ಪೋರ್ಟ್ ಆಫ್ ಸ್ಪೇನ್: ವೆಸ್ಟ್ ಇಂಡೀಸ್ ಸರಣಿಯಲ್ಲಿ ಬ್ಯಾಟಿಂಗ್ ನಲ್ಲಿ ಮಿಂಚುತ್ತಿರುವ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಅವರು ದಾಖಲೆಯೊಂದನ್ನು ಬರೆದಿದ್ದಾರೆ. ಟೆಸ್ಟ್ ಕ್ರಿಕೆಟ್ ನಲ್ಲಿ ಸತತ 30 ಇನ್ನಿಂಗ್ಸ್ ಗಳಲ್ಲಿ ಎರಡಂಕಿ ಮೊತ್ತ ದಾಖಲಿಸಿದ ಮೊದಲ ಆಟಗಾರ ಎಂಬ ಸಾಧನೆ ಮಾಡಿದ್ದಾರೆ.
ಈ ದಾಖಲೆಯು ಹಿಂದೆ ಶ್ರೀಲಂಕಾದ ಮಹೇಲಾ ಜಯವರ್ಧನೆ ಅವರ ಹೆಸರಿನಲ್ಲಿತ್ತು. ಜಯವರ್ಧನೆ ಅವರು ಸತತ 29 ಇನ್ನಿಂಗ್ಸ್ ಗಳಲ್ಲಿ ಎರಡಂಕಿಯ ಸ್ಕೋರ್ ಗಳನ್ನು ದಾಖಲಿಸಿದ್ದರು. ಪೋರ್ಟ್ ಆಫ್ ಸ್ಪೇನ್ ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ 4 ನೇ ದಿನದಂದು ರೋಹಿತ್ ಅವರು ಮಹೇಲಾ ಜಯವರ್ಧನೆ ಅವರ ದಾಖಲೆ ಮುರಿದರು.
ಕಳೆದ 30 ಇನ್ನಿಂಗ್ಸ್ ನಲ್ಲಿ ರೋಹಿತ್ ಶರ್ಮಾ ಅವರು ಕ್ರಮವಾಗಿ 12, 161, 26, 66, 25*, 49, 34, 30, 36, 12*, 83, 21, 19, 59, 11, 127, 29, 15, 46, 120, 32, 31, 12, 12, 35, 15, 43, 103, 80, 57 ರನ್ ಗಳನ್ನು ಗಳಿಸಿದ್ದಾರೆ.
ಇದನ್ನೂ ಓದಿ:ಶಾರುಖ್ ʼಜವಾನ್ʼ ಜೊತೆ ಸಲ್ಮಾನ್ ʼಟೈಗರ್-3ʼ ಟೀಸರ್ ರಿಲೀಸ್? ಥ್ರಿಲ್ ಆದ ಫ್ಯಾನ್ಸ್
ಪ್ರಚಂಡ ಫಾರ್ಮ್ ಮುಂದುವರಿಸಿದ ರೋಹಿತ್ ಅವರು ಎರಡನೇ ಇನ್ನಿಂಗ್ಸ್ ನಲ್ಲಿಯೂ ಅರ್ಧಶತಕವನ್ನು ಬಾರಿಸಿದರು. ಮೊದಲ ಇನ್ನಿಂಗ್ಸ್ ನಲ್ಲಿ ಅವರು 80 ರನ್ ಗಳಿಸಿದ್ದರು. ಮೊದಲ ಟೆಸ್ಟ್ ಪಂದ್ಯದಲ್ಲಿ ರೋಹಿತ್ ಶತಕ ಬಾರಿಸಿದ್ದರು.
ನಾಲ್ಕನೇ ದಿನದ ಅಂತಿಮ ಅವಧಿಯಲ್ಲಿ ಭಾರತವು 2 ವಿಕೆಟ್‌ಗೆ 181 ರನ್ ಗಳಿಸಿ ತನ್ನ ಎರಡನೇ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು. ಎರಡನೇ ಟೆಸ್ಟ್ ನಲ್ಲಿ ವೆಸ್ಟ್ ಇಂಡೀಸ್ ಗೆ ಗೆಲ್ಲಲು 365 ರನ್ ಗಳ ಕಠಿಣ ಗುರಿಯನ್ನು ನೀಡಿದೆ.