Advertisement

ಮಹಾಶಿವರಾತ್ರಿ …ಶಿವನೆಂದರ ಸರಳ ಬದುಕಿನ ದೇವರೂಪ

12:18 PM Mar 17, 2019 | Sharanya Alva |

ಸೃಷ್ಟಿ, ಸ್ಥಿತಿ ಮತ್ತು ಲಯ ಈ ಮೂರು ಕಾರ್ಯಗಳ ದೇವತಾಸ್ವರೂಪವೇ ಬ್ರಹ್ಮ, ವಿಷ್ಣು ಮತ್ತು ಶಿವ. ಆದಿಮಾಯೆಯ ಪುತ್ರರೆಂಬುದು ನಮ್ಮ ನಂಬಿಕೆ. ಈ ತ್ರಿಮೂರ್ತಿಗಳಿಂದಲೇ ಎಲ್ಲವೂ. ಲಯಕರ್ತ ಶಿವನಿಗೆ ವಿಶೇಷವಾದ ರಾತ್ರಿ ಎಂದರೆ ಶಿವರಾತ್ರಿ. ಮಾಘ ಮಾಸದ ಶುಕ್ಲ ಚತುರ್ದಶಿಯ ದಿನ ಉಪವಾಸ, ಜಾಗರಣೆಯ ಮೂಲಕ ಶಿವನನ್ನು ಆರಾಧಿಸುವ ಶುಭದಿನವೇ ಮಹಾಶಿವರಾತ್ರಿ.

Advertisement

ಇದರ ಹಿಂದೊಂದು ಕತೆಯನ್ನು ಹೇಳಲಾಗುತ್ತದೆ. ದೇವಲೋಕದಲ್ಲಿ ಬ್ರಹ್ಮ ಶ್ರೇಷ್ಠನೋ ಅಥವಾ ವಿಷ್ಣುವೋ ಎಂಬ ವಾಗ್ವಾದ ನಡೆದಾಗ, ಇದಕ್ಕೆ ಪರಿಹಾರವನ್ನು ಶಿವನಲ್ಲಿ ಕೇಳಲಾಗುತ್ತದೆ. ಆಗ ಶಿವನು ಅಗ್ನಿಕಂಬದ ರೂಪ ತಾಳಿ ನನ್ನ ಮೂಲವನ್ನು ಕಂಡುಹಿಡಿದವರೇ ಶ್ರೇಷ್ಠರು ಎನ್ನುತ್ತಾನೆ. ಬ್ರಹ್ಮ ಹಂಸರೂಪದಲ್ಲಿ ಕಂಬದ ಮೇಲಕ್ಕೂ, ವಿಷ್ಣು ವರಾಹ ರೂಪದಲ್ಲಿ ಕಂಬದ ಕೆಳಭಾಗಕ್ಕೂ ಮೂಲವನ್ನು ಹುಡುಕುತ್ತ ಹೋಗುತ್ತಾರೆ. ಇಬ್ಬರಿಗೂ ಮೂಲ ಸಿಗುವುದೇ ಇಲ್ಲ.

ಶಿವನ ಶಕ್ತಿಯನ್ನು ನೋಡಿ ಇಬ್ಬರಿಗೂ ತಮ್ಮ ತಪ್ಪಿನ ಅರಿವಾಗುತ್ತದೆ. ಆ ಹೊತ್ತಿಗೆ ಶಿವನ ಜಡೆಯಿಂದ ಕೇತಕಿಪುಷ್ಪ ಕೆಳಕ್ಕೆ ಬೀಳುತ್ತದೆ. ಬ್ರಹ್ಮನು ಆ ಹೂವಿನ ಬಳಿ ಎಲ್ಲಿಂದ ಬಂದುದೆಂದು ಕೇಳಿದಾಗ ಶಿವನ ತಲೆಯಿಂದ ಎಂದು ಹೇಳುತ್ತದೆ. ಆ ಹೂವನ್ನು ಬ್ರಹ್ಮನು ಶಿವನಿಗೆ ನಿನ್ನ ಶಿರದಿಂದ ತಂದಿರುವೆನೆಂದು ಸುಳ್ಳು ಹೇಳುತ್ತಾನೆ. ಇದರಿಂದ ಕುಪಿತನಾದ ಶಿವನು ನಿನ್ನನ್ನು ಯಾರೂ ಪೂಜಿಸಕೂಡದು ಎಂದು ಶಾಪವನ್ನು ನೀಡುತ್ತಾನೆ. ಮತ್ತು ಶಿವನು ಲಿಂಗ ರೂಪವನ್ನು ತಾಳುತ್ತಾನೆ. ಆ ದಿನವೇ ಮಾಘ, ಶುಕ್ಲ ಚತುರ್ದಶಿ. ಇದೇ ದಿನವೇ ಶಿವರಾತ್ರಿ.

