Advertisement

ಹಳ್ಳಿ  ಸೇರಿದ ಜನರ ಕೈ ಹಿಡಿದ ನರೇಗಾ

12:01 PM May 12, 2021 | Team Udayavani |

ವರದಿ: ಮಹಾದೇವ ಪೂಜೇರಿ
ಚಿಕ್ಕೋಡಿ: ಕೊರೊನಾದಂತಹ ಮಾರಕ ರೋಗ ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ನಗರ-ಪಟ್ಟಣದ ಜನರು ಹಳ್ಳಿಯತ್ತ ವಾಲುತ್ತಿದ್ದಾರೆ. ಹೀಗಾಗಿ ಕೈಯಲ್ಲಿ ಕೆಲಸವಿಲ್ಲದೇ ಹಳ್ಳಿಗಳಿಗೆ ಬರುವ ನಿರುದ್ಯೋಗಿ ಜನರಿಗೆ ನರೇಗಾ ಯೋಜನೆ ವರದಾನವಾಗಿ ಪರಿಣಮಿಸಿದೆ.

Advertisement

ಮಹಾತ್ಮಾ ಗಾಂಧಿ ಉದ್ಯೋಗ ಖಾತರಿ ಯೋಜನೆಯ ಮೂಲಕ ಚಿಕ್ಕೋಡಿ ತಾಲೂಕಿನ 36 ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಕೇವಲ ಒಂದು ತಿಂಗಳ ಒಳಗಾಗಿ 91 ಸಾವಿರ ಮಾನವ ದಿನಗಳು ಸೃಜಿಸಲಾಗಿದ್ದು, ಸುಮಾರು 6669 ಜನರು ನರೇಗಾ ಕೆಲಸದಲ್ಲಿ ತೊಡಗಿಕೊಂಡು ಕುಟುಂಬ ನಿರ್ವಹಣೆಗೆ ಮುಂದಾಗಿದ್ದಾರೆ. ಈ ತಿಂಗಳ ಅವ ಧಿಯಲ್ಲಿ ಸುಮಾರು 480 ಹೊಸ ಜಾಬ್‌ ಕಾರ್ಡ್‌ ಸೃಷ್ಟಿಯಾಗಿವೆ. ಕೊರೊನಾ ಸೋಂಕು ಅವ್ಯಾಹತವಾಗಿ ಹಬ್ಬುತ್ತಿರುವ ಪರಿಣಾಮ ನಗರ-ಪಟ್ಟಣಗಳಲ್ಲಿ ವಾಸಿಸುವ ಜನರು ಈಗ ಹಳ್ಳಿಗಳಲ್ಲಿ ಠಿಕಾಣಿ ಹೂಡಿದ್ದಾರೆ. ಕೆಲಸವಿಲ್ಲದೇ ಖಾಲಿ ಕೈಯಲ್ಲಿದ್ದ ಜನರಿಗೆ ನರೇಗಾ ಯೋಜನೆ ಆಸರೆಯಾಗಿದೆ.

ಯುವಕರು ಕೆಲಸವಿಲ್ಲದೇ ಖಾಲಿ ಇರಬಾರದೆಂಬ ಉದ್ದೇಶದಿಂದ ಸರ್ಕಾರ ನರೇಗಾ ಯೋಜನೆ ಮೂಲಕ ಅವರಿಗೆ ಕೆಲಸ ನೀಡಲು ಪ್ರೇರಣೆ ನೀಡುತ್ತಿದೆ. ಮೊದಲಿನಿಂದಲೂ ಚಿಕ್ಕೋಡಿ ತಾಲೂಕು ನರೇಗಾ ಯೋಜನೆ ಬಳಕೆ ಮಾಡಿಕೊಳ್ಳುವಲ್ಲಿ ಹಿಂದೆ ಬಿದ್ದಿಲ್ಲ, ಅದರಂತೆ ಈ ವರ್ಷವು ಕೂಡ ತಾಲೂಕಿನಲ್ಲಿ ನರೇಗಾ ಕೆಲಸಗಳು ಭರದಿಂದ ಸಾಗಿವೆ. ಕಳೆದ ಒಂದು ವರ್ಷದಿಂದ ಇಲ್ಲಿಯವರೆಗೆ ಸುಮಾರು 23 ಸಾವಿರ ಕುಟುಂಬಗಳು ನರೇಗಾ ಯೋಜನೆ ನಂಬಿಕೊಂಡು ಕೆಲಸ ಗಿಟ್ಟಿಸಿಕೊಂಡಿದ್ದಾರೆ.

