Advertisement

ಕೊನೆಗೂ ಬಿಡುಗಡೆಯಾದ ಉದ್ಯೋಗ ಖಾತರಿ ಅನುದಾನ

12:31 AM Mar 03, 2020 | Sriram |

ಕುಂದಾಪುರ: ಮಹಾತ್ಮಾ ಗಾಂಧಿ ಉದ್ಯೋಗ ಖಾತರಿ ಯೋಜನೆಯಲ್ಲಿ ಸಾಮಗ್ರಿ ವೆಚ್ಚಕ್ಕೆಂದು ಎರಡು ವರ್ಷಗಳಿಂದ ಬಾಕಿ ಇದ್ದ ಅನುದಾನವನ್ನು ನೀಡುವುದಾಗಿ ಹೇಳಿದ ರಾಜ್ಯ ಸರಕಾರವು ಪರಿಷ್ಕೃತ ಅನುದಾನ ಪಟ್ಟಿಯಲ್ಲಿ 10 ಜಿಲ್ಲೆಗಳನ್ನು ಹೊರಗಿಟ್ಟು, ಅನಂತರ ಕೊನೆಯ ಕ್ಷಣದಲ್ಲಿ 163 ಕೋ.ರೂ.ಗಳನ್ನು ಬಿಡುಗಡೆ ಮಾಡಿದೆ. ಇದರಿಂದ ಸಾಮಗ್ರಿ ಖರೀದಿ ಬಾಬ್ತು ಶೇ.25ರಷ್ಟು ಮಾತ್ರ ಪಾವತಿಯಾದಂತಾಗಿದ್ದು, ಉದ್ಯೋಗ ಖಾತರಿ ಕಾಮಗಾರಿಗಾಗಿ ಸಿಮೆಂಟ್‌, ಕಬ್ಬಿಣ ಇತ್ಯಾದಿ ಖರೀದಿಸಿ ಅಂಗಡಿಗಳಿಗೆ ಹಣ ನೀಡಲಾಗದೆ ಪಂಚಾಯತ್‌ನವರು ಮುಖ ಮುಚ್ಚಿಕೊಳ್ಳುವಂತಾಗಿದೆ. ಕೂಲಿ ಬಾಬ್ತು ಅನುದಾನ ಇನ್ನೂ ಬಂದಿಲ್ಲ. ರಾಜ್ಯ ಮತ್ತು ಕೇಂದ್ರ ಸರಕಾರಗಳು ಒಟ್ಟು 5,294 ಕೋ.ರೂ.ಗಳಲ್ಲಿ 3,581 ಕೋ.ರೂ. ನೀಡಬೇಕಿದೆ. ಈ ನಡುವೆ ಉದ್ಯೋಗ ಖಾತರಿ ಕೂಲಿಗೆ ಕಳೆದ ಅನೇಕ ಸಮಯದಿಂದ ಬೇಡಿಕೆಯಿದೆ.

Advertisement

ಮೊದಲ ಕಂತು
ರಾಜ್ಯದಲ್ಲಿ 1.47 ಕೋಟಿ ನೋಂದಾಯಿತ ನರೇಗಾ ಕಾರ್ಮಿಕರಿದ್ದು, 62 ಲಕ್ಷ ಮಂದಿಗೆ ಜಾಬ್‌ಕಾರ್ಡ್‌ ನೀಡಲಾಗಿದೆ. ಇದರಲ್ಲಿ 72 ಲಕ್ಷ ಜನ ಕೆಲಸ ಮಾಡುತ್ತಿದ್ದು, 35 ಲಕ್ಷ ಕಾರ್ಡ್‌ಗಳಷ್ಟೇ ಚಾಲ್ತಿಯಲ್ಲಿವೆ. 2019-20ನೇ ಸಾಲಿಗೆ 12 ಕೋಟಿ ಮಾನವ ದಿನಗಳ ಕೆಲಸಕ್ಕೆ ಗುರಿ ನಿಗದಿ ಮಾಡಲಾಗಿದೆ. ಇದರಲ್ಲಿ 10 ಕೋಟಿ ದಿನಗಳ ಕೆಲಸ ಆಗಿದ್ದು, 32 ಲಕ್ಷ ರೂ.ಗಳ ಅಭಿವೃದ್ಧಿ ಕಾಮಗಾರಿಗಳಾಗಿವೆ. ರಾಜ್ಯದ 18 ಪಂಚಾಯತ್‌ಗಳಲ್ಲಿ ನಯಾಪೈಸೆಯ ಕೆಲಸ ಆಗಿಲ್ಲ. ಪಂಚಾಯತ್‌ಗಳಿಗೆ ಖಾತರಿ ಬಾಬ್ತು ರಾಜ್ಯ ಸರಕಾರ ಮೊದಲ ಕಂತಿನಲ್ಲಿ 249 ಕೋ.ರೂ.ಗಳನ್ನು ಪಾವತಿಸಿತ್ತು.

