Advertisement

HD ರೇವಣ್ಣನ ಬಸವನಗುಡಿ ಮನೆಗೆ ಸಂತ್ರಸ್ತೆಯನ್ನು ಕರೆದೊಯ್ದು ಮಹಜರು

11:36 PM May 06, 2024 | Team Udayavani |

ಬೆಂಗಳೂರು: ಮನೆಕೆಲಸದಾಕೆ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಪ್ರಕರಣ ಸಂಬಂಧ ಸೋಮವಾರ ಎಸ್‌ಐಟಿ ಅಧಿಕಾರಿಗಳು ಆರೋಪಿ ಎಚ್‌. ಡಿ.ರೇವಣ್ಣಗೆ ಸೇರಿದ ಬೆಂಗಳೂರಿನ ಬಸವನಗುಡಿ ಮನೆಗೆ ಸಂತ್ರಸ್ತೆಯನ್ನು ಕರೆದೊಯ್ದು ಸ್ಥಳ ಮಹಜರು ನಡೆಸಿದ್ದಾರೆ.

Advertisement

ಬೆಳಗ್ಗೆ 11.30ರ ಸುಮಾರಿಗೆ ಬಿಗಿ ಪೊಲೀಸ್‌ ಭದ್ರತೆಯಲ್ಲಿ ಸಂತ್ರಸ್ತೆಯನ್ನು ಕರೆದೊಯ್ದ ಎಸ್‌ಐಟಿ ಅಧಿಕಾರಿಗಳು ಸುಮಾರು ನಾಲ್ಕೂವರೆ ಗಂಟೆಗಳ ಕಾಲ ರೇವಣ್ಣನ ಮನೆಯಲ್ಲಿ ಮಹಜರು ನಡೆಸಿದ್ದಾರೆ. ಈ ವೇಳೆ ರೇವಣ್ಣ ಮತ್ತು ಪ್ರಜ್ವಲ್‌ ರೇವಣ್ಣ, ಮನೆಯ ಪಡಸಾಲೆ, ಅಡುಗೆ ಮನೆ, ಪಾರ್ಕಿಂಗ್‌ ಸ್ಥಳ, ಬಾಲ್ಕನಿ, ಸ್ನಾನದ ಕೋಣೆ ಸಹಿತ ವಿವಿಧ ಸ್ಥಳಗಳಲ್ಲಿ ದೌರ್ಜನ್ಯ ಎಸಗಿರುವುದಾಗಿ ಸಂತ್ರಸ್ತೆ ಹೇಳಿದ್ದರಿಂದ ಅಲ್ಲೆಲ್ಲ ಮಹಜರು ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಪ್ರಕ್ರಿಯೆ ವೀಡಿಯೋ ಚಿತ್ರೀಕರಣ
ಸ್ಥಳ ಮಹಜರಿನ ಪ್ರತಿ ಹಂತವನ್ನು ಎಸ್‌ಐಟಿ ಅಧಿಕಾರಿಗಳು ತಮ್ಮ ಕೆಮರಾದಲ್ಲಿ ಚಿತ್ರೀಕರಿಸಿಕೊಂಡಿದ್ದಾರೆ. ಜತೆಗೆ ಲ್ಯಾಪ್‌ಟಾಪ್‌, ಕಿಬೋರ್ಡ್‌, ಪ್ರಿಂಟರ್‌ ಕೊಂಡೊಯ್ದು ಸ್ಥಳದಲ್ಲೇ ಸಂತ್ರಸ್ತೆಯ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ. ಆದರೆ ಸ್ಥಳ ಮಹಜರು ಸಂದರ್ಭದಲ್ಲಿ ರೇವಣ್ಣ ಕುಟುಂಬದ ಯಾವೊಬ್ಬ ಸದಸ್ಯರೂ ಇರಲಿಲ್ಲ.ಮತ್ತೊಂದೆಡೆ ರೇವಣ್ಣ ಪರ ವಕೀಲ ಗೋಪಾಲ್‌ ಸಹಿತ ಯಾರೊಬ್ಬರಿಗೂ ಮನೆಯೊಳಗೆ ಪ್ರವೇಶ ಇರಲಿಲ್ಲ. ಅನಂತರ ಮಹಜರು ಪತ್ರಕ್ಕೆ ಮನೆಯ ಭದ್ರತಾ ಸಿಬಂದಿಯ ಸಹಿ ಪಡೆದು ಸಂತ್ರಸ್ತೆಯನ್ನು ಕರೆದೊಯ್ಯಲಾಯಿತು ಎಂದು ಮೂಲಗಳು ತಿಳಿಸಿವೆ.

