Advertisement
ದಕ್ಷಿಣ ಭಾರತದಲ್ಲಿಯ ದೇವಸ್ಥಾನಗಳಲ್ಲಿ ಭಕ್ತರಿಗೆ ಶ್ರೀ ದೇವರ ಗರ್ಭಗುಡಿಯ ಪ್ರವೇಶಕ್ಕೆ ನಿರ್ಭಂದವಿದೆ. ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಸ್ಥಾನವೊಂದನ್ನು ಹೊರತುಪಡಿಸಿ ಉಳಿದೆಡೆಗಳಲ್ಲಿ ಶ್ರೀ ದೇವರಿಗೆ ಪೂಜೆ, ಪುನಸ್ಕಾರಗಳನ್ನು ಮಾಡಿಸಿ ದೂರದಿಂದಲೇ ಕೈಮುಗಿದು ಭಕ್ತರು ಹಿಂತಿರುಗುತ್ತಾರೆ. ಗೋಕರ್ಣದ ಒಂದು ಭಾಗವಾದ ಮುರ್ಡೇಶ್ವರದಲ್ಲಿ ಕೂಡಾ ಭಕ್ತರಿಗೆ ಶ್ರೀ ದೇವರನ್ನು ಮುಟ್ಟಿ ಪೂಜೆ ಮಾಡುವ ಅವಕಾಶ ಇಲ್ಲವಾಗಿದೆ. ಇದನ್ನರಿತ ಡಾ. ಆರ್.ಎನ್. ಶೆಟ್ಟಿಯವರು ಭಾವುಕ ಭಕ್ತರಿಗೆ ಶ್ರೀ ದೇವರನ್ನು ಮುಟ್ಟಿ ಪೂಜೆ ಮಾಡುವ ಅವಕಾಶ ಕಲ್ಪಸುವ ಯೋಜನೆಯೊಂದು ಹೊಳೆಯಿತು. ಅವರ ಸಂಕಲ್ಪದಂತೆ ನಿರ್ಮಾಣವಾದ ದೇಗುಲವೇ ಶ್ರೀ ಸುಂದರ ರಾಮೇಶ್ವರ ದೇವಸ್ಥಾನ. ಇಲ್ಲಿ ಭಕ್ತರು ಶ್ರೀ ದೇವರನ್ನು ಮುಟ್ಟಿ ಪೂಜಿಸಿ ತಮ್ಮ ಇಷ್ಟಾರ್ಥಗಳನ್ನು ಪ್ರಾರ್ಥಿಸುವ ಅವಕಾಶ ಕಲ್ಪಸಿರುವುದು ಅವರ ದೂರ ದರ್ಶಿತ್ವಕ್ಕೊಂದು ಉದಾಹಣೆಯಾಗಿದೆ.
ರಾವಣನ ತಾಯಿ ಸಮುದ್ರದಂಚಿನಲ್ಲಿ ಪರಶಿವನ ಲಿಂಗವನ್ನು ಮಾಡಿ ಪೂಜಿಸಲು ತಯಾರಿ ನಡೆಸಿರುವಾಗ ಸಮುದ್ರ ರಾಜನ ಅಲೆಯ ಆರ್ಭಟಕ್ಕೆ ಲಿಂಗ ಕೊಚ್ಚಿ ಹೋಗಿ ಆಕೆಯ ಪೂಜಾ ಭಂಗವಾಗುತ್ತದೆ. ಅಲ್ಲಿಗಾಗಮಿಸಿದ ರಾವಣ ತಾಯಿಗೆ ಕೈಲಾಸವಾಸಿ ಶಿವನ ಆತ್ಮ ಲಿಂಗವನ್ನು ತರುವುದಾಗಿ ಆಶ್ವಾಸನೆ ಕೊಟ್ಟು ತೆರಳುತ್ತಾನೆ. ಘೋರ ತಪಸ್ಸನ್ನು ಆಚರಿಸಿ ದೇವತೆಗಳನ್ನೂ ಚಿಂತೆಗೀಡು ಮಾಡುವಂತೆ ಮಾಡುತ್ತಾನೆ. ಪರಶಿವನ ಆತ್ಮ ಲಿಂಗ ಲಂಕೆಯನ್ನು ಸೇರುವುದಾಗಿ ದೇವತೆಗಳು ಭಯಗೊಂಡರು. ಇದಕ್ಕಾಗಿ ನಾರದರ ಸಹಕಾರ ಕೋರಿದ ದೇವತೆಗಳು ನಾರದರನ್ನು ಕಳುಹಿಸಿದರು. ಘೋರ ತಪಸ್ಸಿಗೂ ಶಿವನ ಕೈಲಾಸವನ್ನೇ ಲಂಕೆಗೆ ಹೊತ್ತೊಯ್ಯುವ ರಾವಣದ ಪ್ರಯತ್ನಕ್ಕೆ ಶಿವ ಅಡ್ಡಬಂದ. ಆಗ ಪ್ರತ್ಯಕ್ಷನಾದ ಶಿವ ವರವನ್ನು ಬೇಡುವಂತೆ ಕೋರಿಕೊಂಡ. ಆತ ನಾರದರು ಮಾಯೆಯನ್ನು ಮುಂದಿಟ್ಟುಕೊಂಡು ರಾವಣನನ್ನು ದಾರಿ ತಪ್ಪಿಸಲು ಹೊರಟರು.
