Advertisement

ಮಹಾತ್ಮರ ಸಮಾಜಮುಖಿ ಸಂದೇಶ ಸಾರ್ವಕಾಲಿಕ: ಗುರುಮೂರ್ತಿ ಶ್ರೀ

03:49 PM Apr 30, 2024 | Team Udayavani |

■ ಉದಯವಾಣಿ ಸಮಾಚಾರ
ಹೊಳೆಆಲೂರ: ಸಮಾಜಮುಖೀ ಚಿಂತನೆ ಮಹಾತ್ಮರ ಸಂದೇಶಗಳು ಸದಾ ಸಾರ್ವಕಾಲಿಕ ಎಂದು ಹುಣಸಘಟ್ಟ ಹಾಲಸ್ವಾಮಿ ಮಠದ ಗುರುಮೂರ್ತಿ ಶಿವಾಚಾರ್ಯರು ಹೇಳಿದರು. ಹೊಳೆಆಲೂರ ಸಮೀಪದ ಬೆನಹಾಳ ಗ್ರಾಮದಲ್ಲಿ ರಾಮಲಿಂಗೇಶ್ವರ ಮಠದ ಸದ್ಭಕ್ತ ಮಂಡಳಿ ವತಿಯಿಂದ ಸೋಮವಾರ ಜರುಗಿದ 251 ಮುತ್ತೆçದೆಯರಿಗೆ ಉಡಿ ತುಂಬುವ ಕಾರ್ಯಕ್ರಮ, ಕಲಬುರಗಿ ಶರಣಬಸವೇಶ್ವರರ ಪುರಾಣ ಮಂಗಲೋತ್ಸವ ಹಾಗೂ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸಿ ಅವರು ಮಾತನಾಡಿದರು.

Advertisement

ಹರಗುರುಚರ ಮೂರ್ತಿಗಳ ಸನ್ನಿಧಿಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡುವ ನವ ದಂಪತಿ ಧಾರ್ಮಿಕ ಕಾರ್ಯಕ್ರಮದಲ್ಲಿ ಶರಣರ, ಅನುಭಾವಿಗಳ ಸಂದೇಶ ಆಲಿಸಿದರೆ ಸಾಲದು, ಅವುಗಳನ್ನು ನಮ್ಮ ಜೀವನದಲ್ಲಿ ಪ್ರಾಮಾಣಿಕವಾಗಿ ಅಳವಡಿಸಿಕೊಂಡು ಸಮಾಜಮುಖೀ, ಮಾತೃ ಭೂಮಿ ಪೂಜಿಸುವ ಉತ್ತಮ, ಸಂಸ್ಕಾರವಂತ ಮಕ್ಕಳನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡಬೇಕೆಂದರು.

ಅಧ್ಯಕ್ಷತೆ ವಹಿಸಿದ ಗಡಿಗೌಡಗಾಂವ್‌ ಹಾವಗಿ ಲಿಂಗೇಶ್ವರ ಮಠದ ಡಾ| ಶಾಂತವೀರ ಸ್ವಾಮೀಜಿ ಮಾತನಾಡಿ, ಧರ್ಮದ ದಿಕ್ಸೂಚಿ ಇಲ್ಲದೇ ಹೋದರೆ ಬದುಕಿಗೆ ಅರ್ಥವೇ ಇಲ್ಲ. ವ್ಯಕ್ತಿ ತನಗಾಗಿ ಬಾಳುವುದಕ್ಕಿಂತ ಜನ್ಮ ಕೊಟ್ಟ ತಂದೆ ತಾಯಿ, ತನ್ನ ಕುಟುಂಬ, ಗ್ರಾಮ ಹಾಗೂ ನಾಡಿಗಾಗಿ ಅರ್ಪಣಾ ಮನೋಭಾವದಿಂದ ಬದುಕುತ್ತೇನೆ ಎಂಬ ಪರಂಪರೆ ಬೆಳೆಸಿಕೊಳ್ಳಬೇಕೆಂದರು.

ಕಾರ್ಯಕ್ರಮದ ಅಂಗವಾಗಿ ಸಕಲ ವಾಧ್ಯಮೇಳ ಹಾಗೂ ಸುಮಂಗಲಿಯರ ಕುಂಭದೊಂದಿಗೆ ಶರಣಬಸವೇಶ್ವರರ ಭಾವಚಿತ್ರದ ಮೆರವಣಿಗೆ ಮಾಡಲಾಯಿತು. ರಾಮಲಿಂಗೇಶ್ವರ ಮಠದ ಭೋಜನಾಲಯಕ್ಕೆ ಭೂದಾನ ಮಾಡಿದ ಹೂವಪ್ಪ ಜಂಗಣ್ಣವರ, ಸಮಾಜದ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಗಣ್ಯರನ್ನು, ನಿವೃತ್ತ ಸೈನಿಕರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ನವಲಗುಂದ ಗವಿಮಠದ ಬಸವಲಿಂಗ ಸ್ವಾಮೀಜಿ, ಗುಳೇದಗುಡ್ಡದ ಒಪ್ಪತ್ತೇಶ್ವರ ಸ್ವಾಮೀಜಿ, ಬದಾಮಿ ಶಿವಪೂಜಾ ಶಿವಾಚಾರ್ಯರು ಮಾತನಾಡಿದರು. ರುದ್ರಗೌಡ್ರ ಹೊಸಮನಿ, ಬಸನಗೌಡ ಲಿಂಗನಗೌಡ್ರ, ರಾಮನಗೌಡ ಪಾಟೀಲ, ಆರ್‌.ಕೆ. ಪಾಟೀಲ, ಮುತ್ತಣ್ಣ ಜಂಗಣ್ಣವರ, ಶಶಿಧರಗೌಡ ಪಾಟೀಲ, ಎನ್‌.ಟಿ. ಪಾಟೀಲ, ಮುತ್ತಪ್ಪ ಜ್ಯೋತೆಪ್ಪನ್ನವರ,
ರುದ್ರಯ್ಯ ಹಳ್ಳೂರ, ಬಸವಂತಪ್ಪ ಮಡಿವಾಳರ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next