ಉಡುಪಿ: ನಗರದ ಬೀಡಿನಗುಡ್ಡೆಯಲ್ಲಿ ಲಕ್ಷಾಂತರ ರೂ. ವೆಚ್ಚದಲ್ಲಿ ನಿರ್ಮಿಸಲಾದ ಮಹಾತ್ಮಾ ಗಾಂಧಿ ಬಯಲು ರಂಗಮಂದಿರ ಇದೀಗ ಪ್ರಾಣಿಗಳ ಆವಾಸ ಸ್ಥಳವಾಗಿ ಪರಿವರ್ತನೆಗೊಂಡಿದೆ. ಸಾಂಸ್ಕೃತಿಕ ಚಟುವಟಿಕೆಗಳನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ಬೀಡಿನಗುಡ್ಡೆಯಲ್ಲಿ ಇದನ್ನು 2016ರ ಜ.26ರಂದು ಅಂದಿನ ಉಸ್ತುವಾರಿ ಸಚಿವರಾಗಿದ್ದ ವಿನಯಕುಮಾರ್ ಸೊರಕೆ ಉದ್ಘಾಟಿಸಿ ದ್ದರು. ಆ ಬಳಿಕ ಸ್ವಾತಂತ್ರ್ಯೋತ್ಸವ, ಗಣರಾಜ್ಯೋತ್ಸವ ಸೇರಿದಂತೆ ಇತರ ಕೆಲವು ಸರಕಾರಿ ಕಾರ್ಯಕ್ರಮಗಳು ಇದೇ ವೇದಿಕೆಯಲ್ಲಿ ನಡೆದಿತ್ತು. ವೇದಿಕೆಯ ಬಾಡಿಗೆ ಶುಲ್ಕವನ್ನು ಅಂದಿನ ಡಿಸಿ ಡಾ| ವಿಶಾಲ್ ಅವರಿಗೆ ಮನವಿ ನೀಡಿದ ಅನಂತರ ಇದರ ಶುಲ್ಕವನ್ನು ಪರಿಷ್ಕೃತಗೊಳಿಸಿದ್ದರು.
ಒಂದೂವರೆ ವರ್ಷದಲ್ಲಿ ಕುಸಿತ :
ಇದು ನಿರ್ಮಾಣಗೊಂಡ ಒಂದೂವರೆ ವರ್ಷದೊಳಗೆ ಇದರ ಮುಂಭಾಗದ ಅವರಣ ಗೋಡೆ ಕುಸಿದಿದ್ದು ಇದುವರೆಗೂ ದುರಸ್ತಿ ಕಂಡಿಲ್ಲ. ಕೋವಿಡ್- 19ರ ಸಂದರ್ಭ ಇಲ್ಲಿ ಸಂತೆ ನಡೆದಾಗ ಲಾರಿಯೊಂದು ಢಿಕ್ಕಿ ಹೊಡೆದ ಪರಿಣಾಮ ಇದರ ಆವರಣ ಗೋಡೆ ಮತ್ತೆ ಕುಸಿದಿತ್ತು. ಪ್ರಸ್ತುತ ಅಡಿಕೆಯ ಸಲಿಕೆ, ಬಿದಿರು ತುಂಡುಗಳನ್ನಿಟ್ಟು ತಡೆಬೇಲಿ ಹಾಕಲಾಗಿದೆ.
98 ಲ.ರೂ. ವೆಚ್ಚದಲ್ಲಿ ನಿರ್ಮಾಣ :
ನಗರಸಭೆಯ ಸುಮಾರು 3.5 ಎಕ್ರೆ ಪ್ರದೇಶದಲ್ಲಿ ವಿಶೇಷ ಅನುದಾನದಿಂದ 98 ಲ.ರೂ. ವೆಚ್ಚದಲ್ಲಿ ಅವರಣ ಗೋಡೆ ನಿರ್ಮಿಸಿ ವಿವಿಧ ಕಾರ್ಯಕ್ರಮಗಳ ಬಳಕೆಗೆ ಇದನ್ನು ನೀಡಲಾಗಿತ್ತು. ಕೋವಿಡ್-19ರ ಬಳಿಕ ಇಲ್ಲಿ ಕಾರ್ಯಕ್ರಮನಡೆದಿರುವುದು ಕಡಿಮೆ. ಈ ರಂಗಮಂದಿರ ನಗರಸಭೆ ವ್ಯಾಪ್ತಿಯ ಲ್ಲಿದೆ. ಜಿಲ್ಲಾಧಿಕಾರಿ ಇದರ ಉಸ್ತುವಾರಿ ಸಮಿತಿಯ ಅಧ್ಯಕ್ಷರಾಗಿದ್ದಾರೆ.
ಯಾವುದೇ ಕ್ರಮವಿಲ್ಲ :
ಇಷ್ಟು ವೆಚ್ಚದ ಕಾಮಗಾರಿ ಒಂದೇ ವರ್ಷದಲ್ಲಿ ಕುಸಿದಿದ್ದರೂ ಗುತ್ತಿಗೆ ದಾರರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ಮಳೆಯಿಂದ ಹಾಳಾಗಿವೆಎನ್ನುವ ಸಬೂಬು ನೀಡಲಾಗಿದೆ. ಇದೀಗ ಅವರಣ ಗೋಡೆ ದುರಸ್ತಿಗೆ 56,000 ರೂ. ಮೊತ್ತದ ಅಂದಾಜುಪಟ್ಟಿ ತಯಾರಿಸಲಾಗಿದ್ದು ಇದರ ಕಾಮಗಾರಿಗೆ ಆಡಳಿತ ಮಂಜೂರಾತಿ ಕೋರಿ ಡಿ. 22ರಂದು ನಡೆದ ಸಾಮಾನ್ಯ ಸಭೆಯಲ್ಲಿ ಮಂಡಿಸಿದ್ದು, ಇದಕ್ಕೆ ನಗರಸಭೆಯ ಜನಪ್ರತಿನಿಧಿಗಳು ಒಪ್ಪಿಗೆ ಸೂಚಿಸಿದ್ದಾರೆ.
ಕೋವಿಡ್ ಸಂದರ್ಭದಲ್ಲಿ ಬೀಡಿನ ಗುಡ್ಡೆಯಲ್ಲಿ ಸಂತೆ ನಡೆದಿತ್ತು. ಈ ಸಂದರ್ಭ ಲಾರಿಯೊಂದು ನಿಯಂತ್ರಣ ತಪ್ಪಿ ಆವರಣಗೋಡೆಗೆ ಗುದ್ದಿತ್ತು. ಅದರ ದುರಸ್ತಿಗೆ 56,000 ರೂ. ಮೊತ್ತದ ಕಾಮಗಾರಿ ನಡೆಸಲಾಗುತ್ತದೆ.
-ಸುಮಿತ್ರಾ ನಾಯಕ್, ಅಧ್ಯಕ್ಷರು, ನಗರಸಭೆ, ಉಡುಪಿ.