Advertisement
ಕನ್ನಡ ಸಾಹಿತ್ಯ ಪರಿಷತ್ತು ತನ್ನ ಎಲ್ಲ ಸಮ್ಮೇಳನ ಗಳಿಗೂ ಸರಕಾರದ ಮುಂದೆ ಕೈಯ್ಯೊಡ್ಡುತ್ತದೆ. ಈ ಪರಿಸ್ಥಿತಿಯಿಂದ ಹೊರಬರಲು, ಸಂಪನ್ಮೂಲ ಕ್ರೋಡೀಕರಿಸುವ ನಿಟ್ಟಿನಲ್ಲಿ ನಿಮ್ಮ ಯೋಜನೆಗಳೇನು?ನಾನು ಈಗಾಗಲೇ ದೂರದರ್ಶನವನ್ನು ಸಮೀಪ ದರ್ಶನ ಮಾಡಿದ್ದೇನೆ. ಅದೇ ರೀತಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಜನಸಾಮಾನ್ಯರ ಪರಿಷತ್ತನ್ನಾಗಿ ಮಾಡುತ್ತೇನೆ. ಜನಸಾಮಾನ್ಯರ ಜತೆ ಸೇರಿಕೊಂಡು ಸಾಹಿತ್ಯ ಪರಿಷತ್ ಅನ್ನು ಆರ್ಥಿಕ ಹೊರೆಯಿಲ್ಲದಂತೆ ಮುನ್ನಡೆಸುತ್ತೇನೆ. ಈಗಾಗಲೇ ಪರಿಷತ್ತಿನ ಆಜೀವ ಸದಸ್ಯತ್ವ ಶುಲ್ಕ 500 ರೂ. ಇದೆ. ಅದನ್ನು 250ಕ್ಕೆ ಇಳಿಸುವ ಚಿಂತನೆಯಿದೆ. ನನ್ನ ಅವಧಿಯಲ್ಲಿ ಪರಿಷತ್ತಿನ ಮತದಾರರ ಸಂಖ್ಯೆಯನ್ನು 1 ಕೋಟಿಗೆ ಏರಿಕೆ ಮಾಡುವ ಪಣತೊಟ್ಟಿದ್ದೇನೆ. ಸಾಮಾನ್ಯವಾಗಿ ಪ್ರಜಾಪ್ರಭುತ್ವದಲ್ಲಿ ಸರಕಾರ ಮಹತ್ವದ ಪಾತ್ರವಹಿಸಲಿದೆ. ಸರಕಾರ ನಡೆಯುವುದು ಜನಸಾಮಾನ್ಯರ ಹಣದಿಂದ. ಹಾಗಾಗಿ ಕನ್ನಡಿಗರ ಹಣವನ್ನು ಕನ್ನಡ ಭಾಷೆಗೋಸ್ಕರವಾಗಿ, ಸಂಸ್ಕೃತಿಗೋಸ್ಕರವಾಗಿ ಸದುಪಯೋಗ ಮಾಡಿಕೊಳ್ಳಲಾಗುತ್ತದೆ. ಇದರಲ್ಲಿ ಅವಲಂಬನೆಯ ಮಾತೇ ಇಲ್ಲ. ಮೈಸೂರು ರಾಜರ ಕಾಲದಿಂದಲೂ ಪರಿಷತ್ತಿಗೆ ಅನುದಾನ ಬರುತ್ತಿದೆ.
