ಮೆನೇಜರ್, ಎಚ್.ಆರ್. ಮೆನೇಜರ್, ಮೈಂಟೆನೆನ್ಸ್ ಮೆನೇಜರ್, ಪ್ರೊಜೆಕ್ಟ್ ಮೆನೇಜರ್ ಮೊದಲಾದ ಹುದ್ದೆಗಳಲ್ಲಿದ್ದವರು ವಿವಿಧ ಇಲಾಖೆಗಳಿಗೆ ವರ್ಗಾವಣೆ ಗೊಳ್ಳುವುದರೊಂದಿಗೆ ಈ ಸಂಸ್ಥೆಯಲ್ಲಿ ಇದೀಗ ಕೇವಲ ಕಾವಲುಗಾರನೋರ್ವ ಮಾತ್ರ ಉಳಿದುಕೊಂಡಿದ್ದಾರೆ. ಫಿಟ್ಟರ್‌ಗಳು, ಇಲೆಕ್ಟ್ರಿಶಿಯನ್‌ಗಳೆಲ್ಲ ಉದ್ಯೋಗ ಬಿಟ್ಟು ಹೋದರು.
ಹತ್ತಿಯಿಂದ ನೂಲು ತಯಾರಿಸಿ ಇವುಗಳನ್ನು ಬಟ್ಟೆ ಹೆಣೆಯುವ ಮಿಲ್ ಗಳಿಗೆ ಕಳುಹಿಸಬೇಕು. ಆದರೆ ಇಲ್ಲಿ ಈ ವರೆಗೂ ನೂಲು ಉತ್ಪಾದನೆ ಯಾಗದಿರುವುದರಿಂದ ಮಿಲ್‌ನ ಬಗ್ಗೆ ಚಿಂತಿಸಬೇಕಾದ ಅನಿವಾರ್ಯತೆ ನಿರ್ಮಾಣವಾಗಿದೆ. ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿದ ಈ ಸ್ಪಿನ್ನಿಂಗ್ ಮಿಲ್‌ನ ಭವಿಷ್ಯ ಏನು ಎಂಬ ಬಗ್ಗೆ ಸ್ಪಷ್ಟವಾಗಿ ಏನನ್ನೂ ಹೇಳುವ ಸ್ಥಿತಿಯಲ್ಲಿಲ್ಲ. ಈಗಾಗಲೇ ಕೇರಳದಲ್ಲಿ ಮುಚ್ಚಲ್ಪಟ್ಟ ಸಾರ್ವ ಜನಿಕ ಫ್ಯಾಕ್ಟರಿಗಳನ್ನು ಶೀಘ್ರವೇ ತೆರೆಯುವುದಾಗಿ ದಿನಗಳ ಹಿಂದೆ ರಾಜ್ಯ ಸರಕಾರದ ಸಚಿವ ಸಂಪುಟ ಘೋಷಿಸಿದ್ದರೂ, ಈ ಯಾದಿಯಲ್ಲಿ ಉದುಮ ಸ್ಪಿನ್ನಿಂಗ್ ಮಿಲ್ ಇಲ್ಲದಿರು ವುದು ಕಾಸರಗೋಡಿನ ಜನರನ್ನು ನಿರಾಸೆಗೊಳಿಸಿದೆ.