Advertisement
ಬಿಜೆಪಿ ಶಾಸಕಾಂಗ ಪಕ್ಷದ ಸಭೆಗೆ ಕೇಂದ್ರದ ವೀಕ್ಷಕರಾಗಿ ಆಗಮಿಸಿದ್ದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಗುಜರಾತ್ ಮಾಜಿ ಸಿಎಂ ವಿಜಯ್ ರೂಪಾನಿ ನೇತೃತ್ವದಲ್ಲಿ ಬುಧವಾರ ಬಿಜೆಪಿ ಶಾಸಕಾಂಗ ಪಕ್ಷದ ನಾಯಕರಾಗಿ ದೇವೇಂದ್ರ ಫಡ್ನವೀಸ್ ಆಯ್ಕೆಯಾದ ನಂತರ ರಾಜ್ಯಪಾಲರ ಭೇಟಿಯಾದರು. ಉಸ್ತುವಾರಿ ಸಿಎಂ ಏಕನಾಥ್ ಶಿಂಧೆ ಮತ್ತು ಅಜಿತ್ ಪವಾರ್ ಅವರೊಂದಿಗೆ ರಾಜ್ಯಪಾಲರ ಭೇಟಿಯಾದರು.
ಸರ್ಕಾರ ರಚನೆಗೆ ಹಕ್ಕು ಮಂಡಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ನಿಯೋಜಿತ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, “ನಾವು ಮೂವರೂ ಸರ್ಕಾರವನ್ನು ನಡೆಸುತ್ತೇವೆ”. ‘ಸಿಎಂ ಮತ್ತು ಡಿಸಿಎಂ ಹುದ್ದೆಗಳು ಕೇವಲ ತಾಂತ್ರಿಕ ಹುದ್ದೆಗಳಷ್ಟೆ. ನಾವೆಲ್ಲರೂ ಮಹಾರಾಷ್ಟ್ರಕ್ಕಾಗಿ ಒಟ್ಟಾಗಿ ಕೆಲಸ ಮಾಡುತ್ತೇವೆ. ಮುಂಬರುವ ಸಭೆಗಳಲ್ಲಿ ಇತರ ಸಚಿವರ ನಿರ್ಧರಿಸಲಾಗುವುದು. ನಾವು ರಾಜ್ಯಪಾಲರನ್ನು ಭೇಟಿ ಮಾಡಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ್ದೇವೆ ಮತ್ತು ಮೂರು ಪಕ್ಷಗಳ ಶಾಸಕರ ಬೆಂಬಲ ಪತ್ರವನ್ನು ನೀಡಿದ್ದೇವೆ. ನಾನು ಮಹಾಯುತಿ ಸರ್ಕಾರದ ಮುಖ್ಯಮಂತ್ರಿ ಆಗಿ ಪ್ರಮಾಣ ವಚನ ಸ್ವೀಕರಿಸಬೇಕು ಎಂದು ನಮ್ಮ ಮಿತ್ರ ಪಕ್ಷಗಳಾದ ಶಿವಸೇನೆ ಮತ್ತು ಎನ್‌ಸಿಪಿ ರಾಜ್ಯಪಾಲರಿಗೆ ಮನವಿ ಮಾಡಿವೆ ಎಂದರು.
Related Articles
Advertisement
ಜವಾಬ್ದಾರಿ ಹೆಚ್ಚಿದೆ:
“ನಮ್ಮ ಮೇಲಿನ ಜವಾಬ್ದಾರಿ ಈಗ ಮತ್ತಷ್ಟು ಹೆಚ್ಚಾಗಿದೆ. ಕಷ್ಟಪಟ್ಟು ಕೆಲಸ ಮಾಡಬೇಕಿದೆ. ಜನರು ನಮ್ಮ ಮೇಲಿಟ್ಟಿರುವ ನಿರೀಕ್ಷೆಗಳನ್ನು ಹುಸಿಯಾಗಲು ಬಿಡುವುದಿಲ್ಲ. ಬಿಜೆಪಿ 2019ರಲ್ಲಿ ಜನಾದೇಶ ಹೊಂದಿತ್ತು. ಆದರೆ ಅದನ್ನು ಕಸಿದುಕೊಳ್ಳಲಾಯಿತು. ಬಳಿಕ ನಮ್ಮನ್ನು ಗುರಿಯಾಗಿಸಿ ಟೀಕೆ ಮಾಡಲಾಯಿತು. ಆದರೂ ಯಾವೊಬ್ಬ ಶಾಸಕರೂ ಪಕ್ಷ ತೊರೆಯಲಿಲ್ಲ. ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ಕೆಲಸ ಮಾಡಿದ ನನ್ನನ್ನು ಸಿಎಂ ಮಾಡಿದ್ದಕ್ಕೆ ಪ್ರಧಾನಿ ಮೋದಿ ಅವರಿಗೆ ಧನ್ಯವಾದ ಅರ್ಪಿಸುತ್ತೇನೆ’ ಎಂದು ಫಡ್ನವೀಸ್ ಹೇಳಿದ್ದಾರೆ.