ಖಂಡಿತವಾಗಿ ಈ ಬದಲಾವಣೆಗಳನ್ನು ನಿರೀಕ್ಷಿಸಬಹುದು. ಕನ್ನಡ ಸಾಹಿತ್ಯ ಪರಿಷತ್ತು ಪ್ರಾರಂಭವಾಗಿದ್ದು 1915ರಲ್ಲಿ. ಅಂದಿನ ಅಧಿನಿಯಮಗಳು ಈಗಲೂ ಇವೆ. ಕಾಲ ಕಾಲಕ್ಕೆ ತಕ್ಕಂತೆ ಅವು ಬದಲಾವಣೆ ಆಗಬೇಕು. ಸಾಹಿತ್ಯ ಸಮ್ಮೇಳನದಲ್ಲಿ ವೈದ್ಯ ಕೀಯ ಸಾಹಿತ್ಯ, ಕಾನೂನು ಸಾಹಿತ್ಯ ಸೇರಿದಂತೆ ಎಲ್ಲ ಪ್ರಕ ರಣಗಳೂ ಒಂದೇ ಸೂರಿನಡಿ ತಂದು ಅದಕ್ಕೆ ವೈವಿಧ್ಯತೆ ನೀಡುತ್ತೇನೆ. ಇವತ್ತು ಎಂಜಿನಿಯರಿಂಗ್ ಪಠ್ಯಗಳೂ ಕನ್ನಡದಲ್ಲಿ ಬರುತ್ತಿವೆ. ಮುಂದೆ ಮೆಡಿಕಲ್ ಪಠ್ಯ ಕನ್ನಡದಲ್ಲಿ ಸಿಗುತ್ತೆ. ಹೀಗಾಗಿ ಆ ಪಠ್ಯಗಳ ವಿಚಾರದಲ್ಲಿ ಸಾಹಿತ್ಯ ಪರಿಷತ್ತು ದೊಡ್ಡ ವೇದಿಕೆಯಾಗಲಿದೆ.
ಸಾಹಿತ್ಯ ಪರಿಷತ್ತು ಹಳೇ ಮೈಸೂರು ವಿಭಾಗಕ್ಕೆ ಸೀಮಿತ ಎಂಬ ಮಾತಿದೆಯಲ್ಲ?
ಕಿತ್ತೂರು ಕರ್ನಾಟಕ, ಕಲ್ಯಾಣ ಕರ್ನಾಟಕ ಎಂಬ ಚಿಂತನೆಯೇ ತಪ್ಪು. ಭೌಗೋಳಿಕದ ಜತೆಗೆ ಭಾವನಾತ್ಮಕ ಅಖಂಡ ಕರ್ನಾಟಕ ಏಕೀಕರಣ ಆಗಬೇಕು ಎಂಬುದು ಪರಿಷತ್ತಿನ ಆಶಯ. ಹಾಗಾಗಿ ನಾನು ಉತ್ತರ ಕರ್ನಾಟಕದವನೂ ಅಲ್ಲ, ದಕ್ಷಿಣದವನೂ ಅಲ್ಲ, ಮೈಸೂರಿನವನೂ ಅಲ್ಲ. ನಾನು ಸಮಗ್ರ ಕರ್ನಾಟಕದ ಪ್ರತಿನಿಧಿಯಾಗಿ ಕೆಲಸ ಮಾಡುತ್ತೇನೆ. ಪ್ರಾದೇಶಿಕ ಚಿಂತನೆ ಮಾಡಿದರೆ ಅದು ಕನ್ನಡ ಭಾಷೆಗೆ ಅಷ್ಟೇ ಅಲ್ಲ, ತಾಯಿ ಭುವನೇಶ್ವರಿಗೆ ಮಾಡಿದ ಮೋಸವಾಗುತ್ತದೆ. ಸಾಹಿತ್ಯ ಪರಿಷತ್ತಿನ ಡಿಜಿಟಲೀಕರಣಕ್ಕೆ ನಿಮ್ಮ ಯೋಜನೆಗಳೇನು?
ತಂತ್ರಜ್ಞಾನವನ್ನು ಉಪಯೋಗಿಸಿಕೊಂಡು ಕನ್ನಡ ಸಾಹಿತ್ಯವನ್ನು ಮತ್ತಷ್ಟು ಕಟ್ಟಬೇಕಾಗಿದೆ. ಆ್ಯಪ್‌ಗ್ಳ ಮೂಲಕ ಪರಿಷತ್ತಿನ ಚಟುವಟಿಕೆಗಳನ್ನು ಪಾರದರ್ಶಕವಾಗಿ ತೆರೆದಿಡುತ್ತೇನೆ. ಆ್ಯಪ್‌ಗ್ಳ ಮೂಲಕವೇ ಪುಸ್ತಕ ಮಾರಾಟಕ್ಕೆ ಕ್ರಮ ಕೈಗೊಳ್ಳುತ್ತೇನೆ. ಹಣಕಾಸಿನ ಚಟುವಟಿಕೆಗಳ ಬಗ್ಗೆ ಆನ್‌ಲೈನ್‌ನಲ್ಲಿ ಮಾಹಿತಿ ನೀಡುತ್ತೇನೆ. ಸಾಹಿತ್ಯ ಸಮ್ಮೇಳನಾಧ್ಯಕ್ಷರ ವಿಚಾರದಲ್ಲಿ ಮಹಿಳಾ ಸಾಹಿತಿಗಳ ಅವಗಣನೆ ಆಗುತ್ತಿದೆ ಎಂಬ ಮಾತಿದೆ. ಇದನ್ನು ನಿಮ್ಮ ಅವಧಿಯಲ್ಲಿ ಸರಿಪಡಿಸುತ್ತೀರಾ?
