ಒಟ್ಟಾವಾ: ಕೆನಡಾದಲ್ಲಿ ರಾಷ್ಟ್ರಪಿತ ಮಹಾತ್ಮಾ ಗಾಂಧಿಯವರ ಪ್ರತಿಮೆಯನ್ನು ಕಿಡಿಗೇಡಿಗಳು ಧ್ವಂಸಗೊಳಿಸಿದ್ದಾರೆ.
ಒಂಟಾರಿಯೋ ನಗರದ ರಿಚ್ಮಂಡ್ ಹಿಲ್ಸ್ ಪ್ರದೇಶದ ವಿಷ್ಣು ದೇಗುಲದ ಬಳಿ ಪ್ರತಿಮೆಯನ್ನು ಸ್ಥಾಪಿಸಲಾಗಿತ್ತು. ಈ ಘಟನೆಯನ್ನು ಕೇಂದ್ರ ಸರಕಾರ ಉಗ್ರವಾಗಿ ಖಂಡಿಸಿದೆ. ಇದೊಂದು ರೀತಿಯ ದ್ವೇಷ ಸಾಧನೆಯ ಮಾರ್ಗವಾಗಿದೆ ಮತ್ತು ಕೆನಡಾದಲ್ಲಿರುವ ಭಾರತೀಯರಲ್ಲಿ ಭೀತಿ ಹುಟ್ಟಿಸಲು ಮಾಡಿರುವ ಘಟನೆ ಎಂದು ಒಟ್ಟಾವಾದಲ್ಲಿರುವ ಭಾರತೀಯ ಹೈ ಕಮಿಷನ್ ಆಕ್ಷೇಪಿಸಿದೆ.
“ಇಂಥ ಕೃತ್ಯವೆಸಗಿ ಭಾರತೀಯರನ್ನು ಭಯಭೀತಗೊಳಿಸಲು ನಡೆಸಲಾಗಿರುವ ಪ್ರಯತ್ನ ಬೇಸರ ತಂದಿದೆ. ಜತೆಗೆ ಆತಂಕಕ್ಕೂ ಕಾರಣವಾಗಿದೆ. ಈ ಬಗ್ಗೆ ಹೆಚ್ಚಿನ ತನಿಖೆ ಕೈಗೊಂಡು, ಸೂಕ್ತ ಕ್ರಮ ತೆಗೆದುಕೊಳ್ಳಲು ನಾವು ಕೆನಡಾ ಸರಕಾರವನ್ನು ಕೇಳಿಕೊಂಡಿದ್ದೇವೆ’ ಎಂದು ಹೈ ಕಮಿಷನ್ ಟ್ವಿಟರ್‌ನಲ್ಲಿ ತಿಳಿಸಿದೆ.
ದ್ವೇಷಪೂರಿತ ಅಪರಾಧ ಎಸಗುವವರ ವಿರುದ್ಧ ಕಠಿನ ಕ್ರಮ ಕೈಗೊಳ್ಳಲಿದ್ದೇವೆ ಎಂದು ಕೆನಡಾ ಪೊಲೀಸರು ತಿಳಿಸಿದ್ದಾರೆ.