ಮಣಿಪಾಲ: ಮನುಷ್ಯ ಯಂತ್ರದೊಂದಿಗೆ ಸ್ಪರ್ಧಿಸುವುದಲ್ಲ. ಬದಲಾಗಿ ಯಂತ್ರ ನೀಡುವ ಫಲಿತಾಂಶದ ಪರಿಣಾಮಕಾರಿ ಅನುಷ್ಠಾನ ತಿಳಿಯಬೇಕು. ಡಿಜಿಟಲ್ ಯುಗದಲ್ಲಿ ಡಿಜಿಟಲ್ ಸಾಕ್ಷರತೆಯೇ ಪ್ರಧಾನ. ಹಿಂದೆಲ್ಲ ಮಾತನಾಡುವ ಮೊದಲು ಯೋಚಿಸಬೇಕಿತ್ತು. ಈಗ “ಕ್ಲಿಕ್’ ಮಾಡುವ ಮೊದಲು ಯೋಚಿಸಬೇಕು. ಆ ಮೂಲಕ ಡಿಜಿಟಲ್ ಅರೆಸ್ಟ್ನಿಂದ ದೂರ ಇರಬಹುದು. ಇದಕ್ಕಾಗಿ ನೈತಿಕ ಮೌಲ್ಯಗಳನ್ನು ಅಳವಡಿಸಿಕೊಳ್ಳುವುದು ಮತ್ತು ಅನುಸರಿಸುವುದು ಅತಿ ಮುಖ್ಯ ಎಂದು ಹೊಸದಿಲ್ಲಿಯ ರಾಷ್ಟ್ರೀಯ ರೊಬೊಟಿಕ್ ಆ್ಯಂಡ್ ಆರ್ಟಿಫಿಶಿಯಲ್ ಇಂಟಲಿಜೆನ್ಸಿ ಸಂಸ್ಥೆಯ(ಎನ್ಐಆರ್ಎ) ಡೈರೆಕ್ಟರ್ ಜನರಲ್ ಡಾ| ಇಂದ್ರಜಿತ್ ಭಟ್ಟಾಚಾರ್ಯ ತಿಳಿಸಿದರು.
ಕೆಎಂಸಿ ಗ್ರೀನ್ಸ್ನಲ್ಲಿ ನಡೆಯುತ್ತಿರುವ ಮಾಹೆ ವಿ.ವಿ.ಯ 32ನೇ ಘಟಿಕೋತ್ಸವದ ಎರಡನೇ ದಿನವಾದ ಶನಿವಾರ ಪದವೀಧರರಿಗೆ ಪದವಿ ಪ್ರದಾನಿಸಿ ಘಟಿಕೋತ್ಸವ ಭಾಷಣ ಮಾಡಿದ ಅವರು, ಎಐನಲ್ಲಿ ಹಲವು ವಿಧಗಳು ಇವೆ. ಅವುಗಳನ್ನು ಭಿನ್ನ ರೂಪದಲ್ಲಿ ಬಳಸಲಾಗುತ್ತದೆ ಎಂಬುದು ಸಹಿತ ಅವು ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ವಿಶ್ಲೇಷಿಸಿದರು.
ಕೃತಕ ಬುದ್ಧಿಮತ್ತೆ ನಮ್ಮ ಉದ್ಯೋಗದ ಮೇಲೆ ಹೊಡೆತ ನೀಡುವುದಿಲ್ಲ. ಅದನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ಎಷ್ಟು ಪ್ರಮಾಣದಲ್ಲಿ ಉತ್ಪಾದಕತೆ ಹೊರ ತೆಗೆಯುತ್ತೇವೆ ಎನ್ನುವುದೇ ಪ್ರಮುಖವಾಗುತ್ತದೆ. ಇ-ಕಾಮರ್ಸ್, ಶಿಕ್ಷಣ, ವ್ಯಾಪರ, ಆರೋಗ್ಯ, ಸಂಶೋಧನೆ ಹೀಗೆ ಎಲ್ಲ ಕ್ಷೇತ್ರದಲ್ಲೂ ಎಐ ಮುಖ್ಯವಾಗಿದೆ ಎಂದರು.