ಖಂಡಿತ. ಮಹಿಳೆಯರಿಗಾಗಿಯೇ ಕಾರ್ಯಕ್ರಮ ರೂಪಿಸುತ್ತೇನೆ. ಅವರನ್ನು ಪರಿಷತ್ತಿನ ಬೇರೆ ಬೇರೆ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಂತೆ ಮಾಡುತ್ತೇನೆ. ಜತೆಗೆ 5 ಸಮ್ಮೇಳನಗಳಲ್ಲಿ ಒಂದು ಸಮ್ಮೇಳನದಲ್ಲಾದರೂ ಮಹಿಳಾ ಸಾಹಿತಿ ಗಳಿಗೆ ಅಖೀಲ ಭಾರತ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಮಾಡಿಯೇ ತೀರುತ್ತೇನೆ. ಯುವ ಸಾಹಿತಿಗಳನ್ನು ಗುರುತಿಸುವ ಕೆಲಸ ಮಾಡುತ್ತೇನೆ.
Advertisement
ಪರಿಷತ್ ಚುನಾವಣೆಗೆ ಜೋಶಿಯವರು ರಾಜಕೀಯ ತಂದರು ಎಂಬ ಆರೋಪ ಇದೆಯಲ್ಲಾ?ನಾನು ರಾಜಕೀಯವಾಗಿ ತಟಸ್ಥ ವ್ಯಕ್ತಿ. ಯಾವುದೇ ಪಕ್ಷಕ್ಕೆ ಸೇರಿಲ್ಲ. ಯಾವುದೇ ಪಕ್ಷದ ಪ್ರಾಥಮಿಕ ಸದಸ್ಯನಲ್ಲ. ಹಾಗೆಯೇ ಎಡಪಂಥದವನೂ ಅಲ್ಲ, ಬಲಪಂಥದವನೂ ಅಲ್ಲ. ನಾನು ಸಂಪೂರ್ಣ ಕನ್ನಡ ಪಂಥದವನು. ನಾನೂ ಎಲ್ಲ ರಾಜಕೀಯ ಪಕ್ಷದ ಆಡಳಿತದಲ್ಲಿ ಕೆಲಸ ಮಾಡಿದವನು. ಹಾಗಾಗಿ, ಎಲ್ಲ ರಾಜಕೀಯ ಪಕ್ಷದವರನ್ನೂ ಭೇಟಿಯಾಗಿದ್ದೇನಷ್ಟೇ. ಮೊಟ್ಟ ಮೊದಲ ಕನ್ನಡ ಪ್ರಧಾನಿ ಎಂಬ ಉದ್ದೇಶದಿಂದ ದೇವೇಗೌಡರನ್ನು ಭೇಟಿ ಮಾಡಿದೆ. ಹಾಗಾಗಿ ಅವರು ಪತ್ರ ಬರೆದು ನನಗೆ ಬೆಂಬಲ ನೀಡಿದರು. ಹಾಗೆಯೇ ಕಾಂಗ್ರೆಸ್‌ನ ಎಚ್.ಕೆ. ಪಾಟೀಲ್, ಡಿ.ಆರ್. ಪಾಟೀಲ್ ಅವರನ್ನೂ ಭೇಟಿ ಮಾಡಿದ್ದೆ. ಪ್ರಜಾಪ್ರಭುತ್ವದಲ್ಲಿ ಯಾರು, ಯಾರನ್ನೇ ಭೇಟಿ ಮಾಡಿ, ಮತ ಯಾಚಿಸಿದರೆ, ಅದರಲ್ಲಿ ತಪ್ಪು ಹುಡುಕುವುದು ಸರಿಯಲ್ಲ. -ದೇವೇಶ ಸೂರಗುಪ್ಪ