Advertisement

ಮಹದಾಯಿ: ಕೇಂದ್ರ ಪರಿಸರ ಇಲಾಖೆ ಒಪ್ಪಿಗೆ

09:55 AM Oct 25, 2019 | Lakshmi GovindaRaju |

ಬೆಂಗಳೂರು: ಮಹದಾಯಿ ನದಿಯಿಂದ ಕರ್ನಾಟಕಕ್ಕೆ ಕುಡಿಯುವ ನೀರಿಗಾಗಿ ಕಳಸಾ-ಬಂಡೂರಿ ಯೋಜನೆ ಕೈಗೆತ್ತಿಕೊಳ್ಳಲು ಕೇಂದ್ರ ಪರಿಸರ ಇಲಾಖೆ ಅನುಮತಿ ನೀಡಿದ್ದು, ಇದರಿಂದ ಕರ್ನಾಟಕಕ್ಕೆ ಒಂದು ಹಂತದ ಜಯ ದೊರೆತಂತಾಗಿದೆ.

Advertisement

ಈ ಕುರಿತು ಅಕ್ಟೋಬರ್‌ 17ರಂದು ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿರುವ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ, ಕಳಸಾ-ಬಂಡೂರಿ ಯೋಜನೆ ಕುಡಿಯುವ ನೀರಿನ ಯೋಜನೆ ಆಗಿರುವುದರಿಂದ ಪರಿಸರ ಪರಿಣಾಮ ಅಧ್ಯಯನ ಅಧಿ ಸೂಚನೆ 2006ರ ವ್ಯಾಪ್ತಿಯಲ್ಲಿ ಬರುವುದಿಲ್ಲ. ಹೀಗಾಗಿ, ಯೋಜನೆ ಅನುಷ್ಠಾನಕ್ಕೆ ತಕರಾರು ಇಲ್ಲ ಎಂದು ಹೇಳಿದೆ. ಪರಿಸರ ಇಲಾಖೆಯ ಈ ಒಪ್ಪಿಗೆ ಪತ್ರದಿಂದ ಮಹ ದಾಯಿ ನೀರಿಗಾಗಿ ರಾಜ್ಯದ ಜನರು ನಿರಂತರ ವಾಗಿ ನಡೆಸಿದ ಚಳವಳಿಗೆ ಮೊದಲ ಜಯ ಸಿಕ್ಕಂತಾಗಿದೆ.

ಆ ಮೂಲಕ ಮಹದಾಯಿ ನದಿಯಿಂದ 3.90 ಟಿಎಂಸಿ ನೀರನ್ನು ಹಲ್ತಾರಾ, ಕಳಸಾ ಹಾಗೂ ಬಂಡೂರಿ ನಾಲೆಗಳ ಮೂಲಕ ಮಲಪ್ರಭಾ ನದಿಗೆ ಹರಿಸಿ, ಹುಬ್ಬಳ್ಳಿ -ಧಾರವಾಡ ಮಹಾನಗರ ಸೇರಿದಂತೆ ಬೆಳಗಾವಿ, ಬಾಗಲಕೋಟೆ, ಗದಗ ಜಿಲ್ಲೆಗಳಿಗೆ ಕುಡಿಯುವ ನೀರು ಪೂರೈಸಲು ಯೋಜನೆ ಕೈಗೆತ್ತಿಕೊಳ್ಳಲು ರಾಜ್ಯ ಸರ್ಕಾರಕ್ಕೆ ಒಂದು ಹಂತದ ಅನುಮತಿ ದೊರೆತಂತಾಗಿದೆ.

ಈ ಯೋಜನೆ ಜಲವಿದ್ಯುತ್‌ ಅಥವಾ ನೀರಾವರಿ ಯೋಜನೆ ಹಾಗೂ ಹೊಸ ಅಚ್ಚು ಕಟ್ಟು ಪ್ರದೇಶಗಳಿಗೆ ನೀರನ್ನು ಹಾಯಿಸುವ ಉದ್ದೇಶವನ್ನು ಒಳಗೊಂಡಿಲ್ಲ. ಕುಡಿಯುವ ನೀರಿನ ಯೋಜನೆ ಆಗಿರುವುದರಿಂದ ಕಾಮಗಾರಿ ಆರಂಭಿಸಲು ಆಕ್ಷೇಪ ಇಲ್ಲ. ಕರ್ನಾಟಕ ಸರ್ಕಾರ ಈ ಯೋಜನೆಯ ಅನುಷ್ಠಾನಕ್ಕೆ ಬೇಕಾದ ತಯಾರಿ ಮಾಡಿಕೊಳ್ಳಲು ಅಭ್ಯಂತರ ಇಲ್ಲ ಎಂದು ಪತ್ರದಲ್ಲಿ ತಿಳಿಸಲಾಗಿದೆ.

