Advertisement

ಮಹಿರ ಮಹಿಮೆ

08:34 PM Jun 27, 2019 | Team Udayavani |

ಹಲವು ದಿನಗಳಿಂದ “ಮಹಿರ’ ಎಂಬ ಚಿತ್ರದ ಹೆಸರು ಗಾಂಧಿನಗರದಲ್ಲಿ ಓಡಾಡುತ್ತಲೇ ಇದೆ. ಆದರೆ, ಆ ಚಿತ್ರ ಯಾವಾಗ ತೆರೆಕಾಣುತ್ತದೆ ಎಂಬ ಮಾಹಿತಿ ಇರಲಿಲ್ಲ. ಈಗ ಚಿತ್ರತಂಡ ಬಿಡುಗಡೆಯ ದಿನಾಂಕವನ್ನು ಘೋಷಿಸಿದೆ. ಚಿತ್ರ ಜುಲೈ 26 ರಂದು ತೆರೆಕಾಣುತ್ತಿದೆ. ಈ ಮೂಲಕ ಹೊಸಬರ ತಂಡ ಅದೃಷ್ಟ ಪರೀಕ್ಷೆಗೆ ಇಳಿಯುತ್ತಿದೆ. “ಮಹಿರ’ ಒಂದು ಆ್ಯಕ್ಷನ್‌ ಥ್ರಿಲ್ಲರ್‌ ಸಿನಿಮಾವಾಗಿದ್ದು, ತಾಯಿ ಹಾಗೂ ಮಗಳ ನಡುವೆ ಸಾಗುತ್ತದೆಯಂತೆ. ಖುಷಿಯಾಗಿದ್ದ ತಾಯಿ-ಮಗಳ ನಡುವೆ ಘಟನೆಯೊಂದು ನಡೆದು ಅದು ಯಾವ ರೀತಿ ಅವರನ್ನು ತೊಂದರೆಗೆ ಸಿಲುಕಿಸುತ್ತದೆ ಮತ್ತು ಅದರಿಂದ ಹೊರಬರಲು ಹೇಗೆ ಪ್ರಯತ್ನಿಸುತ್ತಾರೆಂಬುದೇ ಚಿತ್ರದ ಕಥಾಹಂದರ. ಈ ಕಥೆಯನ್ನು ತುಂಬಾ ಸಾಹಸಮಯವಾಗಿ ಹೇಳಲಾಗಿದೆಯಂತೆ. ಮಹೇಶ್‌ ಗೌಡ ಈ ಚಿತ್ರದ ನಿರ್ದೇಶಕರು. ಲಂಡನ್‌ನಲ್ಲಿ ಉದ್ಯೋಗದಲ್ಲಿದ್ದ ಮಹೇಶ್‌ ಸಿನಿಮಾ ಮೇಲಿನ ಆಸಕ್ತಿಯಿಂದ ಲಂಡನ್‌ ಫಿಲಂ ಅಕಾಡೆಮಿಯಿಂದ ನಿರ್ದೇಶನದ ತರಬೇತಿ ಪಡೆದು ಬಂದು “ಮಹಿರ’ ಚಿತ್ರವನ್ನು ನಿರ್ದೇಶಿಸಿದ್ದಾರೆ.

Advertisement

ನಿರ್ದೇಶಕ ಮಹೇಶ್‌ ಅವರಿಗೆ “ಮಹಿರ’ ಹೊಸ ಬಗೆಯ ಸಿನಿಮಾವಾಗಿ ಪ್ರೇಕ್ಷಕರ ಗಮನ ಸೆಳೆಯುವ ವಿಶ್ವಾಸವಿದೆ. ಜೊತೆಗೆ ಇನ್ನೊಂದಿಷ್ಟು ಹೊಸ ಸಿನಿಮಾ ಮೇಕರ್ಗಳಿಗೆ ಪ್ರೇರಣೆಯಾಗಬಹುದೆಂಬ ಭರವಸೆಯೂ ಇದೆ. “ಇದೊಂದು ಸಸ್ಪೆನ್ಸ್‌ ಥ್ರಿಲ್ಲರ್‌ ಸಿನಿಮಾ. ತಾಯಿ ಮಗಳ ಸುತ್ತ ಸಾಗುತ್ತದೆ. ಚಿತ್ರದಲ್ಲಿ ತನಿಖಾಧಿಕಾರಿಯ ಪಾತ್ರವೂ ಪ್ರಮುಖವಾಗಿದೆ’ ಎಂದು ಚಿತ್ರದ ಬಗ್ಗೆ ವಿವರಕೊಟ್ಟರು. ಸಾಕಷ್ಟು ಟ್ವಿಸ್ಟ್‌ಗಳೊಂದಿಗೆ ಸಾಗುವ ಚಿತ್ರ ಕ್ಷಣ ಕ್ಷಣಕ್ಕೂ ಪ್ರೇಕ್ಷಕರಿಗೆ ರೋಚಕ ಅನುಭವ ಕೊಡುತ್ತದೆ ಎನ್ನಲು ಮರೆಯಲಿಲ್ಲ. ಈ ಚಿತ್ರವನ್ನು ವಿವೇಕ್‌ ಕೋಡಪ್ಪ ನಿರ್ಮಿಸಿದ್ದಾರೆ. ಚಿತ್ರದಲ್ಲಿ ನಟಿಸಿದ ವರ್ಜಿನಿಯ ರಾಡ್ರಿಗಸ್‌, ಚೈತ್ರಾ ಸೇರಿದಂತೆ ಚಿತ್ರ ತಮ್ಮ ಅನುಭವ ಹಂಚಿಕೊಂಡರು. ಚಿತ್ರದಲ್ಲಿ ರಾಜ್‌ ಬಿ. ಶೆಟ್ಟಿ ಕೂಡಾ ಪ್ರಮುಖ ಪಾತ್ರ ಮಾಡಿದ್ದಾರೆ. ಆದರೆ, ಪತ್ರಿಕಾಗೋಷ್ಠಿಗೆ ಗೈರಾಗಿದ್ದರು. ಉಳಿದಂತೆ ಚಿತ್ರದಲ್ಲಿ ಗೋಪಾಲ ಕೃಷ್ಣ ದೇಶಪಾಂಡೆ, ಬಾಬು ಹಿರಣ್ಣಯ್ಯ, ಅಪೂರ್ವ, ಸೋಮ ನಟಿಸಿದ್ದಾರೆ.

ಚಿತ್ರಕ್ಕೆ ಚೇತನ್‌ ಸಾಹಸ ಸಂಯೋಜಿಸಿದ್ದು, ನೈಜವಾದ ಫೈಟ್‌ಗಳನ್ನು ಕಾಣಬಹುದಂತೆ. ಯಾವುದೇ ಬಿಲ್ಡಪ್‌ ಇಲ್ಲದೇ ಸಾಹಸ ದೃಶ್ಯಗಳನ್ನು ಸಂಯೋಜಿಸಿದ್ದಾಗಿ ಹೇಳಿಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next