ವೆಲ್ಲೂರು: ಸಿಲಿಕಾನ್ ವ್ಯಾಲಿ, ಉದ್ಯಾನ ನಗರಿ ಎಂಬಿತ್ಯಾದಿ ಬಿರುದುಗಳನ್ನು ಪಡೆದಿರುವ ಬೆಂಗಳೂರು, ಧಾರ್ಮಿಕವಾಗಿಯೂ ಹಲವಾರು ಹೆಗ್ಗಳಿಕೆಗಳನ್ನು ಪಡೆದಿದೆ. ಈ ಹೆಗ್ಗಳಿಕೆಗಳಿಗೆ ಹೊಸದಾಗಿ ಸೇರ್ಪಡೆಗೊಳ್ಳಲಿದೆ 108 ಅಡಿ ಎತ್ತರದ ಶೇಷಶಯನನಾದ ಶ್ರೀವಿಶ್ವರೂಪ ಮಹಾವಿಷ್ಣು.
ಬೆಂಗಳೂರಿನ ಈಜಿಪುರದಲ್ಲಿರುವ ಶ್ರೀಕೋದಂಡರಾಮಸ್ವಾಮಿ ಚಾರಿಟಬಲ್ ಟ್ರಸ್ಟ್‌ನ ದೇಗುಲಕ್ಕಾಗಿ ಭಾಗಶಃ ಸಿದ್ಧಗೊಂಡಿರುವ 64 ಅಡಿ ಎತ್ತರದ ಮಹಾವಿಷ್ಣು ಹಾಗೂ 24 ಅಡಿ ಎತ್ತರದ ಸಪ್ತ ಹೆಡೆಗಳ ಆದಿಶೇಷನ ಮೂರ್ತಿಗಳ ಸಾಗಣೆಯ ದೊಡ್ಡ ಸಾಹಸವೊಂದು ಆರಂಭವಾಗಿದೆ. ಈಜಿಪುರದ ಶ್ರೀಕೋದಂಡರಾಮ ದೇಗುಲದ ಆವರಣದಲ್ಲಿ ಇವು ಪ್ರತಿಷ್ಠಾಪನೆಗೊಳ್ಳಲಿವೆ.
ತಮಿಳುನಾಡಿನ ವಂಡವಾಸಿ ತಾಲೂಕಿನ ಕೋರಕೋಟೈ ಹಳ್ಳಿಯಲ್ಲಿನ ಪುಟ್ಟ ಬೆಟ್ಟದ ಕಲ್ಲನ್ನು ಬೇರ್ಪಡಿಸಿ ಕೆತ್ತಲಾಗಿರುವ ಈ ಬೃಹತ್ ಮೂರ್ತಿಗಳನ್ನು ಬೆಂಗಳೂರಿಗೆ ಸಾಗಿಸಲಾಗುತ್ತಿದೆ. 380 ಮೆಟ್ರಿಕ್ ಟನ್ ತೂಕವಿರುವ ಈ ಬೃಹತ್ ಮೂರ್ತಿಯನ್ನು 240 ಟೈರುಗಳಿರುವ ದೊಡ್ಡ ಕಾರ್ಗೋ ಟ್ರಕ್ ಸಹಾಯದಿಂದ ಸಾಗಿಸಲಾಗುತ್ತಿದ್ದು, ಮೂರು ದಿನಗಳ ಹಿಂದೆ (ಶುಕ್ರವಾರ) ಶುರುವಾಗಿರುವ ಈ ಪಯಣ ಭಾನುವಾರದ ಹೊತ್ತಿಗೆ ಕೇವಲ 300 ಮೀಟರ್ ಮಾತ್ರ ಸಾಗಿದೆ!
“”ಕೋರಕೋಟೈನ ಕಲ್ಲು ಕ್ವಾರಿಯಿಂದ 500 ಮೀಟರ್‌ಗಳ ಕಚ್ಚಾ ರಸ್ತೆ ಕ್ರಮಿಸಿದ ನಂತರ, ತೆಳ್ಳಾರ್-ದೇಸೂರ್ ಹೆದ್ದಾರಿ ಸಿಗುತ್ತದೆ. ಅಲ್ಲಿಂದ ಮೂರ್ತಿಗಳ ಪ್ರಯಾಣ ಸುಗಮವಾಗಲಿದೆ. ಆದರೂ, ಬೆಂಗಳೂರು ತಲುಪಲು 50 ದಿನ ಬೇಕಾಗುತ್ತದೆ” ಎಂದು ಮೂರ್ತಿ ಸಾಗಣೆ ಜವಾಬ್ದಾರಿ ಹೊತ್ತಿರುವ ಮುಂಬೈ ಮೂಲದ ರೇಶಮ್‌ಸಿಂಗ್ ಗ್ರೂಪ್ ಸಂಸ್ಥೆಯ ವ್ಯವಸ್ಥಾಪಕ ರಾಜನ್ ಬಾಬು ತಿಳಿಸಿದ್ದಾರೆ. ಸದ್ಯಕ್ಕೆ ಮೂರ್ತಿಯ ಬಾಹ್ಯ ಕೆತ್ತನೆಯಷ್ಟೇ ಪೂರ್ಣಗೊಂಡಿದ್ದು ಅಂತಿಮ ಸ್ಪರ್ಶದ ಕೆಲಸ ಬೆಂಗಳೂರಿನಲ್ಲಿ ನಡೆಯಲಿದೆ.
ಮೂರ್ತಿಯ ವಿಶೇಷ
– 64 ಅಡಿ ಎತ್ತರದ ಮಹಾ ವಿಷ್ಣು ಹಾಗೂ 24 ಅಡಿ ಎತ್ತರದ ಆದಿಶೇಷ
– ಪೀಠ ಸೇರಿ ಒಟ್ಟು ಎತ್ತರ 108 ಅಡಿ
– ಮಹಾವಿಷ್ಣು ಮೂರ್ತಿಯ ತೂಕ 380 ಮೆಟ್ರಿಕ್ ಟನ್; ಆದಿಶೇಷ ಮೂರ್ತಿಯ ತೂಕ 230 ಮೆಟ್ರಿಕ್ ಟನ್
- 22 ಕೈಗಳು, 11 ಮುಖಗಳುಳ್ಳ ಮಹಾ ವಿಷ್ಣು; ಏಳು ಹೆಡೆಗಳುಳ್ಳ ಆದಿಶೇಷ
– ಮೂರ್ತಿ ಕೆತ್ತನೆ ಆರಂಭ: 2014
ಪ್ರತಿಷ್ಠಾಪನೆ ಎಲ್ಲಿ?
ಬೆಂಗಳೂರಿನ ಈಜಿಪುರದ ಶ್ರೀಕೋದಂಡ ರಾಮಸ್ವಾಮಿ ದೇಗುಲದ ಆವರಣ
ಶಿಲ್ಪಿಗಳು: ರಾಜೇಂದ್ರ ಆಚಾರ್ಯ ಮತ್ತು ತಂಡ, ತಿರುಮಲ ತಿರುಪತಿ ದೇವಸ್ಥಾನಂ
ಕೆತ್ತನೆ, ಸಾಗಾಣಿಕೆ ಮೇಲುಸ್ತುವಾರಿ:ಲಕ್ಷ್ಮಣನ್, ಶ್ರೀಕೋದಂಡರಾಮ ದೇವಸ್ಥಾನಂ ಟ್ರಸ್ಟ್, ಈಜಿಪುರ, ಬೆಂಗಳೂರು