Advertisement

Mahavir Jayanti: ಮಹಾವೀರ ಸ್ಮರಣೆ; ಅರಮನೆಯ ಮೆಟ್ಟಿಲಿಳಿದು ಅಧ್ಯಾತ್ಮದ ಅಂಬರವೇರಿದ!

11:32 AM Apr 21, 2024 | Team Udayavani |

ಇಂದು ಜಗತ್ತಿನಾದ್ಯಂತ ಭಗವಾನ್‌ ಮಹಾವೀರರ 2623ನೇ ಜನ್ಮಕಲ್ಯಾಣ ಮಹೋತ್ಸವವನ್ನು ಆಚರಿಸಲಾಗುತ್ತಿದೆ. ಭಗವಾನ್‌ ಮಹಾವೀರರು ವರ್ತಮಾನ ಕಾಲದ ಕೊನೆಯ ತೀರ್ಥಂಕರರು. ಬಹುಜನಗಳು ಭಾವಿಸಿರುವಂತೆ ಅವರು  ಜೈನಧರ್ಮದ ಸ್ಥಾಪಕರು ಅಲ್ಲ. ಮಹಾವೀರರ ಬಾಲ್ಯ, ಬದುಕಿನ ಕುರಿತ ಸ್ವಾರಸ್ಯಕರ ಘಟನೆಗಳ ಝಲಕ್‌ ಇಲ್ಲಿದೆ…

Advertisement

ಜಗತ್ತಿನಲ್ಲಿ ಕಷ್ಟ ಕೋಟಲೆಗಳು ಬಂದಾಗ ಜನರನ್ನು ಕತ್ತಲಿನಿಂದ ಬೆಳಕಿನೆಡೆಗೆ ಕರೆದೊಯ್ಯಲು ಯುಗಪುರುಷರು ಹುಟ್ಟುತ್ತಾರಂತೆ. ಅಂಥ ಯುಗಪುರುಷರ ಪೈಕಿ ಭಗವಾನ್‌ ಮಹಾವೀರ ಕೂಡ ಒಬ್ಬರು. ಅವರ ಮೊದಲ ಹೆಸರು ವರ್ಧಮಾನ. ಈಗಿನ ಬಿಹಾರಕ್ಕೆ ಹಿಂದೆ ವಿದೇಹ ಎಂಬ ಹೆಸರಿತ್ತು. ಅದರ ರಾಜಧಾನಿ ವೈಶಾಲಿ. ಅಲ್ಲಿನ ರಾಜ ಸಿದ್ಧಾರ್ಥ ಮತ್ತು ತ್ರಿಶಲಾದೇವಿಯವರ ಮಗನೇ ವರ್ಧಮಾನ. ಮಗು ಜನಿಸಿದ ಕಾಲಕ್ಕೆ ಸುಖ ಶಾಂತಿ ಸಂಪತ್ತು ವೃದ್ಧಿಯಾದ ಕಾರಣದಿಂದ, ಈ ಪ್ರವರ್ಧಮಾನಕ್ಕೆ ಕಾರಣನಾದವ ಎಂಬರ್ಥದಲ್ಲಿ “ವರ್ಧಮಾನ’ ಎಂಬ ಹೆಸರು ಇಟ್ಟರಂತೆ.

ರಾಜ ವೈಭೋಗದ ನಡೆವೆಯೂ ಅಧ್ಯಾತ್ಮದೆಡೆಗೆ ವರ್ಧಮಾನನಿಗೆ ಅಮಿತವಾದ ಸೆಳೆತವಿತ್ತು. ಬದುಕಿನ ಬಗ್ಗೆ ಮತ್ತು ಅದರ ಉದ್ದೇಶದ ಬಗ್ಗೆ ಹಲವು ಪ್ರಶ್ನೆಗಳು ಅವನ ಮನಸ್ಸಲ್ಲಿದ್ದವು. ಎಲ್ಲರಿಗೂ ಇಲ್ಲದ ವೈಭೋಗ ನನಗೇಕೆ? ಹುಟ್ಟು ಸಾವಿನ ಅರ್ಥವೇನು? ಹುಟ್ಟು ಸಾವುಗಳಾಚೆಯ ಲೋಕ ಅದಾವುದು? ಹೀಗೆ ಹಲವು ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ತಹತಹಿಕೆ ಪ್ರಾರಂಭವಾಯಿತು. ಐಹಿಕ ಭೋಗಗಳಿಂದ ಮುಕ್ತವಾದ ನಂತರವೇ ಅಧ್ಯಾತ್ಮದ ಸಾಧನೆ ಸಾಧ್ಯವೆಂದರಿತು, ರಾಜ ವೈಭೋಗವನ್ನು ತ್ಯಜಿಸಿ, ದಿಗಂಬರನಾಗಿ ತಪಸ್ಸಿಗೆ ಹೊರಟ.

