Advertisement

ಮಹಾವೀರ ವೃತ್ತ ಕಲಶ ನಿರ್ಮಾಣಕ್ಕೆ ಆಸಕ್ತಿ ತೋರದ ಸ್ಥಳೀಯಾಡಳಿತ! 

11:40 PM Feb 23, 2021 | Team Udayavani |

ಮಹಾನಗರ: ಪಂಪ್‌ವೆಲ್‌ ಮೇಲ್ಸೇತುವೆ ಉದ್ಘಾಟನೆಗೊಂಡು ಒಂದು ವರ್ಷ ಕಳೆದಿದ್ದರೂ ನಗರದ “ಆತ್ಮ’ದಂತೆ ಕಂಗೊಳಿಸುತ್ತಿದ್ದ ಮಹಾವೀರ ವೃತ್ತದಲ್ಲಿ ಈ ಹಿಂದೆ ಇದ್ದ ಕಲಶ ಮರು ನಿರ್ಮಾಣ ಇನ್ನೂ ನಡೆದಿಲ್ಲ. ಸ್ಥಳೀಯಾಡಳಿತ, ಜಿಲ್ಲಾಡಳಿತ ಸಹಿತ ಜನಪ್ರತಿನಿಧಿಗಳಿಗೆ ಜೈನ ಸಮುದಾಯದಿಂದ ಈ ಕುರಿತು ಈಗಾಗಲೇ ಮನವಿ ಮಾಡಿದ್ದರೂ ಈ ಬಗ್ಗೆ ಪೂರಕ ಕ್ರಮಗಳು ಮಾತ್ರ ಇನ್ನೂ ಆಗಿಲ್ಲ.

Advertisement

ಮಹಾವೀರ ವೃತ್ತದಲ್ಲಿನ ಈ ಕಲಶವನ್ನು ಪಂಪ್‌ ವೆಲ್‌ ಮೇಲ್ಸೇತುವೆ ಪಕ್ಕದಲ್ಲಿ ಅಂದರೆ ಕಂಕನಾಡಿ ಕಡೆಗೆ ತಿರುವು ಪಡೆಯುವ ಜಾಗದಲ್ಲಿ ಪ್ರತ್ಯೇಕ ವೃತ್ತ ಮಾಡಿ ಅಲ್ಲಿ ಕಲಶ ಸ್ಥಾಪನೆ ಮಾಡಲು ಈಗಾಗಲೇ ಉದ್ದೇಶಿಸಲಾಗಿದೆ. ಈ ಪ್ರದೇಶದಲ್ಲಿ ಸುಂದರೀಕರಣದ ಜತೆಗೆ, ಸುಮಾರು 15 ಲಕ್ಷ ರೂ. ವೆಚ್ಚದಲ್ಲಿ ವೃತ್ತ ಅಭಿವೃದ್ಧಿಗೊಳಿಸಲು ಜೈನ್‌ ಸೊಸೈಟಿಯು ನೀಲನಕ್ಷೆಯನ್ನು ಸಿದ್ಧಗೊಳಿಸಿದೆ. ಸ್ಥಳೀಯಾಡಳಿತ ಅನುಮತಿಗಾಗಿ ಕಾಯುತ್ತಿದೆ.

ಭಗವಾನ್‌ ಶ್ರೀ ಮಹಾವೀರ ಸ್ವಾಮಿಯ 2600ನೇ ಜನ್ಮ ಕಲ್ಯಾ ಣೋತ್ಸವವನ್ನು ರಾಷ್ಟ್ರಾದ್ಯಂತ 2001ರಿಂದ 2002ರ ವರೆಗೆ ಆಚ ರಿ ಸಲು ಕೇಂದ್ರ ಸರಕಾರ ಈ ಹಿಂದೆ ನಿರ್ಧರಿಸಿತ್ತು. ಅದÃ ‌ಂತೆ ಮಂಗಳೂರು ಮಹಾನಗರ ಪಾಲಿಕೆಯು “ಮಹಾವೀರ ವೃತ್ತ’ ಎಂದು ನಾಮಕರಣ ನಡೆಸಿತ್ತು. ಬಳಿಕ ಜೈನ್‌ ಸೊಸೈಟಿ ಹಾಗೂ ಜೈನ ಸಮಾಜ ಸೇರಿಕೊಂಡು 43 ಸೆಂಟ್ಸ್‌ ಜಾಗದಲ್ಲಿ ಸುಮಾರು 12 ಲಕ್ಷ ರೂ. ವೆಚ್ಚದಲ್ಲಿ ಸುಂದರ ಮಹಾವೀರ ವೃತ್ತ, 20 ಟನ್‌ ತೂಕದ ಮಂಗಲ ಕಲಶವನ್ನು ನಿರ್ಮಾಣ ಮಾಡಲಾಯಿತು.