ಮಹದಾಯಿ ನದಿ ನೀರು ಹಂಚಿಕೆ ಕುರಿತಂತೆ ವಿಚಾರಣೆ ನಡೆಸಿದ ಮಹದಾಯಿ ನ್ಯಾಯಮಂಡಳಿ, 2018ರಲ್ಲಿ ತೀರ್ಪು ನೀಡಿ, ಗೋವಾ, ಮಹಾರಾಷ್ಟ್ರ, ಕರ್ನಾಟಕ ರಾಜ್ಯಗಳು ಮಾತುಕತೆ ಮೂಲಕ ಈ ವಿವಾದವನ್ನು ಇತ್ಯರ್ಥಪಡಿಸಿಕೊಂಡು ಯೋಜನೆ ಅನುಷ್ಠಾನ ಮಾಡಬಹುದು ಎಂದು ಹೇಳಿತ್ತು. ಇದರನುಸಾರ ಕರ್ನಾಟಕ ಸರ್ಕಾರ, ಸಂಬಂಧಪಟ್ಟ ಪ್ರಾಧಿಕಾರಗಳಿಂದ ಪೂರ್ವಾನುಮತಿ ಪಡೆದು ಯೋಜನೆ ಜಾರಿಗೊಳಿಸಬಹುದು ಎಂದು ಪತ್ರ ಉಲ್ಲೇಖೀಸಿದೆ.

Advertisement

ಭೀಮಗಢ ವನ್ಯಜೀವಿ ಅರಣ್ಯ ಪ್ರದೇಶದಲ್ಲಿ ಅನುಷ್ಠಾನ: ಈ ಯೋಜನೆಯು ಭೀಮಗಢ ವನ್ಯಜೀವಿ ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿ ಅನುಷ್ಠಾನಗೊಳ್ಳಲಿದ್ದು, ಸುಮಾರು 250 ಹೆಕ್ಟೇರ್‌ ಅರಣ್ಯ ಪ್ರದೇಶ ಒಳಗೊಳ್ಳುತ್ತದೆ. ಹೀಗಾಗಿ, ಕರ್ನಾಟಕ ಸರ್ಕಾರ ಈ ಯೋಜ ನೆಯ ಅನುಷ್ಠಾನಕ್ಕೆ ಅರಣ್ಯ ಇಲಾಖೆಯ ಅನುಮತಿ ಪಡೆಯುವ ಅಗತ್ಯವಿದೆ ಎಂದು ನ್ಯಾಯಮಂಡಳಿ ಆದೇಶದಲ್ಲಿ ತಿಳಿಸಿತ್ತು.

ಈ ಯೋಜನೆಗೆ ಅಗತ್ಯವಿರುವ ಭೂಮಿಯನ್ನು ವಶಪಡಿಸಿಕೊಳ್ಳಲು 2013ರ ಭೂ ಸ್ವಾಧೀನ ಕಾಯ್ದೆಯ ಪ್ರಕಾರ ಸೂಕ್ತ ಪರಿಹಾರ ನೀಡುವಂತೆ ಸೂಚಿಸಲಾಗಿದೆ. ಯೋಜನೆ ಅನುಷ್ಠಾನ ಸಂದರ್ಭದಲ್ಲಿ ಉತ್ಪತ್ತಿಯಾಗುವ ಅನುಪಯುಕ್ತ ವಸ್ತುಗಳನ್ನು ಪರಿಸರಕ್ಕೆ ಹಾನಿಯಾಗದಂತೆ ನೋಡಿಕೊಳ್ಳಲು ಪರಿಸರ ಇಲಾಖೆ ಪತ್ರದಲ್ಲಿ ತಿಳಿಸಿದೆ.