ಜ್ಞಾನೋದಯವಾದ  ಕ್ಷಣ…

ತತ್ಕಾಲದಲ್ಲಿ ಅಧ್ಯಾತ್ಮಿಕ ಉನ್ನತಿಗೇರದ, ತಾಮಸಿಕ ಮತ್ತು ಸಂಸಾರ ಬಂಧನದಲ್ಲಿರುವ ಜನರು ವರ್ಧಮಾನನನ್ನು  ಹುಚ್ಚನೆಂದು ಜರಿದರು. ಅವನ ಮೇಲೆ ಕಲ್ಲು ಎಸೆದರು. ಹೊಡೆದು ಬಡಿದು ಹಿಂಸಿಸಿದರು. ಬೇಹುಗಾರಿಕೆ ಮಾಡುತ್ತಿರಬಹುದೆಂದು ಶಂಕಿಸಿ ಹಿಂಸೆ ಕೊಟ್ಟರು. 12 ವರ್ಷ, 5 ತಿಂಗಳು, 15 ದಿನಗಳ ಕಠಿಣ ತಪಸ್ಸಿನ ನಂತರ ಈಗಿನ ಜಾರ್ಖಂಡ್‌ಗೆ ಸಮೀಪದ ಋಜಕೂಲ ನದಿಯ ತಟದ ಶಾಲವೃಕ್ಷದಡಿಯಲ್ಲಿ ಗೋ ಆಸನದಲ್ಲಿ ಕುಳಿತು ಧ್ಯಾನ ಮಾಡುತ್ತಿರುವಾಗ ವರ್ಧಮಾನನಿಗೆ ಜ್ಞಾನೋದಯವಾಯಿತು. ‘ಕೇವಲ ಜ್ಞಾನ’ ಪ್ರಾಪ್ತಿಯಾದ ಕಾರಣ ತೀರ್ಥಂಕರರಾದರು. ತಮಗೂ ಮುನ್ನ ಆಗಿ ಹೋದ 23 ತೀರ್ಥಂಕರರ ಭೋದನೆಯನ್ನು ಸರಳೀಕರಿಸಿ ಮತ್ತು ಆ ಕಾಲಕ್ಕೆ ತಕ್ಕಂತೆ ಮಾರ್ಪಾಟುಗಳನ್ನು ಮಾಡಿ ಆ ಚಿಂತನೆಗಳಿಗೆ ಚೈತನ್ಯ ಕೊಟ್ಟು ಬಿತ್ತರಿಸಿದರು. ಜನಮಾನಸದಲ್ಲಿ ಬಿತ್ತಿದರು. ಊರೂರಲ್ಲಿ ಅವರ ಧಾರ್ಮಿಕ ಸಭೆಗಳು ಏರ್ಪಡುತ್ತಿದ್ದವು. ಅದರಲ್ಲಿ ಪಾಲ್ಗೊಳ್ಳಲು ಸರ್ವರಿಗೂ ಸಮಾನ ಅವಕಾಶಗಳಿದ್ದವು.

Advertisement

ಜಿನೈಕ್ಯನಾಗುವ ಮುನ್ನ…

ಸತ್ಯ, ಅಹಿಂಸೆ, ಅಸ್ತೇಯ, ಅಪರಿಗ್ರಹ ಹಾಗೂ ಬ್ರಹ್ಮಚರ್ಯಗಳು ಅವರ ಧರ್ಮ ಭೋದನೆಯ ಮೂಲ ಮಂತ್ರಗಳಾಗಿದ್ದವು. ಮಾಂಸ, ಮದ್ಯ, ವೇಶ್ಯೆಯರ ಸಹವಾಸದಿಂದ ದೂರವಿರಬೇಕೆಂಬುದೂ ಅವರ ಭೋದನೆಯ ಭಾಗವಾಗಿತ್ತು. ಸಮಾಜದಲ್ಲಿನ ಅಷ್ಟೂ ಜನ

ಸನ್ಯಾಸಕ್ಕೆ ಬಂದರೆ ಆಗುವ ಅಸಮತೋಲನವನ್ನರಿತ ಅವರು ಗೃಹಸ್ಥಾಶ್ರಮಕ್ಕೂ ಅಷ್ಟೇ ಮಹತ್ವ ಕೊಟ್ಟಿದ್ದರು. ಗೃಹಸ್ಥ ಧರ್ಮ ಮತ್ತು ಸನ್ಯಾಸ ಧರ್ಮಗಳು ಅವರ ಭೋದನೆಯ ಭಾಗಗಳಾಗಿದ್ದವು.