Related Articles
Advertisement
ಇಲ್ಲಿಂದ ಇನ್ನೊಂದು ಅಧ್ಯಾಯ ಆರಂಭವಾಗುತ್ತದೆ. ದೇವಾನು ದೇವತೆಗಳು ಚಿಂತೆಗೀಡಾಗುತ್ತಾರೆ. ಆಗ ನಾರದರು ಗಣಪತಿಯ ಮೊರೆ ಹೋಗುತ್ತಾರೆ. ಗಣಪತಿಯು ತಾನು ಮಾಡಬೇಕಾದ ಕಾರ್ಯಕ್ಕೆ ಸಜ್ಜಾದಾಗ ಸೂರ್ಯನಿಗೆ ಅಡ್ಡಲಾಗಿ ಮಾಡಿ ರಾವಣನು ದಕ್ಷಿಣದ ಗೋಕರ್ಣ ತೀರವನ್ನು ಸಮೀಪಿಸುತ್ತಿದ್ದಂತೆಯೇ ಕತ್ತಲಾವರಿಸುವಂತೆ ಮಾಡಿ ರಾವಣನಿಗೆ ಸಂಧ್ಯಾವಂದನೆಯ ಸಮಯವನ್ನು ನೆನಪಿಸಲಾಗುತ್ತದೆ. ರಾವಣನು ಆತ್ಮ ಲಿಂಗವನ್ನು ವಟುರೂಪಿ ಗಣಪತಿಯ ಕೈಗಿತ್ತು ಸಂಧ್ಯಾವಂದನೆಯನ್ನು ಮುಗಿಸಿ ವಾಪಾಸು ಬರುವಷ್ಟರಲ್ಲಿ ಗಣಪತಿ ಆತ್ಮ ಲಿಂಗವನ್ನು ಭೂ ಸ್ಪರ್ಷ ಮಾಡಿ ಅದು ಅಲ್ಲಿಯೇ ಗಟ್ಟಿಯಾಗಿ ನೆಲೆಯೂರಿತ್ತು. ಇದರಿಂದ ಕೋಪಗೊಂಡ ರಾವಣ ಗಣಪತಿಯ ತಲೆಯ ಮೇಲೆ ಬಲವಾಗಿ ಗುದ್ದಿ ಆತ್ಮ ಲಿಂಗವನ್ನು ಭೂಮಿಯಿಂದ ಮೇಲೆತ್ತಲು ಪ್ರಯತ್ನಿಸುತ್ತಾನೆ. ಆಗ ಕೈಗೆ ಬಂದ ಆತ್ಮ ಲಿಂಗವನ್ನು ಸುತ್ತಿದ್ದ ಬಟ್ಟೆಯ ಚೂರೊಂದು ಮುರ್ಡೇಶ್ವರದ ಕಂದುಕಗಿರಿಯ ಮೇಲೆ ಬೀಳುತ್ತದೆ. ಅದುವೇ ಇಂದು ಪ್ರಸಿದ್ಧ ಶಿವ ತಾಣವಾಗಿ ಭಕ್ತ ಜನರ ಅಭೀಷ್ಟವನ್ನು ಈಡೇರಿಸುತ್ತಿದೆ.
