ಗಂಗಾವತಿ: ಕನ್ನಡ ಅನ್ನದ ಭಾಷೆಯನ್ನಾಗಿ ಮಾಡುವಲ್ಲಿ ಕನ್ನಡ ಸಾಹಿತ್ಯ ಪರಿಷತ್ ಪಾತ್ರ ಮಹತ್ವದ್ದಾಗಿದೆ. ಪರಿಷತ್‌ನ್ನು ಮನೆ ಮನಗಳಿಗೆ ತಲುಪಿಸುವ ಕಾರ್ಯ ಇನ್ನೂ ಆಗಿಲ್ಲ ಎಂದು ಕಸಾಪ ರಾಜ್ಯಾಧ್ಯಕ್ಷ ಸ್ಥಾನದ ಅಭ್ಯರ್ಥಿ ನಾಡೋಜ ಡಾ|ಮಹೇಶ ಜೋಶಿ ಹೇಳಿದರು.
ಅವರು ನಗರದ ಕಲ್ಮಠದಲ್ಲಿ ಸನ್ಮಾನ, ಸ್ವೀಕರಿಸಿ ಮಾತನಾಡಿದರು. ದೂರದರ್ಶನದಲ್ಲಿ ಕನ್ನಡ ಭಾಷೆಯ ಹೆಚ್ಚು ಕಾರ್ಯಕ್ರಮಗಳನ್ನು ಗ್ರಾಮಗಳಿಗೆ ತೆಗೆದುಕೊಂಡು ಹೋಗಲಾಗಿದೆ. ವಚನ, ದಾಸ ಸಾಹಿತ್ಯದ ಮಹತ್ವವನ್ನು ಚಂದನ ಟಿವಿಯಲ್ಲಿ ಪ್ರಸಾರ ಮಾಡುವ ಮೂಲಕ ಕನ್ನಡದ ಸೇವೆ ಮಾಡಲಾಗಿದೆ. ಈಗಾಗಲೇ ಪರಿಷತ್ ಚುನಾವಣೆ ಘೋಷಣೆಯಾಗಿದ್ದು, ಕಸಾಪದ ಸುಮಾರು 3.10 ಲಕ್ಷ ಜನ ಅಜೀವ ಸದಸ್ಯರು ಮತದಾನ ಮಾಡುವ ಅರ್ಹತೆ ಪಡೆದುಕೊಂಡಿದ್ದು, ಕಸಾಪದ ಸೇವೆ ಮಾಡಲು ಪ್ರತಿಯೊಬ್ಬ ಸದಸ್ಯರೂ ಆಶೀರ್ವದಿಸಬೇಕು.
1915ರಲ್ಲಿ ಸ್ಥಾಪನೆಯಾದ ಕಸಾಪ ಬೈಲಾವನ್ನು ಸಮಗ್ರವಾಗಿ ತಿದ್ದುಪಡಿ ಮಾಡಿ ಪರಿಷತ್ ಕಾರ್ಯವಿಧಾನ ಬದಲಾಗಬೇಕು. ವಾರದ 7 ದಿನವೂ ಬೆಂಗಳೂರಿನ ಕಾರ್ಯಾಲಯ ಕೆಲಸ ಮಾಡುವಂತಾಗಬೇಕು. ವಿಕಲಚೇತನರು, ಮಾಜಿ ಸೈನಿಕರಿಗೆ ಉಚಿತವಾಗಿ ಸದಸ್ಯತ್ವ ಸಿಗುವಂತಾಗಬೇಕು. ಪದವಿ, ಸ್ನಾತಕೋತ್ತರ ಪದವಿಯಲ್ಲಿರುವ ವಿದ್ಯಾರ್ಥಿಗಳಿಗೆ ಅಜೀವ ಸದಸ್ಯತ್ವ ದೊರಕುವಂತಾಗಬೇಕು. ಪ್ರಸ್ತುತ 500 ರೂ. ಸದಸ್ಯತ್ವ ಶುಲ್ಕವಿದ್ದು ಇದನ್ನು ಮೊದಲಿನಂತೆ ಕಡಿಮೆ ಮಾಡಬೇಕೆಂದರು.
ಕಸಾಪ ಜಿಲ್ಲಾಧ್ಯಕ್ಷ ಸ್ಥಾನದ ಅಭ್ಯರ್ಥಿವೀರಣ್ಣ ನಿಂಗೋಜಿ ಮಾತನಾಡಿ, ಇದು ತಮ್ಮ ಕೊನೆಯ ಸ್ಪರ್ಧೆಯಾಗಿದ್ದು ಗಂಗಾವತಿಯ ಸದಸ್ಯರು ಮತ ನೀಡಿ ಕನ್ನಡದ ಸೇವೆ ಮಾಡಲು ಅವಕಾಶ ಕಲ್ಪಿಸಬೇಕು. ಪ್ರತಿಬಾರಿಯೂ ಗಂಗಾವತಿಯವರಿಗೆ ಅವಕಾಶ ತಪ್ಪುತ್ತಿದ್ದು ಮುಂದಿನ ಸಲ ತಾವೇ ನಿಂತು ಗಂಗಾವತಿಯವರಿಗೆ ಅವಕಾಶ ಕಲ್ಪಿಸಲಾಗುತ್ತದೆ ಎಂದರು.
ಇದನ್ನೂ ಓದಿ :ಕುಸಿಯುತ್ತಿದೆ ಕುಷ್ಟಗಿ ಕಲ್ಲಬಾವಿ ರಕ್ಷಾ ಗೋಡೆ
ಕಲ್ಮಠದ ಪೂಜ್ಯ ಡಾ| ಕೊಟ್ಟೂರೇಶ್ವರ ಸ್ವಾಮೀಜಿ, ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಅರಳಿ ನಾಗರಾಜ, ಶರಣ ಸಾಹಿತಿ ಸಿ.ಎಚ್. ನಾರನಾಳ, ಬಳ್ಳಾರಿ ದೊಡ್ಡಬಸಪ್ಪ, ಡಾ| ಶರಣಬಸಪ್ಪ ಕೋಲ್ಕಾರ್, ಅಕ್ಕಿ ಪ್ರಕಾಶ, ಡಗ್ಗಿ ಹನುಮಂತಪ್ಪ, ಅರಳಿ ನಾಗಭೂಷಣ, ಡಾ| ರವಿ ಚವ್ಹಾಣ, ಕೊಟಗಿ ಚನ್ನಬಸವ, ಕಮತಗಿ ಲಿಂಗಪ್ಪ ಸೇರಿ ಅನೇಕರಿದ್ದರು.