Advertisement
ಜಲಾಶಯ ಭರ್ತಿಗೆ ಒಂದು ಟಿಎಂಸಿಗಿಂತ ಕಡಿಮೆ ಬಾಕಿ ಉಳಿದಿದ್ದು, ಯಾವ ಸಮಯದಲ್ಲಾದರೂ ನದಿಗೆ ನೀರು ಹರಿಬಿಡುವ ಸಾಧ್ಯತೆಯಿದೆ. ಜಿಲ್ಲೆಯ ಜೀವಜಲವಾಗಿರುವ ಕಾರಂಜಾ ಜಲಾಶಯ 7.69 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿದ್ದು, ಶನಿವಾರದವರೆಗೆ 6.294 ಟಿಎಂಸಿ ನೀರು ಸಂಗ್ರಹವಾಗಿದೆ.
Related Articles
Advertisement
ಮಾಂಜ್ರಾದ ಉಪನದಿಯಾದ ಕಾರಂಜಾ ಅಥವಾ ನಾರಂಜಾ ನದಿ ತೆಲಂಗಾಣದಲ್ಲಿ ಹುಟ್ಟಿ ಕರ್ನಾಟಕ ಪ್ರವೇಶಿಸುತ್ತದೆ. ಬೀದರ-ಹುಮನಾಬಾದ ತಾಲೂಕುಗಳ ನಡುವೆ ಹರಿಯುತ್ತ ಭಾಲ್ಕಿ ತಾಲೂಕು ಪ್ರವೇಶಿಸುವ ಮಾರ್ಗವಾದ ಹಾಲಹಳ್ಳಿಯ ಬಳಿ ಈ ಜಲಾಶಯ ನಿರ್ಮಿಸಲಾಗಿದೆ. 1960ರಲ್ಲಿ ಕೇವಲ 9 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಆರಂಭವಾದ ಜಲಾಶಯ ಕಾಮಗಾರಿಗೆ ಈವರೆಗೆ 564 ಕೋಟಿ ರೂ. ವೆಚ್ಚವಾಗಿದೆ.
50 ವರ್ಷದಲ್ಲಿ ಆರೇಳು ಬಾರಿ ಭರ್ತಿ
ಕಾರಂಜಾ ಜಲಾನಯನದ ಒಟ್ಟು 782 ಚ.ಕಿ.ಮೀ. ಪ್ರದೇಶ ಪೈಕಿ ತೆಲಂಗಾಣ 565 ಚ.ಕಿ.ಮೀ. ಬೀದರ ಜಿಲ್ಲೆ 217 ಚ.ಕಿ.ಮೀ ವಿಸ್ತೀರ್ಣ ಹೊಂದಿದೆ. ಒಟ್ಟಾರೆ 7.69 ಟಿಎಂಸಿ ಸಾಮರ್ಥ್ಯದ ಜಲಾಶಯದಲ್ಲಿ 7 ಟಿಎಂಸಿ ನೀರನ್ನು ಹಿಡಿದಿಟ್ಟುಕೊಳ್ಳಬಹುದು. ಒಳ ಹರಿವು ಹೆಚ್ಚಾದರೆ ಬೀದರ-ಹುಮನಾಬಾದ ತಾಲೂಕಿನ ಹತ್ತಾರು ಗ್ರಾಮಗಳಿಗೆ ಹಿನ್ನೀರು ನುಗ್ಗುವ ಆತಂಕ ಇದೆ. ಜಲಾಶಯದಲ್ಲಿ ಕಳೆದ 1997-98, 2008-09, 2010-11ನೇ ಸಾಲಿನಲ್ಲಿ 6 ಟಿಎಂಸಿ ನೀರು ಸಂಗ್ರಹವಾಗಿತ್ತು. ನಂತರ 2016, 2020 ಮತ್ತು 2021ರಲ್ಲಿ ಗರಿಷ್ಠ ಮಟ್ಟ ತಲುಪಿದ್ದರಿಂದ ನದಿಗೆ ನೀರು ಬಿಡಲಾಗಿತ್ತು. ಈಗ ಮತ್ತೆ ಮಳೆ ಅಬ್ಬರದಿಂದ ಜಲಾಶಯಕ್ಕೆ ಕಳೆ ತಂದುಕೊಟ್ಟಿದೆ.
ಜಿಲ್ಲೆಯ ಕಾರಂಜಾ ಜಲಾಶಯ 7.69 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿದ್ದು, ಆ.6ರವರೆಗೆ 6.294 ಟಿಎಂಸಿ ನೀರು ಸಂಗ್ರಹವಾಗಿದೆ. ಒಳ ಹರಿವು ಸದ್ಯ ಕಡಿಮೆಯಾಗಿದ್ದು, 45 ಕ್ಯೂಸೆಕ್ ದಾಖಲಾಗಿದೆ. ಜಲಾನಯನ ಪ್ರದೇಶದಲ್ಲಿ ಉತ್ತಮ ಮುಂಗಾರು ಆರಂಭದಿಂದ 1.42 ಟಿಎಂಸಿ ನೀರು ಕಾರಂಜಾ ಒಡಲು ಸೇರಿದೆ. 6.5 ಟಿಎಂಸಿಗೆ ಹೆಚ್ಚಿದಲ್ಲಿ ಜಲಾಶಯದಿಂದ ನದಿಗೆ ನೀರು ಹರಿಬಿಡಲಾಗುವುದು. –ಭರತಕುಮಾರ, ಸಹಾಯಕ ಇಂಜಿನಿಯರ್, ಕಾರಂಜಾ ಜಲಾಶಯ.
–ಶಶಿಕಾಂತ ಬಂಬುಳಗೆ