ಆಕೆ ಮಾಯಾನಾ ಅಥವಾ ದೇವಕಿನಾ, ಕೆಫೆ ನಡೆಸುತ್ತಿರುವ ಆಕೆ ಅಂಡರ್ ಕವರ್ ಏಜೆಂಟಾ, ಹಾಗಾದರೆ ಆಕೆ ಹಿನ್ನೆಲೆಯೇನು? – ನಾಲ್ಕು ವರ್ಷಗಳಿಂದ ಬೀಚ್‌ನಲ್ಲಿ ಆಕೆ ನಡೆಸುತ್ತಿರುವ ಕೆಫೆಯನ್ನು ಧ್ವಂಸ ಮಾಡಲು ಬಂದ ಗ್ಯಾಂಗ್ ಅನ್ನು ಆಕೆ ಶೂಟೌಟ್ ಮಾಡುವವರೆಗೆ ಆಕೆಯ
ಬ್ಯಾಕ್‌ಗ್ರೌಂಡ್ ಏನೆಂದು ಯಾರಿಗೂ ಗೊತ್ತಿರುವುದಿಲ್ಲ. ಅಷ್ಟು ದಿನ “ಮಾಯಾ, ಮಾಯಾ’ ಎಂದು ಪ್ರೀತಿಯಿಂದ ಕರೆಯುತ್ತಿದ್ದ ಮಗಳು ಕೂಡಾ ಶಾಕ್‌ಗೆ ಒಳಗಾಗುತ್ತಾಳೆ. ತನ್ನ ತಾಯಿಯ ಹಿಂದೆ ದೊಡ್ಡದೊಂದು ಕಥೆ ಇದೆ ಮತ್ತು ಆ ಕಥೆ ರೋಚಕ ಹಾಗೂ ಅಷ್ಟೇ ಭಯಾನಕವಾಗಿದೆ ಎಂಬುದನ್ನು ತಿಳಿದು ಒಂದು ಕ್ಷಣ ದಂಗಾಗುತ್ತಾಳೆ ಮಗಳು. ಅಷ್ಟಕ್ಕೂ ಆ ರೋಚಕ ಕಥೆಯೇನು, ದೇವಕಿ,
ಮಾಯಾ ಆಗಿದ್ದು ಯಾಕೆ ಎಂಬ ಕುತೂಹಲ ನಿಮಗಿದ್ದರೆ ನೀವು “ಮಹಿರ’ ಚಿತ್ರವನ್ನು ನೋಡಬಹುದು.
ಕನ್ನಡದಲ್ಲಿ ಸಾಕಷ್ಟು ಸಸ್ಪೆನ್ಸ್-ಥ್ರಿಲ್ಲರ್ ಸಿನಿಮಾಗಳು ಬರುತ್ತಲೇ ಇರುತ್ತವೆ. ಆದರೆ, ಹಾಗೆ ಬಂದ ಸಿನಿಮಾಗಳೆಲ್ಲವೂ ಗಮನಸೆಳೆಯುತ್ತವೆ ಮತ್ತು ಹೊಸ ಪ್ರಯೋಗದಿಂದ ಕೂಡಿರುತ್ತದೆ ಎಂದು ಹೇಳುವಂತಿಲ್ಲ. ಆದರೆ, “ಮಹಿರ’ ಚಿತ್ರ ಮಾತ್ರ ತನ್ನ ಕಥೆ ಹಾಗೂ ನಿರೂಪಣೆಯಿಂದ ಗಮನಸೆಳೆಯುವಂತಿದೆ. ಈ ಮೂಲಕ ನಿರ್ದೇಶಕ ಮಹೇಶ್ ಗೌಡ ಭವಿಷ್ಯದ ಭರವಸೆ
ಮೂಡಿಸಿದ್ದಾರೆ. ಒಂದು ಥ್ರಿಲ್ಲರ್ ಸಿನಿಮಾವನ್ನು ಹೇಗೆ ಕಟ್ಟಿಕೊಟ್ಟರೆ ಜನರಿಗೆ ಇಷ್ಟವಾಗಬಹುದು, ಯಾವ್ಯಾವ ಅಂಶಗಳನ್ನು ಯಾವ ಹಂತದಲ್ಲಿ ರಿವೀಲ್ ಮಾಡಬೇಕೆಂಬ ಸ್ಪಷ್ಟ ಕಲ್ಪನೆ ಮಹೇಶ್ ಅವರಿಗಿದೆ. ಅದೇ ಕಾರಣದಿಂದ ಚಿತ್ರ ಎಲ್ಲೂ ಬೋರ್ ಅನಿಸದೇ, ನೀಟಾಗಿ ನೋಡಿಸಿಕೊಂಡು ಹೋಗುತ್ತದೆ.
