ವಿದೇಶದಲ್ಲಿರುವ ಕನ್ನಡಿಗರಿಗೆ ಈಗ ಸಿನಿಮಾ ಮೇಲಿನ ಪ್ರೀತಿ ಹೆಚ್ಚಾಗಿದೆ. ಆ ಕಾರಣಕ್ಕೆ ಈಗಂತೂ ಕನ್ನಡದಲ್ಲಿ ಸಾಫ್ಟ್ವೇರ್ ಮಂದಿ ಸಂಖ್ಯೆ ಹೆಚ್ಚುತ್ತಿದೆ. ಆ ಸಾಲಿಗೆ “ಮಹಿರ’ ಎಂಬ ಹೊಸ ಚಿತ್ರ ಸೇರ್ಪಡೆಯಾಗಿದೆ. ಈ ಚಿತ್ರದ ಮೂಲಕ ಮಹೇಶ್ ಗೌಡ ನಿರ್ದೇಶಕರಾಗಿದ್ದಾರೆ. ಇದಕ್ಕೂ ಮುನ್ನ ಒಂದಷ್ಟು ಕಿರುಚಿತ್ರಗಳನ್ನು ನಿದೇಶಿಸಿದ ಅನುಭವ ಅವರಿಗಿದೆ.
ಲಂಡನ್‌ನಲ್ಲಿ ಮೂರು ವರ್ಷಗಳ ಕಾಲ ಎಂಜಿನಿಯರ್ ಆಗಿ ಕೆಲಸ ಮಾಡಿದ್ದ ಮಹೇಶ್ ಗೌಡ, ಬಿಡುವಿದ್ದಾಗೆಲ್ಲಾ ಗೆಳೆಯರ ಜೊತೆ ಚರ್ಚೆ ಮಾಡಿ, ಆ ಬಳಿಕ ಒಂದು ಕಥೆ ಬರೆದು, ಚಿತ್ರ ಮಾಡುವ ಕನಸು ಕಂಡು, ಇದ್ದ ಕೆಲಸಕ್ಕೆ ರಾಜಿನಾಮೆ ನೀಡಿ 2013 ರಲ್ಲಿ ಇಲ್ಲಿಗೆ ಬಂದು ಸುನೀಲ್‌ಕುಮಾರ್ ದೇಸಾಯಿ ಬಳಿ ಕೆಲಸ ಮಾಡಿದ್ದಾರೆ. ಆ ನಂತರ “ಮಹಿರ’ ಚಿತ್ರ ನಿರ್ದೇಶನ ಮಾಡಿದ್ದಾರೆ.
“ಮಹಿರ’ ಅಂದರೆ, ಅದೊಂದು ಸಂಸ್ಕೃತ ಪದ. ಹೆಣ್ಣಿನ ಶಕ್ತಿ ಮತ್ತು ಬುದ್ಧಿ ಎಂದಿಗೂ ಬಿಟ್ಟು ಕೊಡಲ್ಲ ಎಂಬರ್ಥ “ಮಹಿರ’ ಶೀರ್ಷಿಕೆಯದ್ದು. ಕೇವಲ ಮೂರು ದಿನದಲ್ಲಿ ನಡೆಯುವ ಕಥೆ ಇದಾಗಿದ್ದು, ಇಲ್ಲಿ ಮುಖ್ಯವಾಗಿ ತಾಯಿ-ಮಗಳ ಸಂಬಂಧವಿದೆ. ಮೊದಲರ್ಧ ಎಲ್ಲವೂ ಸಲೀಸಾಗಿಯೇ ಸಾಗುವ ಕಥೆಯಲ್ಲಿ ದ್ವಿತಿಯಾರ್ಧದಲ್ಲಿ ಆಕ್ಷನ್ ಜೊತೆಗೆ ಥ್ರಿಲ್ಲರ್ ಅಂಶಗಳು ಸೇರಿಕೊಂಡು ಒಂದಷ್ಟು ಕುತೂಹಲ ಮೂಡಿಸುತ್ತವೆ ಎಂಬುದು ನಿರ್ದೇಶಕರ ಮಾತು.