2003ರಲ್ಲಿ ಉದ್ಘಾಟನೆ
ಮಹಾವೀರ ವೃತ್ತ ಮತ್ತು ಕಲಶ ನಿರ್ಮಾಣ ಕಾಮಗಾರಿ 2003ರ ಜನವರಿಯಲ್ಲಿ ಆರಂಭಗೊಂಡು 6 ತಿಂಗಳುಗಳ ಬಳಿಕ ಉದ್ಘಾಟನೆ ನೆರವೇರಿತ್ತು. ಪಂಪ್‌ವೆಲ್‌ ಮೇಲ್ಸೇತುವೆ ಕಾಮಗಾರಿ ವೇಳೆ ಈ ಕಲಶವನ್ನು ತೆರವು ಗೊಳಿ ಸಲಾಗಿತ್ತು. ಬಳಿಕ ಅಲ್ಲೇ ಹತ್ತಿರದಲ್ಲಿ ಕಂಕನಾಡಿ ರಸ್ತೆ ತಿರುವು ಪ್ರವೇಶದಲ್ಲಿ ಇಡಲಾಗಿದೆ. ಮಹಾವೀರ ವೃತ್ತ ಮತ್ತು ಕಲಶ ನಿರ್ಮಾಣ ಕಾಮಗಾರಿ ಸದ್ಯದಲ್ಲಿಯೇ ಆರಂಭಿಸಲಾಗುವುದು ಎಂದು ಪಂಪ್‌ವೆಲ್‌ ಫ್ಲೈ ಓವರ್‌ ಉದ್ಘಾಟನೆ ವೇಳೆ ಜನಪ್ರತಿನಿಧಿಗಳು ಭರವಸೆ ನೀಡಿದ್ದರು. ಒಂದು ವರ್ಷ ಕಳೆದರೂ ಭರವಸೆ ಈಡೇರಲಿಲ್ಲ.

15 ಲಕ್ಷ ರೂ. ವೆಚ್ಚದಲ್ಲಿ ನೀಲ ನಕ್ಷೆ
ಮಹಾವೀರ ವೃತ್ತ ನಿರ್ಮಾಣ ಮತ್ತು ಆ ಪ್ರದೇಶದ ಸುಂದರಗೊಳಿಸುವುದಕ್ಕೆ ಜೈನ್‌ ಸೊಸೈಟಿ, ಜೈನ ಸಮುದಾಯ ಮುಂದಾಗಿದ್ದು, ಈಗಾಗಲೇ ವೃತ್ತದ ನೀಲ ನಕ್ಷೆಯನ್ನು ತಯಾರಿಸಲಾಗಿದೆ. ಅದರಂತೆ ಸುಮಾರು 15 ಲಕ್ಷ ರೂ. ವೆಚ್ಚದಲ್ಲಿ ವೃತ್ತ ನಿರ್ಮಾಣ ಮಾಡಿ ಅಲ್ಲಿ ಕಲಶ, ಆ ಪ್ರದೇಶವನ್ನು ಸುಂದರಗೊಳಿಸಲು ಯೋಜನೆ ರೂಪಿಸಲಾಗಿದೆ. ಕಂಕನಾಡಿ ಕಡೆಗೆ ತೆರಳುವ ರಸ್ತೆಯ ನಡುವೆ ವೃತ್ತ ನಿರ್ಮಿಸಿ ಕಲಶ ಇಟ್ಟರೆ ಆಕರ್ಷಕವಾಗಿರಲಿದೆ. ಈ ಬಗ್ಗೆ ಜಿಲ್ಲಾಡಳಿತ, ಸ್ಥಳೀಯಾಡಳಿತವು ಮುಂದಿನ ದಿನಗಳಲ್ಲಿ ವೃತ್ತ ನಿರ್ಮಾಣಕ್ಕೆ ಮಾರ್ಕಿಂಗ್‌ ಮಾಡಬೇಕಿದೆ ಎಂದು ಸಂಬಂಧಪಟ್ಟವರು ತಿಳಿಸಿದ್ದಾರೆ.

Advertisement

ರಾ.ಹೆ.ಅಧಿಕಾರಿಗಳ ಜತೆ ಚರ್ಚೆ
ನಗರಕ್ಕೆ ಹೆಬ್ಟಾಗಿಲಿನಂತಿದ್ದ ಮಹಾವೀರ ವೃತ್ತ ಕಲಶ ನಿರ್ಮಾಣದ ಕುರಿತಂತೆ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳ ಜತೆ ಚರ್ಚೆ ಮಾಡಬೇಕಿದೆ. ಸದ್ಯದಲ್ಲಿಯೇ ಅಧಿಕಾರಿಗಳ ಸಭೆ ಕರೆದು ಈ ಕುರಿತು ಮಾಹಿತಿ ಪಡೆಯುತ್ತೇನೆ. ಬಳಿಕ ಪೂರಕ ಕ್ರಮಗಳ ಬಗ್ಗೆ ಕ್ರಮ ಕೈಗೊಳ್ಳಲಾಗುವುದು.
-ದಿವಾಕರ್‌ ಪಾಂಡೇಶ್ವರ, ಪಾಲಿಕೆ ಮೇಯರ್‌

ಅನುಮತಿ ನೀಡಬೇಕಿದೆ
ಮಹಾವೀರ ವೃತ್ತದಲ್ಲಿ ಕಲಶ ನಿರ್ಮಾಣ ಕುರಿತಂತೆ ಈಗಾಗಲೇ ಸ್ಥಳೀಯಾಡಳಿತ, ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದೇವೆ. ಈ ಬಗ್ಗೆ ಪೂರಕ ಸ್ಪಂದನೆ ದೊರಕುತ್ತಿಲ್ಲ. ಈಗಾಗಲೇ ಕಲಶ ಇರಿಸಿದ ಪ್ರದೇಶದಲ್ಲಿಯೇ ಸ್ಥಳೀಯಾಡಳಿತವು ಜಾಗ ನೀಡಿ ಮಾರ್ಕಿಂಗ್‌ ಮಾಡಿದರೆ, ಕಲಶ ನಿರ್ಮಾಣ ಕಾರ್ಯ ನಡೆಸುತ್ತೇವೆ.
-ಪುಷ್ಪರಾಜ್‌ ಜೈನ್‌, ಜೈನ್‌ ಸೊಸೈಟಿ ಮಂಗಳೂರು ಕಾರ್ಯದರ್ಶಿ

Advertisement

Udayavani is now on Telegram. Click here to join our channel and stay updated with the latest news.

Next