ಆದರೆ, ಪ್ರಮುಖವಾಗಿ ಈ ಯೋಜನೆ ಕೈಗೆತ್ತಿಕೊಳ್ಳಲು ಕೇಂದ್ರ ಸರ್ಕಾರ ಮಹದಾಯಿ ನ್ಯಾಯ ಮಂಡಳಿಯ ಆದೇಶದಂತೆ ಅಧಿಸೂಚನೆ ಹೊರಡಿಸಬೇಕು. ನಂತರ ಅರಣ್ಯ ಇಲಾಖೆಯ ಅನುಮತಿ ಪಡೆದು ರಾಜ್ಯ ಸರ್ಕಾರ ಅಧಿಕೃತವಾಗಿ ಯೋಜನೆ ಕೈಗೆತ್ತಿಕೊಳ್ಳಲು ಸಾಧ್ಯವಾಗುತ್ತದೆ.

ಯೋಜನೆಗೆ ಅಗತ್ಯ ಅನುದಾನ
ಹುಬ್ಬಳ್ಳಿ: ಕಳಸಾ-ಬಂಡೂರಿ ನಾಲಾ ಯೋಜನೆಗೆ ಕೇಂದ್ರ ಪರಿಸರ ಇಲಾಖೆ ಒಪ್ಪಿಗೆ ನೀಡಿದ್ದು, ಡಿಸೆಂಬರ್‌ ಅಂತ್ಯದೊಳಗೆ ಎಲ್ಲಾ ಪ್ರಕ್ರಿಯೆಗಳು ಮುಕ್ತಾಯವಾಗಲಿವೆ ಎಂದು ಕೈಗಾರಿಕೆ ಸಚಿವ ಜಗದೀಶ ಶೆಟ್ಟರ್‌ ತಿಳಿಸಿದರು. ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ಎಲ್ಲಾ ಪ್ರಕ್ರಿಯೆಗಳು ಪೂರ್ಣಗೊಂಡ ನಂತರ ಮಹದಾಯಿ ನ್ಯಾಯಾಧಿಕರಣ ತೀರ್ಪಿನ ಪ್ರಕಾರ ನೀರು ಪಡೆಯಲು ಬೇಕಾದ ಅಗತ್ಯ ಕ್ರಮಗಳನ್ನು ರಾಜ್ಯ ಸರ್ಕಾರ ಕೈಗೊಂಡು ಕಾಮಗಾರಿ ಆರಂಭಕ್ಕೆ ಮುಂದಾಗಲಿದೆ.

ಇದಕ್ಕೆ ಬೇಕಾದ ಅಗತ್ಯ ಅನುದಾನವನ್ನು ರಾಜ್ಯ ಸರ್ಕಾರ ನೀಡಲು ಸಿದ್ಧವಿದೆ. ಪ್ರಮುಖವಾಗಿ ಅರಣ್ಯ ಮತ್ತು ಪರಿಸರ ಇಲಾಖೆಯಿಂದ ಅನುಮತಿ ಅವಶ್ಯವಾಗಿದ್ದು, ಇದೀಗ ಪರವಾನಗಿ ದೊರೆತಿರುವುದು ಈ ಭಾಗದ ಜನರಿಗೆ ಸಂತಸ ಮೂಡಿದೆ ಎಂದರು. ನ್ಯಾಯಾಧಿಕರಣದ ತೀರ್ಪಿನ ನೀರನ್ನು ಬಳಸಿಕೊಳ್ಳಲು ಕಾನೂನು ತೊಂದರೆ ಆಗುವುದಿಲ್ಲ ಎಂದರು.

ಬಿಜೆಪಿ ಅಧಿಕಾರಕ್ಕೆ ಬಂದರೆ ಕಳಸಾ-ಬಂಡೂರಿ ವಿವಾದ ಇತ್ಯರ್ಥಪಡಿಸುವ ಭರವಸೆ ನೀಡಲಾಗಿತ್ತು. ಅದರಂತೆ ಪ್ರಧಾನಿಯವರು ಯೋಜನೆ ಆರಂಭಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ. ಪರಿಸರ ಇಲಾಖೆ ಅನುಮತಿ ವಿಚಾರವನ್ನು ನ್ಯಾಯಾಲಯದ ಗಮನಕ್ಕೆ ತರಲಾಗುವುದು. ಯೋಜನೆ ಆರಂಭಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು.
-ಬಿ.ಎಸ್‌.ಯಡಿಯೂರಪ್ಪ, ಸಿಎಂ

Advertisement

Udayavani is now on Telegram. Click here to join our channel and stay updated with the latest news.

Next