ಹಿರಿಯ ನಿರ್ದೇಶಕ ಎಸ್.ಮಹೇಂದರ್ ಈಗ ಮತ್ತೆ ಸುದ್ದಿಯಾಗಿದ್ದಾರೆ. ಈ ಬಾರಿ ಅವರು ಕನ್ನಡ ಭಾಷೆ ಮೇಲಿರುವ ಪ್ರೀತಿ ಗೀತಿ ಇತ್ಯಾದಿ ಕುರಿತಂತೆ ಸಿನಿಮಾ ಮಾಡಿದ್ದಾರೆ. ಅವರ ನಿರ್ದೇಶನದ ಸಿನಿಮಾಗಳಲ್ಲೇ ಇದೊಂದು ವಿಭಿನ್ನ ಕಥಾವಸ್ತು ಎಂಬುದು ಅವರ ಮಾತು. ಅವರ ಚಿತ್ರಕ್ಕೆ “ಪಂಪ ‘ ಎಂದು ಹೆಸರಿಡಲಾಗಿದೆ. ಹಾಗಂತ ಇದು ಕವಿ ಪಂಪ ಅವರ ಕುರಿತಾದ ಚಿತ್ರವಲ್ಲ. ಪಂಚಹಳ್ಳಿ ಪರಶಿವಮೂರ್ತಿ ಹೆಸರನ್ನು ಶಾರ್ಟ್ ಆಗಿ ಪಂಪ ಎನ್ನಲಾಗಿದೆಯಷ್ಟೇ.
ಚಿತ್ರ ಈಗ ಬಿಡುಗಡೆಗೆ ಸಜ್ಜಾಗಿದೆ. ಸೆನ್ಸಾರ್ ಆಗಿದ್ದು, ಚಿತ್ರಕ್ಕೆ ಯು ಪ್ರಮಾಣ ಪತ್ರ ಸಿಕ್ಕಿದೆ. ನಿರ್ದೇಶಕ ಎಸ್.ಮಹೇಂದರ್ ನಿರ್ದೇಶನದ 35ನೇ ಸಿನಿಮಾ ಇದು ಎಂಬುದು ವಿಶೇಷ. ತಮ್ಮ ಸಿನಮಾ ಕುರಿತು ಹೇಳುವ ಮಹೇಂದರ್, ಇದೊಂದು ಕನ್ನಡಪರ ಹೋರಾಟಗಾರನ ಕಥೆ. ಪೊಯಟಿಕ್ ಥ್ರಿಲ್ಲರ್ ಕಥಾಹಂದರವಿದೆ. ಇಲ್ಲಿ ನಾಲ್ಕು ಲವ್‌ಸ್ಟೋರಿಗಳು ಕೂಡ ಸಾಗುತ್ತವೆ. ಪ್ರತಿ ಹೆಜ್ಜೆಗೂ ಕುತೂಹಲ ಕಾಯ್ದುಕೊಂಡು ಹೋಗುವ ಕಥೆ ಹೊಂದಿದೆ.
ಕನ್ನಡ ಬಗ್ಗೆ ತುಂಬಾ ಅಭಿಮಾನ ಇಟ್ಟುಕೊಂಡು ಮಾಡಿರುವ ಹೊಸ ಪ್ರಯತ್ನದ ಚಿತ್ರವಿದು ಎನ್ನುವ ಅವರು, ನಾನು ಇಷ್ಟು ವರ್ಷಗಳಲ್ಲಿ ಮಾಡಿದ ಸಿನಿಮಾಗಳಿಗಿಂತಲೂ ಇದೊಂದು ವಿಭಿನ್ನ ಪ್ರಯತ್ನ. ಕಥೆ, ಚಿತ್ರಕಥೆ, ಸಂಭಾಷಣೆ ಜವಾಬ್ದಾರಿಯೂ ನನ್ನದೇ ಎನ್ನುತ್ತಾರೆ. ಚಿತ್ರವನ್ನು ಟೋಟಲ್ ಕನ್ನಡದ ಲಕ್ಷ್ಮೀಕಾಂತ್ ನಿರ್ಮಾಣ ಮಾಡುತ್ತಿದ್ದಾರೆ.
ಬಹಳಷ್ಟ ವರ್ಷ ಅಮೆರಿಕದಲ್ಲಿದ್ದ ಲಕ್ಷ್ಮೀಕಾಂತ್, ಇಲ್ಲಿಗೆ ಬಂದು, ಟೋಟಲ್ ಕನ್ನಡ ನಡೆಸುತ್ತಿದ್ದಾರೆ. ಕನ್ನಡ ಮೇಲಿನ ಪ್ರೀತಿಯಿಂದ ಈ ಚಿತ್ರ ನಿರ್ಮಿಸಿದ್ದಾರೆ. ಇನ್ನು, ಹಂಸ ಲೇಖ ಚಿತ್ರಕ್ಕೆ ಸಂಗೀತವಿದೆ. ಅವರೊಂದಿಗೆ ಇದು 25 ನೇ ಚಿತ್ರ ಎನ್ನುವುದು ವಿಶೇಷ ಎನ್ನುವ ಮಹೇಂದರ್, ಚಿತ್ರಕ್ಕೆ ರಮೇಶ್ ಬಾಬು ಛಾಯಾ ಗ್ರಹಣ, ಮೋಹನ ಕಾಮಾಕ್ಷಿ, ಸಂಕಲನವಿದೆ. ಬೆಂಗಳೂರು, ತೀರ್ಥಹಳ್ಳಿ ಸುತ್ತ ಮುತ್ತ ಚಿತ್ರೀಕರಿಸಲಾಗಿದೆ. 4 ಹಾಡುಗಳ ಪೈಕಿ ಹಂಸಲೇಖ ಸಾಹಿತ್ಯವಿದೆ.
ಕುವೆಂಪು, ಚೆನ್ನವೀರ ಕಣವಿ ಅವರ ಹಾಡುಗಳನ್ನು ಬಳಸಲಾಗಿದೆ. ಚಿತ್ರದಲ್ಲಿ ಕೀರ್ತಿ ಬಾನು, ಸಂಗೀತಾ, ರಾಘವ್ ನಾಯ್ಕ, ರಜತ್‌ಕುಮಾರ್, ಆದಿತ್ಯಾ ಶೆಟ್ಟಿ, ಭಾವನಾ ಭಟ್, ರೇಣುಕಾ, ರವಿಭಟ್, ಶ್ರೀನಿವಾಸ್ ಪ್ರಭು, ಪೃಥ್ವಿರಾಜ್ ಸೇರಿದಂತೆ ರಂಗಪ್ರತಿಭೆಗಳು ಇವೆ ಎಂಬುದು ಮಹೇಂದರ್ ಮಾತು. ಸದ್ಯಕ್ಕೆ ಪಂಪನ ಹಿಂದೆ ಇರುವ ಮಹೇಂದರ್, ಪ್ರೇಕ್ಷಕರ ಮುಂದೆ ಬರಲು ಎಲ್ಲಾ ತಯಾರಿಯನ್ನೂ ನಡೆಸುತ್ತಿದ್ದಾರೆ.