ಹೀಗೆ ಹಲವಾರು ಲೋಕ ಕಲ್ಯಾಣಾರ್ಥ ಸಂದೇಶಗಳನ್ನು ನೀಡಿ, ತನ್ನ 71ನೇ ವಯಸ್ಸಿನಲ್ಲಿ ಮಹಾವೀರ ಜಿನೈಕ್ಯನಾದ. ಪರಿನಿರ್ವಾಣ ಮಹೋತ್ಸವವನ್ನು ಹಸ್ತಿಪಾಲ ಎಂಬ ದೊರೆ ಹದಿನೆಂಟು ಗಣರಾಜ್ಯಗಳ ಪ್ರಮುಖರನ್ನು, ಅಪಾರ ಜನಸ್ತೋಮವನ್ನು ಕರೆಸಿ ಸಾಲು ಸಾಲು ದೀಪ ಬೆಳಗಿ ಆಚರಿಸಿದರು.

ಜೈನ ಧರ್ಮದಲ್ಲಿ ಭೂತಕಾಲದ 24 ತೀರ್ಥಂಕರರು ಆಗಿ ಹೋದ ಮೇಲೆ ವರ್ತಮಾನ ಕಾಲದ 24 ತೀರ್ಥಂಕರರು ಆಗಿಹೋದರು. ಅದರಲ್ಲಿ ಮಹಾವೀರ 24ನೇಯವ.

ಮಹಾವೀರರ ಬೋಧನೆಯ ಮಖ್ಯಾಂಶಗಳು :

ಸತ್ಯ ಮತ್ತು ವಾಸ್ತವಗಳು ಸಂಕೀರ್ಣವಾದ ಅಂಶಗಳು ಮತ್ತು ಬಹುಮುಖವನ್ನು ಹೊಂದಿವೆ. ಯಾವುದೇ ಮಾತಿನ ಮೂಲಕ “ಇದಮಿತ್ಥಂ’ ಎಂಬಂತೆ ಸತ್ಯವನ್ನು ವಿವರಿಸಲಾಗದು. ಮನುಷ್ಯ ಸತ್ಯವನ್ನು ವಿವರಿಸುವಾಗ ಅದರ ಪಾರ್ಶ್ವ ಭಾಗವನ್ನು ಮಾತ್ರ ವಿವರಿಸಬಲ್ಲ. ಸತ್ಯವನ್ನು ಅನುಭವಿಸಬಹುದು, ವಿವರಿಸಲಾಗದು.

ತನ್ನ ಅವಶ್ಯಕತೆಗಿಂತ ಹೆಚ್ಚಿರುವ ಧನ ಸಂಗ್ರಹಾದಿಗಳನ್ನು ದಾನ ಮಾಡಬೇಕು.

ಸಮ್ಯಕ್‌ ದರ್ಶನ, ಸಮ್ಯಕ್‌ ಜ್ಞಾನ, ಸಮ್ಯಕ್‌ ಚಾರಿತ್ರ್ಯ. (ಯಾವತ್ತೂ ಒಳ್ಳೆಯದನ್ನೇ ನೋಡು, ಅದರಿಂದ ಒಳ್ಳೆಯ ಜ್ಞಾನ ಸಂಚಯವಾಗುತ್ತದೆ, ಅದು ನಿನ್ನ ಒಳ್ಳೆಯ ನಡೆತೆಗೆ ಕಾರಣವಾಗುತ್ತದೆ)

ಬೇರೆಯವರು ನಮ್ಮೊಂದಿಗೆ ಹೇಗೆ ವರ್ತಿಸಬೇಕೆಂದು ಬಯಸುತ್ತೇವೆಯೋ ಹಾಗೆಯೇ ನಾವೂ ಅವರೊಂದಿಗೆ ವರ್ತಿಸಬೇಕು.

ಧರ್ಮಾತ್ಮನಿಗೆ ದೇವರು ನಮಿಸುತ್ತಾನೆ. ಮನುಷ್ಯನಂತೆ ಪ್ರಾಣಿ, ಪಕ್ಷಿ, ಕೀಟಗಳಲ್ಲಿರು­ವುದೂ ಅದೇ ಆತ್ಮ. ಹೀಗಾಗಿ ಯಾವುದನ್ನೂ ಹಿಂಸಿಸಬೇಡ.

ಹೊರಗಿನ ಶತ್ರುಗಳಿಗಿಂತ ಅರಿಷಡ್ವೈರಿಗಳಳು ಅಪಾಯಕಾರಿ. ಅವರೊಂದಿಗೆ ಸೆಣಸು.