ಶಿವನ ಕತೆಗಳೆಲ್ಲವೂ ನಮಗೆ ಗೊತ್ತು. ಆದರೆ ಆತ ಬದುಕಿನ ಸರಳ ರೂಪ. ಶಿವನ ರೂಪವನ್ನೊಮ್ಮೆ ನೋಡಿ. ಜಟಾಧಾರಿ, ಕೊರಳಲ್ಲಿ ಹಾವು, ವಿಷಕಂಠ, ವಿಭೂತಿಪ್ರಿಯ, ನಾಟ್ಯಪ್ರಿಯ, ನಂದಿವಾಹನ, ಚರ್ಮದುಡುಗೆಯವ ಎಲ್ಲವೂ ಸರಳ; ತೀರಾ ಸರಳ. ಶಿವನ ರೂಪವೇ ಸರಳ ಬದುಕಿಗೆ ಹಿಡಿದ ಕನ್ನಡಿ. ಮೂರುಕಣ್ಣು ಅವನ ವಿಶೇಷತೆ, ತ್ರಿಶೂಲ ಆತನ ಆಯುಧ ಇದು ಹುಟ್ಟು, ಬದುಕು ಮತ್ತು ಸಾವಿನ ಸೂಚಕ. ಸರಳವಾದ ಬದುಕೇ ಸುಖದ ಹಾದಿ ಎನ್ನುತ್ತದೆ ಶಿವನ ರೂಪ. ಮೂರನೆಯ ಕಣ್ಣು ನಮ್ಮ ಅಂತರಂಗ. ಎಲ್ಲಾ ಸಂಗತಿಗಳಿಗೂ ಅಂತರಂಗದಲ್ಲಿ ಪರಿಶೀಲಿಸಿಯೇ ಪ್ರತಿಕ್ರಿಯೆ ನೀಡಬೇಕು. ಆಡಂಭರವಿಲ್ಲದ ಅವನ ಸ್ವರೂಪ ನಾವೂ ಆಡಂಭರವಿಲ್ಲದ ಜೀವನವನ್ನು ನಡೆಸಬೇಕು ಎನ್ನುತ್ತದೆ.

Advertisement

ಸಕಲ ಜಂತುವನ್ನೂ ಪ್ರೀತಿಯಿಂದ ಕಾಣಬೇಕು ಎನ್ನುವುದಕ್ಕೆ ಕೊರಳ ಹಾರ ಹಾವು ಮತ್ತು ವಾಹನ ನಂದಿಯೇ ಸಾಕ್ಷಿ. ವಿಷಕಂಠ ಅಂದರೆ ಬದುಕಿನಲ್ಲಿ ಬರುವ ಕಷ್ಟಗಳನ್ನು ಸಹಿಸಿಕೊಳ್ಳುವ ಶಕ್ತಿ ನಮ್ಮಲ್ಲಿ ಇರಬೇಕು, ನೋವುನುಂಗಿ ನಲಿವನ್ನು ಅನುಭವಿಸುವ ಜಾಣ್ಮೆಯನ್ನು ಬೆಳೆಸಿಕೊಳ್ಳಬೇಕು ಎಂದರ್ಥ. ಸಾಮಾನ್ಯ ಮನುಷ್ಯನಂತಿರುವ ಶಿವನ ರೂಪ ಶಿವಭಕ್ತರಿಗೆ ಆನಂದವನ್ನುಂಟು ಮಾಡುತ್ತದೆ. ಏನನ್ನೂ ಬಯಸದೇ ಇದ್ದಾಗ ದುಃಖವಾಗುವುದೇ ಇಲ್ಲ; ಅಲ್ಲದೆ ಏನು ಇವೆಯೋ ಅವೇ ಆನಂದವನ್ನು ಕೊಡುತ್ತವೆ. ಹರ ಚಿನ್ನದ ಕಿರೀಟವನ್ನಾಗಲೀ, ಪೀತಾಂಬರವನ್ನಾಗಲೀ ತೊಟ್ಟವನಲ್ಲ. ಅವನದು ಶ್ಮಶಾನ ವೈರಾಗ್ಯದ ಸ್ವರೂಪ. ಜೀವನದ ಕೊನೆಯ ಹಂತವನ್ನು ತಲುಪುತ್ತಿದ್ದಂತೆ ವೈರಾಗ್ಯ ನಮ್ಮನ್ನು ಆವರಿಸಬೇಕು. ಎಲ್ಲ ವ್ಯಾಮೋಹವನ್ನು ಕಳಚಿಕೊಂಡು ಭೈರಾಗಿಯಾಗಿ ಹೊರಡಬೇಕು. ಹುಟ್ಟುವಾಗ ಬೆತ್ತಲೆ; ಮತ್ತೆ ಹೋಗವಾಗಲೂ ಬೆತ್ತಲೆ. ಇದು ಶಿವನ ರೂಪ; ಬಾಳ ಸ್ವರೂಪ. ಓಂ ನಮಃ ಶಿವಾಯ.

||ಸರಳವಾಗಿ ಯೋಚಿಸಿ-ಸಂಸ್ಕಾರಯುತರಾಗಿ-ಸರಳರಾಗಿ ಜೀವಿಸಿ||

  • ಭಾಸ್ವ.
Advertisement

Udayavani is now on Telegram. Click here to join our channel and stay updated with the latest news.

Next