ಎರಡನೇ ಕಂತು
ಫೆ. 26ರಿಂದ 29ರ ವರೆಗೆ ಎಲ್ಲ ಜಿಲ್ಲೆಗಳಿಗೆ ಒಟ್ಟು 163 ಕೋ.ರೂ.ಗಳನ್ನು ಸಾಮಗ್ರಿ ಖರೀದಿ ಬಿಲ್‌ ಬಾಬ್ತು ನೀಡಲಾಗಿದೆ. ಫೆ. 20ರಂದು 2018-19 ಮತ್ತು 2019-20ನೇ ಸಾಲಿನ ಪಾವತಿಗೆ ಬಾಕಿ ಉಳಿದ ಸಾಮಗ್ರಿ ವೆಚ್ಚದ ಮೊತ್ತವನ್ನು ಬಿಡುಗಡೆ ಮಾಡುವುದಾಗಿ ಹೇಳಿ 29 ಜಿಲ್ಲೆಗಳಿಗೆ ವೇಳಾಪಟ್ಟಿ ಪ್ರಕಟಿಸಲಾಗಿತ್ತು. ಫೆ.26, 27ರಂದು 8 ಜಿಲ್ಲೆಗಳಿಗೆ, ಫೆ.28, 29ರಂದು 7 ಜಿಲ್ಲೆಗಳಿಗೆ ಅನುದಾನ ಬಿಡುಗಡೆಗೆ ಸಮಯ ನಿಗದಿ ಮಾಡಲಾಗಿತ್ತು. ಆದರೆ ಫೆ.26ರಂದು ಪರಿಷ್ಕೃತ ಆದೇಶ ನೀಡಿ ಕೇವಲ 20 ಜಿಲ್ಲೆಗಳಿಗಷ್ಟೇ ಅನುದಾನ ಬಿಡುಗಡೆ ನಿಗದಿಯ ಪಟ್ಟಿ ಕಳುಹಿಸಲಾಗಿತ್ತು. ಇದರಲ್ಲಿ 10 ಜಿಲ್ಲೆಗಳ ಉಲ್ಲೇಖವನ್ನೇ ಕೈಬಿಡಲಾಗಿತ್ತು. ಹಾಗಿದ್ದರೂ ಜಿಲ್ಲಾ ಪಂಚಾಯತ್‌ ಸಿಇಒಗಳ ಬೇಡಿಕೆ ಮೇರೆಗೆ ಎಲ್ಲ ಜಿಲ್ಲೆಗಳಿಗೂ ಅನುದಾನ ನೀಡಲಾಗಿದೆ.

ಲಾಟರಿಯಂತೆ ಅನುದಾನ!
ಅನುದಾನ ಬಿಡುಗಡೆಗೆ ಸಮಯ ನಿಗದಿ ಮಾಡಲಾಗುತ್ತದೆ. ಉಡುಪಿ ಜಿಲ್ಲೆಗೆ ಮೊದಲ ಪಟ್ಟಿ ಪ್ರಕಾರ ಫೆ. 29ರಂದು ಅಪರಾಹ್ನ 1.30ರಿಂದ 2.30, ದ.ಕ. ಜಿಲ್ಲೆಗೆ 12ರಿಂದ 1 ಎಂದು ನಿಗದಿಯಾಗುತ್ತದೆ.

ಈ ಅನುದಾನ ನೇರ ಪಂಚಾಯತ್‌ಗಳಿಗೆ ಬಿಡುಗಡೆಯಾಗದೆ ಮೊದಲು ಜಿ.ಪಂ.ಗೆ, ಅನಂತರ ತಾ.ಪಂ.ಗೆ ಬಿಡುಗಡೆಯಾಗುತ್ತದೆ. ಅಲ್ಲಿಂದ ಪಂಚಾಯತ್‌ಗಳು ಯುದ್ಧಕ್ಕೆ ಸಿದ್ಧರಾದಂತೆ ಬೆರಳಚ್ಚು ನೀಡಲು ಕಾಯಬೇಕು. ಈ ವೇಳೆ ಮೊದಲು ಬೆರಳಚ್ಚು ನೀಡುವ ಪಂಚಾಯತ್‌ಗೆ ಅನುದಾನ ಸಿಗುತ್ತದೆ. ದ.ಕ. ಜಿಲ್ಲೆಗೆ ನಿರೀಕ್ಷಿತ ಅನುದಾನದ ಶೇ.25ರಷ್ಟು ಮಾತ್ರ ಬಂದಿದ್ದು, ಸಿಕ್ಕವರಿಗೆ ಸೀರುಂಡೆ ಎಂದು ಮೊದಲು ಯಾರು ಬೆರಳಚ್ಚು ನೀಡುತ್ತಾರೋ ಅಂಥ ಪಂಚಾಯತ್‌ನವರಿಗೆ ಮಾತ್ರ ಲಾಟರಿ ಹೊಡೆಯುತ್ತದೆ. ನೆಟ್‌ವರ್ಕ್‌, ಸರ್ವರ್‌ ಸಮಸ್ಯೆ ಇತ್ಯಾದಿ ಇದ್ದರೆ ಇತರರು ಮುಂದಿನ ಅನುದಾನ ಬಿಡುಗಡೆಯ ವರೆಗೂ ಕಾಯಬೇಕು. ಆಗಲೂ ಅದೇ ಕಥೆ. ಹಾಗಾಗಿ ಪಂಚಾಯತ್‌ವಾರು ಅನುದಾನ ಬಿಡುಗಡೆ ಮಾಡಬೇಕೆಂಬ ಬೇಡಿಕೆ ಇದೆ. ಈ ಬಾರಿಯ ಅನುದಾನದಲ್ಲೂ ಇಂತಹ ವ್ಯಥೆ ಉಂಟಾಗಿದೆ.