ವಿಮರ್ಶಾತ್ಮಕ ಚಿಂತನೆ, ಉತ್ತಮ ಸಂವಹನ, ಸೃಜನಶೀಲತೆ, ಒಗ್ಗಿಕೊಳ್ಳುವಿಕೆ ಮತ್ತು ನಿರಂತರ ಕಲಿಕೆಯನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ವಿಕಸಿತ ಭಾರತಕ್ಕೆ ಶ್ರೇಷ್ಠ ಕೊಡುಗೆ ನೀಡಲು ಸಾಧ್ಯ. ಡಿಜಿಟಲ್ ಯುಗಕ್ಕೆ ನಾವು ಸ್ಥಿತ್ಯಂತರಗೊಳ್ಳುತ್ತಿದ್ದೇವೆ. ಡಿಜಿಟಲ್ ಸುರಕ್ಷೆಯ ಜತೆಗೆ ಸುರಕ್ಷಿತ ಭಾರತ ಆಗಬೇಕು. ಈ ಹಿನ್ನೆಲೆಯಲ್ಲಿ ಸೈಬರ್ ಹೈಜೆನಿಕ್ ಉಪಕ್ರಮಗಳ ಬಳಕೆ ಅಗತ್ಯ. ನಮ್ಮ ಚಿಂತನೆ ಬಗ್ಗೆ ಸ್ಪಷ್ಟತೆ ಹಾಗೂ ಎಚ್ಚರ ಇರಬೇಕು. ನಮ್ಮ ಮಾತು, ಕ್ರಿಯೆ, ಹವ್ಯಾಸ ಮತ್ತು ವ್ಯಕ್ತಿತ್ವವು ನಮ್ಮ ಗುರಿ ಸಾಧನೆಗೆ ಪ್ರೇರಣೆಯಾಗಿರುತ್ತದೆ ಎಂದು ಪದವೀಧರರಿಗೆ ಸಲಹೆ ನೀಡಿದರು. ಸಹ ಕುಲಾಧಿಪತಿ ಡಾ| ಎಚ್.ಎಸ್. ಬಲ್ಲಾಳ್ ಘಟಿಕೋತ್ಸವ ಪ್ರಕ್ರಿಯೆ ಮುನ್ನೆಡೆಸಿದರು.
ಮಾಹೆ ಟ್ರಸ್ಟ್ ಟ್ರಸ್ಟಿ ವಸಂತಿ ಆರ್. ಪೈ ಅವರು ಡಾ| ಇಂದ್ರಜಿತ್ ಭಟ್ಟಾಚಾರ್ಯ ಜತೆ ಸೇರಿ ಮೊಲೆಕ್ಯುಲರ್ ಬಯಾಲಜಿಯಲ್ಲಿ ಎಂ.ಎಸ್ಸಿ ಪಡೆದ ಅಡ್ಲೆ„ನ್ ಸಿಯೋನಾ ರೆಬೆಲ್ಲೊ, ಎಂಐಸಿಯ ಬಿಎ ಮೀಡಿಯಾ ಮತ್ತು ಕಮ್ಯುನಿಕೇಶನ್ನ ಸಮ್ರಗ್ಗಿ ಪಾತ್ರ, ಪಿಎಚ್ಪಿಎಸ್ನ ಎಂಎಸ್ಸಿ(ಬಯೋಸ್ಟಾಟಿಸ್ಟಿಕ್ಸ್) ಪದವೀಧರೆ ಜೀವಿತ್ಕಾ ಕೆ.ಎಂ. ಅವರಿಗೆ 2024ನೇ ಸಾಲಿನ ಡಾ| ಟಿಎಂಎ ಪೈ ಚಿನ್ನದ ಪದಕ ಸಹಿತ ಪದವಿ ಪ್ರದಾನ ಮಾಡಿದರು. ಸಹ ಕುಲಪತಿಗಳಾದ ಡಾ| ಶರತ್ ಕೆ. ರಾವ್, ಡಾ| ದಿಲೀಪ್ ಜಿ. ನಾಯ್ಕ, ಕುಲಸಚಿವ ಡಾ| ಪಿ.ಗಿರಿಧರ್ ಕಿಣಿ, ಮೌಲ್ಯಮಾಪನ ಕುಲಸಚಿವ ಡಾ| ವಿನೋದ್ ಥಾಮಸ್ ಸಹಿತ ವಿವಿಧ ವಿಭಾಗಗಳ ಮುಖ್ಯಸ್ಥರು ಉಪಸ್ಥಿತರಿದ್ದರು.
ಕುಲಪತಿ ಲೆ| ಜ| ಡಾ| ಎಂ.ಡಿ.ವೆಂಕಟೇಶ್ ಪ್ರಸ್ತಾವನೆಗೈದು, ಮಾಹೆಯ ಸಾಧನೆಯ ವರದಿ ಮಂಡಿಸಿದರು. ಸಹ ಕುಲಪತಿ ಡಾ| ನಾರಾಯಣ ಸಭಾಹಿತ್ ಸ್ವಾಗತಿಸಿ, ಎಂಐಟಿ ನಿರ್ದೇಶಕ ಕ| ಡಾ| ಅನಿಲ್ ರಾಣ ಅತಿಥಿ ಪರಿಚಯ ಮಾಡಿದರು. ಮೌಲ್ಯಮಾಪನ ಡೆಪ್ಯೂಟಿ ರಿಜಿಸ್ಟ್ರಾರ್ ಡಾ| ಮಧುಕರ್ ಮಲ್ಯ ಪದವೀಧರರ ಅಂಕಿ ಅಂಶ ನೀಡಿ, ಪ್ರತಿಜ್ಞಾ ವಿಧಿ ಬೋಧಿಸಿದರು. ಎಂಐಸಿ ನಿರ್ದೇಶಕಿ ಡಾ| ಪದ್ಮಾರಾಣಿ ವಂದಿಸಿದರು. ಎಂಕಾಡ್ಸ್ ಸಹಾಯಕ ಪ್ರಾಧ್ಯಾಪಕ ಡಾ| ಆನಂದ್ ದೀಪ್ ಶುಕ್ಲಾ ನಿರೂಪಿಸಿದರು.