ಜೀರ್ಣೋದ್ಧಾರ: ಮುರ್ಡೇಶ್ವರದ ನವ ನಿರ್ಮಾತೃ ಡಾ. ಆರ್. ಎನ್. ಶೆಟ್ಟಿಯವರು ತಮ್ಮ ಆರಾಧ್ಯ ದೇವರಾದ ಮಹಾಮುರುಡೇಶ್ವರನ ಗುಡಿಯನ್ನು ಅಭಿವೃದ್ಧಿ ಮಾಡುವ ಸಂಕಲ್ಪ ಮಾಡಿ ವಿವಿಧ ಅಭಿವೃದ್ಧಿ ಯೋಜನೆಗಳನ್ನು ಕೈಗೆತ್ತಿಕೊಳ್ಳುತ್ತಾರೆ. ಸ್ವತಃ ನಿಂತು ಸ್ವಂತ ದೇವಸ್ಥಾನದ ಜೀರ್ಣೋದ್ಧಾರ ಕೈಗೊಂಡ ಶೆಟ್ಟಿಯವರು ಇಂದು ಮುರ್ಡೇಶ್ವರವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಲ್ಲಿ ಸಫಲರಾದರಲ್ಲದೇ ತಮ್ಮ ದುಡಿಮೆಯ ಹಣದಲ್ಲಿ ಒಂದು ಪಾಲು ಇಲ್ಲಿನ ಅಭಿವೃದ್ಧಿಗೆಂದೇ ಮೀಸಲಾಗಿಟ್ಟರು. ‘ 1978ರ ಸುಮಾರು ಮುರ್ಡೇಶ್ವರದಲ್ಲಿ ಅಭಿವೃದ್ಧಿ ಕಾರ್ಯಕ್ಕೆ ತೊಡಗಿಕೊಂಡ ಅವರು ಮದ್ರಾಸಿನಿಂದ ಎಸ್.ಕೆ.ಆಚಾರಿ ಎಂಬ ಪ್ರಸಿದ್ಧ ಶಿಲ್ಪಿಯನ್ನು ಕರೆಸಿ ಮುರ್ಡೇಶ್ವರ ದೇವಸ್ಥಾನವನ್ನು ಸಂಪೂರ್ಣ ಶಿಲಾಮಯ ದೇವಾಲಯವನ್ನಾಗಿಸಿದರು. ಮುರ್ಡೇಶ್ವರ ಅವರಿಗೆ ಖ್ಯಾತಿ ತಂದಿದ್ದರಿಂದ ಮತ್ತಷ್ಟು ದೈವೀಕ ಕಾರ್ಯಗಳನ್ನು ಮಾಡಿದ ಅವರು ನಾಡಿನಲ್ಲೇ ಅತಿ ಎತ್ತರದ ಈಶ್ವರ ಮೂರ್ತಿಯನ್ನು ಪ್ರತಿಷ್ಠಾಪಿದರು. ಹೆಸರಾಂತ ಸಿಮೆಂಟ್ ಶಿಲ್ಪಿ ಕಾಶಿನಾಥ ೧೨೩ ಅಡಿ ಎತ್ತರದ ಪದ್ಮಾಸನಾರೂಢ ಶಿವನನ್ನು ರಚಿಸಿದರು. ಬಲಗೈ ವರದ ಹಸ್ತ, ತ್ರಿಶೂಲ, ಢಮರು, ರುದ್ರಾಕ್ಷಿಧಾರಿ, ಸರ್ಪ ಕೊರಳಲ್ಲಿ ಸುತ್ತಿದ ಮಂದಸ್ಮಿತ ಶಿವನ ಜಟೆಯಿಂದ ಗಂಗೆ ಜಿಗಿದು ಭಕ್ತರಿಗೆ ರೋಮಾಂಚನವಾಯಿತು. ಪಕ್ಕದಲ್ಲಿಯೇ ಶನೀಶ್ವರ ಹಾಗೂ ರಾಮೇಶ್ವರ ದೇವಾಲಯಗಳನ್ನು ನಿರ್ಮಿಸಿದರು. ದೇಶದಲ್ಲಿ ಅಪರೂಪವಾದ 249 ಅಡಿ ರಾಜಗೋಪುರವನ್ನು ನಿರ್ಮಿಸಿ ಹೊಸ ಇತಿಹಾಸವನ್ನು ಬರೆದರು. ದೇವರಿಗೆ ಚಿನ್ನದ ಸಕಲ ಆಭರಣ, ಧ್ವಜಸ್ತಂಭಕ್ಕೆ ಚಿನ್ನದ ಲೇಪನ, ಉತ್ಸವ ಮೂರ್ತಿಗೆ ಚಿನ್ನದ ರಥ ಹೀಗೆ ಮುರ್ಡೇಶ್ವರ ಭಕ್ತರ ಮತ್ತು ಪ್ರವಾಸಿಗರ ಪಾಲಿಗೆ ಪಾವನ ಕ್ಷೇತ್ರವನ್ನಾಗಿಸಿದರು. ಇಂದು ದಿನ ನಿತ್ಯ ಸಾವಿರಾರು ಭಕ್ತರು ದೇವಸ್ಥಾನಕ್ಕೆ ಭೇಟಿಕೊಟ್ಟು ಹೋಗುತ್ತಿದ್ದರೆ ಇಲ್ಲಿನ ಪ್ರಕೃತಿ ಸೌಂದರ್ಯಕ್ಕೆ ಮಾರು ಹೋಗಿ ವಿದೇಶಿಗರೂ ಸೇರಿದಂತೆ ವಾರ್ಷಿಕವಾಗಿ ಲಕ್ಷಾಂತರ ಭಕ್ತರು, ಪ್ರವಾಸಿಗರು ಆಗಮಿಸುತ್ತಾರೆ.