ಚಿಕ್ಕೋಡಿ ತಾಲೂಕಿನ ಕೇರೂರ, ಉಮರಾಣಿ, ಜೋಡಕುರಳಿ, ಬಂಬಲವಾಡ, ವಡ್ರಾಳ, ನವಲಿಹಾಳ, ನಾಗರಮುನ್ನೋಳ್ಳಿ, ಹತ್ತರವಾಟ, ಮುಗಳಿ, ಚಿಂಚಣಿ, ಶಿರಗಾಂವ ಮತ್ತು ಜಾಗನೂರ ಸೇರಿದಂತೆ ಮುಂತಾದ ಗ್ರಾಮಗಳಲ್ಲಿ ರೈತ ಕ್ರಿಯಾ ಯೋಜನೆ ಹಾಗೂ ದುಡಿಯೋಣ ಬಾರ ಎಂಬ ವಿನೂತನ ಕಾರ್ಯಕ್ರಮದಡಿ ಜನರು ಕೆಲಸ ಮಾಡುತ್ತಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಅಂತರ್ಜಲಮಟ್ಟ ಹೆಚ್ಚಿಸುವ ಕೆರೆ ಹೂಳು ತೆಗೆಯುವುದು, ಬದು ನಿರ್ಮಾಣ, ಕೆನಾಲ್‌ ಹೂಳೆತ್ತುವುದು, ಘನತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣ, ಗಿಡ ನೆಡಲು ಗುಂಡಿ ತೋಡುವಿಕೆ, ಹಳ್ಳ ಸ್ವತ್ಛತೆ, ತೋಟಪಟ್ಟಿ ರಸ್ತೆ ನಿರ್ಮಾಣ, ಕೃಷಿ ಹೊಂಡ ಸೇರಿದಂತೆ ಮುಂತಾದ ಕೆಲಸಗಳನ್ನು ನರೇಗಾದ ಮೂಲಕ ಕೈಗೆತ್ತಿಕೊಳ್ಳಲಾಗುತ್ತಿದ್ದು, ಜನರು ಮೈಮುರಿದು ಕೆಲಸ ಮಾಡುತ್ತಿದ್ದಾರೆ.

7.95 ಲಕ್ಷ ಮಾನವ ದಿನಗಳ ಟಾರ್ಗೇಟ್‌: ತಾಲೂಕಿನ 36 ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಒಂದು ವರ್ಷಕ್ಕೆ 7.95 ಲಕ್ಷ ಮಾನವ ದಿನಗಳನ್ನು ಸೃಜನೆ ಮಾಡುವಂತೆ ಸರ್ಕಾರ ಟಾಗೇìಟ್‌ ನೀಡಿದೆ. ಕೇವಲ ಒಂದು ತಿಂಗಳ ಒಳಗಾಗಿ 91 ಸಾವಿರ ಮಾನವ ದಿನಗಳನ್ನು ಸೃಜನೆ ಮಾಡಿದ್ದು, ತಾಲೂಕಿನಲ್ಲಿ ಒಟ್ಟು 51 ಸಾವಿರ ಜಾಬ್‌ ಕಾರ್ಡ ಇದ್ದು, ಇದರಲ್ಲಿ 23 ಸಾವಿರ ಜನರು ಸಕ್ರೀಯರಾಗಿ ಕೆಲಸ ಮಾಡುತ್ತಿದ್ದಾರೆ. ಇಲ್ಲಿಯವರಿಗೆ ಸುಮಾರು 3.18 ಕೋಟಿ ರೂ. ಅನುದಾನ ಪಾವತಿಯಾಗಿದೆ.

Advertisement

ಕೊರೊನಾ ನಿಯಮ ಪಾಲನೆ: ಗ್ರಾಮೀಣ ಪ್ರದೇಶದಲ್ಲಿ ನಡೆಯುವ ಉದ್ಯೋಗ ಖಾತ್ರಿ ಕೆಲಸ ಹೊರತು ಪಡಿಸಿ ಉಳಿದೆಲ್ಲ ಕೆಲಸ ಕಾರ್ಯಗಳು ನಿಂತುಹೋಗಿದೆ. ಹೀಗಾಗಿ ನರೇಗಾದಡಿ ಕೆಲಸ ಮಾಡುವ ಕೂಲಿ ಕಾರ್ಮಿಕರಿಗೆ ಯಾವುದೇ ತೊಂದರೆಯಾಗದಂತೆ ಸಾಮಾಜಿಕ ಅಂತರ, ಮೇಲಿಂದ ಮೇಲೆ ಸ್ಯಾನಿಟೈಸ್‌ ಮಾಡುವ ಮೂಲಕ ಕೊರೊನಾ ನಿಯಮ ಪಾಲನೆ ಮಾಡಲಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next