Advertisement

ಈ ಅನುದಾನ ನೇರ ಪಂಚಾಯತ್‌ಗಳಿಗೆ ಬಿಡುಗಡೆಯಾಗದೆ ಮೊದಲು ಜಿ.ಪಂ.ಗೆ, ಅನಂತರ ತಾ.ಪಂ.ಗೆ ಬಿಡುಗಡೆಯಾಗುತ್ತದೆ. ಅಲ್ಲಿಂದ ಪಂಚಾಯತ್‌ಗಳು ಯುದ್ಧಕ್ಕೆ ಸಿದ್ಧರಾದಂತೆ ಬೆರಳಚ್ಚು ನೀಡಲು ಕಾಯಬೇಕು.ಯಾರು ಬೆರಳಚ್ಚು ನೀಡುತ್ತಾರೋ ಅಂಥ ಪಂಚಾಯತ್‌ನವರಿಗೆ ಮಾತ್ರ ಲಾಟರಿ ಹೊಡೆಯುತ್ತದೆ. ನೆಟ್‌ವರ್ಕ್‌, ಸರ್ವರ್‌ ಸಮಸ್ಯೆ ಇತ್ಯಾದಿ ಇದ್ದರೆ ಇತರರು ಮುಂದಿನ ಅನುದಾನ ಬಿಡುಗಡೆಯ ವರೆಗೂ ಕಾಯಬೇಕು.

ಅನುದಾನ ಬಂದಿದೆ
ದ.ಕ. ಜಿಲ್ಲೆಗೆ ಸಾಮಗ್ರಿ ಬಾಬ್ತು 5.6 ಕೋ.ರೂ. ಅನುದಾನ ಬಂದಿದೆ. ಸರಕಾರಕ್ಕೆ ಈ ಕುರಿತು ವಿಶೇಷ ಬೇಡಿಕೆ ಸಲ್ಲಿಸಲಾಗಿತ್ತು ಎಂದು ದ.ಕ. ಜಿ.ಪಂ. ಸಿಇಒ ಡಾ| ಸೆಲ್ವಮಣಿ “ಉದಯವಾಣಿ’ಗೆ ತಿಳಿಸಿದ್ದಾರೆ. ಉಡುಪಿಗೂ ಉದ್ಯೋಗ ಖಾತರಿ ಸಾಮಗ್ರಿ ಖರೀದಿ ಅನುದಾನ ಬಂದಿದೆ.
ಪ್ರೀತಿ ಗೆಹ್ಲೋತ್‌, ಜಿ.ಪಂ. ಸಿಇಒ 

ಎಲ್ಲರಿಗೂ ನೀಡಲಾಗಿದೆ
ರಾಜ್ಯದ ಎಲ್ಲ ಜಿಲ್ಲೆಗಳಿಗೆ ಒಟ್ಟು 163 ಕೋ.ರೂ. ನೀಡಲಾಗಿದೆ. ಗೊಂದಲ ಆಗುವುದು ಬೇಡ ಎಂದು ಜಿಲ್ಲಾವಾರು ಸಮಯ ನಿಗದಿ ಮಾಡಲಾಗಿತ್ತು. ಅನಂತರ ಸರಿಪಡಿಸಿ ಎಲ್ಲರಿಗೂ ನೀಡಲಾಗಿದೆ.
-ಶ್ರೀನಿವಾಸ್‌ , ರಾಜ್ಯ ಕಾರ್ಯಾಚರಣೆ ಅಧಿಕಾರಿ
ಮಹಾತ್ಮಾ ಗಾಂಧಿ ಉದ್ಯೋಗ ಖಾತರಿ ಯೋಜನೆ

-ಲಕ್ಷ್ಮೀ ಮಚ್ಚಿನ

Advertisement

Udayavani is now on Telegram. Click here to join our channel and stay updated with the latest news.

Next