ಸಮುದ್ರ ದಡದಲ್ಲಿ ಅಂಗಡಿಯೊಂದನ್ನು ಇಟ್ಟುಕೊಂಡು ಬದುಕು ಸವೆಸುವ ಆಕೆಯ ಲೈಫಲ್ಲಿ ಒಂದು ಘಟನೆ ಜರುಗುತ್ತದೆ. ಆಮೇಲೆ ಏನೆಲ್ಲಾ ಆಗುತ್ತೆ ಎಂಬುದು ಕತೆ. ಇಲ್ಲಿ ತಾಯಿಯ ಕೆಲ ಗೊತ್ತಿರದ ಗುಣಗಳು ಮಗಳಿಗೆ ಗೊತ್ತಾಗುತ್ತಾ ಹೋಗುತ್ತೆ. ಅಲ್ಲೊಂದಷ್ಟು ಪ್ರಶ್ನೆಗಳು ಎದುರಾಗುತ್ತವೆ. ಆ ಪ್ರಶ್ನೆಗೆ ಉತ್ತರ ಸಿನಿಮಾದಲ್ಲಿ ಸಿಗುತ್ತೆ ಎಂಬುದು ನಿರ್ದೇಶಕರ ಅಂಬೋಣ.
ಮಂಗಳೂರಿನ ರಂಗಭೂಮಿ ಕಲಾವಿದೆ ವರ್ಜೀನಿಯ ರಾಡ್ರಗ್ಯುಸ್ ಮೊದಲ ಸಲ ಕನ್ನಡದಲ್ಲಿ ನಟಿಸಿದ್ದು, ಅವರಿಲ್ಲಿ ಅಮ್ಮನಾಗಿ ಕಾಣಿಸಿಕೊಂಡಿದ್ದಾರೆ. ಚೈತ್ರ ಆಚಾರ್ ಮಗಳ ಪಾತ್ರ ಮಾಡಿದ್ದಾರೆ. ಉಳಿದಂತೆ ಬಾಲಾಜಿ ಮನೋಹರ್, ರಾಜ್ ಶೆಟ್ಟಿ, ನಟಿಸಿದ್ದಾರೆ. ಇನ್ನು, ಚಿತ್ರದಲ್ಲಿ ಆ್ಯಕ್ಷನ್ ದೃಶ್ಯಗಳು ಇರುವುದರಿಂದ ವರ್ಜೀನಿಯಾ ಅವರು ಚೇತನ್ ಡಿಸೋಜ ಬಳಿ ತರಬೇತಿ ಪಡೆದಿದ್ದು, ಯಾವುದೇ ಡ್ನೂಪ್ ಇಲ್ಲದೆ ಸಾಹಸ ಮಾಡಿರುವುದು ವಿಶೇಷವಂತೆ.
ಬೆಂಗಳೂರು, ಪುತ್ತೂರು, ಹೊನ್ನಾವರ, ಮಂಗಳೂರು ಕಡೆಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ನಿಲಿಮರಾವ್, ರಾಕೇಶ್.ಯು.ಪಿ ಸಂಗೀತವಿದೆ. ಮಿಧುನ್ ಮುಕುಂದನ್ ಹಿನ್ನಲೆ ಸಂಗೀತವಿದೆ. ಲಂಡನ್‌ನಲ್ಲಿರುವ ವಿವೇಕ್ ಕೊಡಪ್ಪಚಿತ್ರ ನಿರ್ಮಿಸಿದ್ದಾರೆ. ಲಂಡನ್‌ನಲ್ಲಿ ಪ್ರದರ್ಶನಗೊಂಡ ಬಳಿಕ ನವೆಂಬರ್‌ನಲ್ಲಿ ಕರ್ನಾಟಕದಲ್ಲಿ ಬಿಡುಗಡೆಯಾಗಲಿದೆ.