ಪಕ್ಷಗಳ ಬಲಾಬಲ:
288 ಸದಸ್ಯ ಬಲದ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಮಹಾಯುತಿ ಕೂಟವು 230 ಸ್ಥಾನಗಳ ಗೆದ್ದುಕೊಂಡಿದೆ. ವಿರೋಧ ಪಕ್ಷವಾದ ಮಹಾ ವಿಕಾಸ್ ಅಘಾಡಿ ಕೇವಲ 50 ಸ್ಥಾನಗಳಿಗೆ ಸೀಮಿತವಾಯಿತು. ಚುನಾವಣೆಯಲ್ಲಿ ಬಿಜೆಪಿ 132 ಸ್ಥಾನಗಳ ಪಡೆದು ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಏಕನಾಥ್ ಶಿಂಧೆಯವರ ಶಿವಸೇನೆ 57 ಸ್ಥಾನಗಳು ಮತ್ತು ಅಜಿತ್ ಪವಾರ್ ಅವರ ಎನ್‌ಸಿಪಿ 41 ಸ್ಥಾನಗಳ ಪಡೆದಿದೆ. ಬಿಜೆಪಿಗೆ ಐವರು ಸ್ವತಂತ್ರ ಶಾಸಕರ ಬೆಂಬಲವೂ ದೊರೆತಿದೆ.
ಮುಂಬೈಯ ಆಜಾದ್ ಮೈದಾನದಲ್ಲಿ ನಾಳೆ ಸಂಜೆ 5.30ಕ್ಕೆ ಪ್ರಮಾಣ ವಚನ ಸಮಾರಂಭ ನಡೆಯಲಿದೆ. ದೇವೇಂದ್ರ ಫಡ್ನವೀಸ್ ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿ, ಏಕನಾಥ್ ಶಿಂಧೆ ಹಾಗೂ ಅಜಿತ್ ಪವಾರ್ ಉಪ ಮುಖ್ಯಮಂತ್ರಿಗಳಾಗಿ ಪ್ರಮಾಣವಚನ ಸ್ವೀಕರಿಸುವ ಸಮಾರಂಭಕ್ಕೆ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಸೇರಿದಂತೆ ಹಲವು ರಾಷ್ಟ್ರೀಯ ಬಿಜೆಪಿ ನಾಯಕರು ಈ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. 4000 ಮಂದಿ ಪೊಲೀಸ್:
ದಕ್ಷಿಣ ಮುಂಬೈನ ಆಜಾದ್ ಮೈದಾನದಲ್ಲಿ ಪ್ರಮಾಣವಚನ ಸ್ವೀಕಾರ ಸಮಾರಂಭ ನಡೆಯಲಿದ್ದು, ಭದ್ರತೆ ಒದಗಿಸಲು 4000 ಮಂದಿ ಪೊಲೀಸರನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ. ರಾಜ್ಯ ಮೀಸಲು ಪೊಲೀಸ್ ಪಡೆ, ಕ್ವಿಕ್ ರೆಸ್ಪಾನ್ಸ್ ಟೀಮ್, ಗಲಭೆ ನಿಯಂತ್ರಣ ತಂಡ, ಡೆಲ್ಟಾ, ಬಾಂಬ್ ಪತ್ತೆ ದಳವನ್ನು ನಿಯೋಜನೆ ಮಾಡಲಾಗಿದೆ.