ಮುಖ್ಯವಾಗಿ ನಿರ್ದೇಶಕರು ಸ್ಕ್ರಿಪ್ಟ್ ಮೇಲೆ ಹಿಡಿತ ಸಾಧಿಸಿರುವುದು ಇಲ್ಲಿ ಗೊತ್ತಾಗುತ್ತದೆ. ಸೂಕ್ಷ್ಮ ಅಂಶಗಳನ್ನು ಗಮನಿಸಿ, ಅದಕ್ಕೆ ತಾರ್ಕಿಕ ಅಂತ್ಯ ಕೊಡಲು ಯತ್ನಿಸಿದ್ದಾರೆ. “ಮಹಿರ’ ಕಥೆ ಮುಂದೆ ಸಾಗುತ್ತಿದ್ದಂತೆ ನಿಮಗೆ ಅಲ್ಲಿ ಗಂಡ-ಹೆಂಡತಿಯ ಪ್ರೀತಿ, ತಾಯಿ-ಮಗುವಿನ ಸೆಂಟಿಮೆಂಟ್, ವರ್ಕ್ ಕಮಿಟ್‌ಮೆಂಟ್ … ಹೀಗೆ ಅನೇಕ ಅಂಶಗಳು ಚಿತ್ರದಲ್ಲಿ ಕಾಣಸಿಗುತ್ತವೆ. ಹಾಗಂತ ನಿರ್ದೇಶಕರು ಅದನ್ನು ಹೆಚ್ಚು ಬೆಳೆಸಿಲ್ಲ. ಥ್ರಿಲ್ಲರ್ ಕಥೆಗಳಲ್ಲಿ ಸೆಂಟಿಮೆಂಟ್ ಹೆಚ್ಚು ವಕೌìಟ್ ಆಗೋದಿಲ್ಲ ಎಂಬುದು ನಿರ್ದೇಶಕರಿಗೆ ಗೊತ್ತಿದ್ದಂತಿದೆ. ಹಾಗಾಗಿ, ಅನವಶ್ಯಕ ಅಂಶಗಳನ್ನು ಹೆಚ್ಚು ಎಳೆಯದೇ, ಮೂಲಕಥೆಗೆ ನ್ಯಾಯ ಒದಗಿಸಲು ಶ್ರಮಿಸಿದ್ದಾರೆ.
ಅಷ್ಟಕ್ಕೂ ಸಿನಿಮಾದ ಕಥೆ ಏನು ಎಂದು ನೀವು ಕೇಳಬಹುದು. ಐಐಡಿಯಲ್ಲಿ (ಇಂಡಿಯನ್ ಇಂಟಲಿಜೆನ್ಸ್ ಡಿಪಾರ್ಟ್‌ಮೆಂಟ್) ದಕ್ಷ ಅಧಿಕಾರಿಯಾಗಿದ್ದ ದೇವಕಿಯ ಜೀವನದಲ್ಲಿ ಘಟನೆಯೊಂದು ನಡೆಯುತ್ತದೆ. ಆ ನಂತರ ಆಕೆಯ ಸಂಸ್ಥೆಯೇ ಆಕೆಯ ವಿರುದ್ಧ ಬೀಳುತ್ತದೆ. ಹಾಗಾದರೆ, ಆಕೆಯ ಹಿಂದೆ ಐಐಡಿ ಬೀಳಲು ಕಾರಣ, ಅದರ ಹಿಂದಿನ ಸತ್ಯವೇನು ಎಂಬ ಅಂಶವನ್ನಿಟ್ಟುಕೊಂಡು “ಮಹಿರ’ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕರು. ಸಹಜವಾಗಿಯೇ ಚಿತ್ರದಲ್ಲಿ ಸಣ್ಣ ಪುಟ್ಟ ತಪ್ಪುಗಳಿವೆ. ಅವೆಲ್ಲವನ್ನು ಪಕ್ಕಕ್ಕಿಟ್ಟರೆ ಒಂದು ಪ್ರಯತ್ನವಾಗಿ “ಮಹಿರ’ ಮೆಚ್ಚುಗೆಗೆ ಅರ್ಹ.
ಇಡೀ ಸಿನಿಮಾ ಹೈಲೈಟ್ ವರ್ಜೀನಿಯಾ ರಾಡ್ರಿಗಸ್. ತುಂಬಾ ಗಂಭೀರ ಹಾಗೂ ಟಫ್ ಪಾತ್ರಕ್ಕೆ ಅವರು ನ್ಯಾಯ ಒದಗಿಸಿದ್ದಾರೆ. ಪ್ರತಿ ದೃಶ್ಯಗಳಲ್ಲೂ ಅವರ ಎನರ್ಜಿ ಮೆಚ್ಚುವಂಥದ್ದು. ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡಿರುವ ಚೈತ್ರಾ, ಬಾಲಾಜಿ ಮನೋಹರ್ , ಗೋಪಾಲ್ ಕೃಷ್ಣ ದೇಶಪಾಂಡೆ ಸೇರಿದಂತೆ ಇತರರು ನ್ಯಾಯ ಒದಗಿಸಿದ್ದಾರೆ. ರಾಜ್ ಬಿ ಶೆಟ್ಟಿ ಪಾತ್ರ ಮತ್ತಷ್ಟು ಗಂಭೀರವಾಗಿರಬೇಕಿತ್ತು.ಉಳಿದಂತೆ ಚಿತ್ರದ ಸಾಹಸ, ಹಿನ್ನೆಲೆ ಸಂಗೀತ, ಛಾಯಾಗ್ರಹಣ ಚೆನ್ನಾಗಿದೆ.
ಚಿತ್ರ: ಮಹಿರಾ
*ನಿರ್ಮಾಣ: ವಿವೇಕ್ ಕೊಡಪ್ಪ
*ನಿರ್ದೇಶನ: ಮಹೇಶ್ ಗೌಡ
*ತಾರಾಗಣ: ವರ್ಜೀನಿಯಾ ರಾಡ್ರಿಗಸ್, ದಿಲೀಪ್ ರಾಜ್,
ಚೈತ್ರಾ, ಬಾಲಾಜಿ ಮನೋಹರ್, ರಾಜ್ ಬಿ ಶೆಟ್ಟಿ ಮತ್ತಿತರರು.
*ರವಿಪ್ರಕಾಶ್ ರೈ