ಪ್ರಕರಣದ ಹಿನ್ನೆಲೆ
ಹೊಳೆನರಸೀಪುರ ನಗರ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿದ್ದ ಲೈಂಗಿಕ ದೌರ್ಜನ್ಯ ಆರೋಪದ ಪ್ರಕರಣದಲ್ಲಿ ಮಾಜಿ ಸಚಿವ ಎಚ್‌.ಡಿ.ರೇವಣ್ಣ ಮತ್ತು ಸಂಸದ ಪ್ರಜ್ವಲ್‌ ರೇವಣ್ಣ ಆರೋಪಿಗಳಾಗಿದ್ದಾರೆ. ಈ ಹಿಂದೆ ಸಂತ್ರಸ್ತೆಯು ರೇವಣ್ಣ ಅವರ ಹೊಳೆನರಸೀಪುರದ ನಿವಾಸ ಮತ್ತು ಬಸವನಗುಡಿಯಲ್ಲಿನ ನಿವಾಸದಲ್ಲಿ ಮನೆಗೆಲಸ ಮಾಡಿಕೊಂಡಿದ್ದಾಗ ಆರೋಪಿಗಳು ಆಕೆ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದರು ಎಂಬ ಬಗ್ಗೆ ದೂರು ನೀಡಲಾಗಿತ್ತು.

ರೇವಣ್ಣ ಆಪ್ತ ಸತೀಶ್‌ಬಾಬು 8 ದಿನ ಎಸ್‌ಐಟಿಗೆ
ಬೆಂಗಳೂರು: ಮೈಸೂರಿನ ಕೆ.ಆರ್‌.ನಗರ ಠಾಣೆಯಲ್ಲಿ ದಾಖಲಾಗಿದ್ದ ಸಂತ್ರಸ್ತೆಯೊಬ್ಬರ ಅಪಹರಣ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಮಾಜಿ ಸಚಿವ ಎಚ್‌.ಡಿ.ರೇವಣ್ಣ ಆಪ್ತ ಸತೀಶ್‌ ಬಾಬಣ್ಣನನ್ನು ಎಸ್‌ಐಟಿ ಅಧಿಕಾರಿಗಳು 8 ದಿನಗಳ ಕಾಲ ವಶಕ್ಕೆ ಪಡೆದುಕೊಂಡಿದ್ದಾರೆ.

Advertisement

ಸೋಮವಾರ ಆರೋಪಿಯನ್ನು ಕೋರ್ಟಿಗೆ ಹಾಜರುಪಡಿಸಿದ ಎಸ್‌ಐಟಿ ಅಧಿಕಾರಿಗಳು, ಪ್ರಮುಖ ಆರೋಪಿ ರೇವಣ್ಣ ವಿಚಾರಣೆಗೆ ಸರಿಯಾಗಿ ಸ್ಪಂದಿಸುತ್ತಿಲ್ಲ. ಹೀಗಾಗಿ ಅವರ ಸಮ್ಮುಖದಲ್ಲೇ ಈತನ ವಿಚಾರಣೆ ನಡೆಸಬೇಕಿದೆ. ಹೀಗಾಗಿ ಆರೋಪಿಯನ್ನು 10 ದಿನಗಳ ಕಾಲ ವಶಕ್ಕೆ ನೀಡುವಂತೆ ಎಸ್‌ಐಟಿ ಕೋರಿತ್ತು. ಅದನ್ನು ಪುರಸ್ಕರಿಸಿದ ಕೋರ್ಟ್‌ ಸತೀಶ್‌ ಬಾಬುವನ್ನು 8 ದಿನಗಳ ಕಾಲ ವಶಕ್ಕೆ ನೀಡಿದೆ. ಸದ್ಯ ಆರೋಪಿಯನ್ನು ಸಿಐಡಿ ಕಚೇರಿಯಲ್ಲಿರುವ ವಿಚಾರಣ ಕೊಠಡಿಯಲ್ಲಿ ಇರಿಸಲಾಗಿದೆ.

ಪ್ರಕರಣದ ಪ್ರಮುಖ ಆರೋಪಿ ಎಚ್‌.ಡಿ.ರೇವಣ್ಣ ಸೂಚನೆ ಮೇರೆಗೆ ಸತೀಶ್‌ ಬಾಬಣ್ಣ ಮಹಿಳೆಯನ್ನು ಆಕೆಯ ಮನೆಯಿಂದ ಕರೆದುಕೊಂಡು ಹೋಗಿದ್ದ. ರೇವಣ್ಣನ ಆಪ್ತ ರಾಜಗೋಪಾಲ್‌ ಎಂಬವರ ಹುಣಸೂರು ತಾಲೂಕಿನ ಕಾಳೇನಹಳ್ಳಿಯ ತೋಟದ ಮನೆಯಲ್ಲಿ ಆಕೆಯನ್ನು ಗೃಹ ಬಂಧನದಲ್ಲಿ ಇರಿಸಿದ್ದ. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿದ ಎಸ್‌ಐಟಿ ಅಧಿಕಾರಿಗಳು ಆಕೆಯನ್ನು ರಕ್ಷಿಸಿ ಬೆಂಗಳೂರಿಗೆ ಕರೆ ತಂದಿದ್ದರು. ಬಳಿಕ ಸತೀಶ್‌ ಬಾಬಣ್ಣನನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಅನಂತರ ರೇವಣ್ಣನನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next