ವರ್ಧಮಾನ… ಸನ್ಮತಿ… ವೀರ… ಮಹಾವೀರ..!

ವರ್ಧಮಾನ ತೊಟ್ಟಿಲ ಕೂಸಾಗಿದ್ದ ಸಂದರ್ಭದಲ್ಲಿ ಆ ಕಾಲದ ಶ್ರೇಷ್ಠರು ಎಂದೇ ಹೆಸರಾಗಿದ್ದ ವಿಜಯ ಮತ್ತು ಸಂಜಯಂತ ಎಂಬ ಚಾರಣ ಮುನಿಗಳಿಗೆ ತತ್ವದ ವಿಷಯಕ್ಕೆ ಸಂಬಂಧಿಸಿದಂತೆ ಕೆಲವು ಸಂದೇಹಗಳು ಉಂಟಾದವು. ಆಗ ಅವರು ತೊಟ್ಟಿಲ ಕೂಸಾಗಿದ್ದ ವರ್ಧಮಾನನ ದರ್ಶನ ಮಾತ್ರದಿಂದಲೇ ಸಮಸ್ತ ಸಂದೇಹಗಳನ್ನು ಪರಿಹರಿಸಿಕೊಳ್ಳುತ್ತಾರೆ. ಆಗ ಆ ಮುನಿಗಳಿಬ್ಬರೂ ಆ ಮಗುವಿಗೆ “ಸನ್ಮತಿ'(ಜ್ಞಾನಿ) ಎಂದು ಹೆಸರಿಡುತ್ತಾರೆ.

ವರ್ಧಮಾನ ಬಾಲಕನಾಗಿದ್ದ ಸಂದರ್ಭದಲ್ಲಿ ಅರಮನೆಯ ಆನೆಗೆ ಮದ ಬಂದು ನಗರದಲ್ಲಿ ದಾಂಧಲೆ ಎಬ್ಬಿಸುತ್ತಿದ್ದಾಗ, ನಿರ್ಭೀತ ಬಾಲಕ ವರ್ಧಮಾನನು ಆ ಆನೆಯನ್ನು ನಿಯಂತ್ರಣಕ್ಕೆ ತರುತ್ತಾನೆ. ಬಾಲಕನ ಸಾಹಸ ಕಂಡು ನಿಬ್ಬೆರಗಾದ ಪ್ರಜೆಗಳು ಅವನನ್ನು “ವೀರ’ ಎಂಬ ಹೆಸರಿನಿಂದ ಕರೆದರು. ಬಾಲಕ ವೀರನು ಅದೊಮ್ಮೆ ತನ್ನ ಗೆಳೆಯರೊಂದಿಗೆ ಆಡುತ್ತಿದ್ದಾಗ ಸಂಗಮ ಎಂಬ ಹೆಸರಿನ ದೇವನೊಬ್ಬನು ವೀರನ ಧೈರ್ಯ ಪರೀಕ್ಷಿಸುವ ಸಲುವಾಗಿ ಭಯಾನಕವಾದ ಸರ್ಪರೂಪವನ್ನು ಧರಿಸಿ ಮಕ್ಕಳು ಆಡುತ್ತಿದ್ದ ಕಡಗೆ ಬರುತ್ತಾನೆ. ಎಲ್ಲಾ ಬಾಲಕರೂ ಹೆದರಿ ಓಡುತ್ತಿದ್ದಾಗ ಬಾಲಕ ವೀರನು ಹೆದರದೇ ಆ ಘಟಸರ್ಪವನ್ನು ಹಿಡಿದು ಅದನ್ನು ಸುರಕ್ಷಿತವಾಗಿ ದೂರ ಬಿಡುತ್ತಾನೆ. ಬಾಲಕನ ಧೈರ್ಯವನ್ನು ಕಂಡು ಸಂತೋಷಗೊಂಡ ಸಂಗಮ ದೇವನು ಇವನು ಬರಿಯ ವೀರನಲ್ಲ, ಮಹಾವೀರ ಎಂದು ಉದ್ಗರಿಸುತ್ತಾನೆ. ಮುಂದೆ ಇದೇ ಹೆಸರೇ ಜನಪ್ರಿಯವಾಯಿತು.-ಪ್ರೊ. ಅಜಿತ್‌ ಪ್ರಸಾದ್‌, ಮೂಡಬಿದರೆ

-ರಾಹುಲ್‌ ಅಶೋಕ ಹಜಾರೆ

Advertisement

Udayavani is now on Telegram. Click here to join our channel and stay updated with the latest news.

Next