ಬೀದರ: ಮಹಾಶಿವರಾತ್ರಿ ಹಬ್ಬವನ್ನು ಸೋಮವಾರ ಜಿಲ್ಲಾದ್ಯಂತ ಸಡಗರ ಸಂಭ್ರಮದಿಂದ ಆಚರಣೆ ಮಾಡಲಾಯಿತು. ಜಿಲ್ಲೆಯ ವಿವಿಧ ದೇವಸ್ಥಾನಗಳಲ್ಲಿ ಬೆಳಗ್ಗೆಯಿಂದ ಭಕ್ತಾದಿಗಳು ಸರದಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು.
ಶಿವರಾತ್ರಿ ಹಿನ್ನೆಲೆಯಲ್ಲಿ ನಗರದ ಹೊರವಲಯದ ಐತಿಹಾಸಿಕ ಪುಣ್ಯ ಕ್ಷೇತ್ರವಾದ ಪಾಪನಾಶ ದೇವಸ್ಥಾನದ ಶಿವಲಿಂಗ ದರ್ಶನ ಪಡೆಯಲು ಭಕ್ತರ ದಂಡು ಹರಿದುಬಂದಿತು. ನೆರೆ ರಾಜ್ಯ ತೆಲಂಗಾಣ, ಮಹಾರಾಷ್ಟ್ರ ಅಲ್ಲದೆ, ಜಿಲ್ಲೆಯ ವಿವಿಧೆಡೆಯಿಂದ ಸಾವಿರಾರು ಭಕ್ತರು ಆಗಮಿಸಿ ಶಿವಲಿಂಗದ ದರ್ಶನ ಪಡೆದರು.
ಭಕ್ತರು ಬೆಳಗ್ಗೆಯಿಂದಲೇ ದೇವಸ್ಥಾನದತ್ತ ಹೆಚ್ಚೆ ಹಾಕಿದ್ದು, ಆವರಣದಲ್ಲಿ ಜಾತ್ರೆಯ ವಾತಾವರಣ ನಿರ್ಮಾಣವಾಗಿತ್ತು. ಆವರಣದಲ್ಲಿರುವ ಕಲ್ಯಾಣಿಯಲ್ಲಿ ಮಕ್ಕಳು, ಯುವಕರು ಸ್ನಾನ ಮಾಡಿ ಭಕ್ತಿ ಶ್ರದ್ಧೆಯಿಂದ ಇಷ್ಟಲಿಂಗ ಪೂಜೆ ಮಾಡಿದರು.
ತೆಂಗು, ಕರ್ಪೂರ, ಬಿಲ್ವಪತ್ರೆ, ಹೂವು ಮತ್ತಿತರ ಪೂಜಾ ಸಾಮಾಗ್ರಿಗಳೊಂದಿಗೆ ಗಂಟೆಗಟ್ಟಲೇ ಸಾಲಿನಲ್ಲಿ ನಿಂತು ಭಕ್ತಿ ಶ್ರದ್ಧೆಯಿಂದ ಶಿವಲಿಂಗ ದರ್ಶನ ಪಡೆದು ಪುನೀತರಾದರು. ಶಿವರಾತ್ರಿ ನಿಮಿತ್ತ ರುದ್ರಾಭಿಷೇಕ, ಭಜನೆ, ಸಂಗೀತ ಹಾಗೂ ವಿವಿಧ ಧಾರ್ಮಿಕ, ಸಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.
ಶಿವರಾತ್ರಿ ಹಿನ್ನೆಲೆಯಲ್ಲಿ ಹೆಚ್ಚು ಭಕ್ತರ ಆಗಮಿಸಬಹುದು ಎಂಬ ನಿರೀಕ್ಷೆಯಲ್ಲಿ ವ್ಯಾಪಾರಿಗಳು ವಿವಿಧೆಡೆಯಿಂದ ಆಗಮಿಸಿ ತಾತ್ಕಾಲಿಕ ಅಂಗಡಿಗಳನ್ನು ತೆರೆದಿದ್ದರು. ಹೂವು, ಹಣ್ಣು, ಪೂಜಾ ಸಾಮಗ್ರಿ, ತಿನಿಸು, ಮಕ್ಕಳ ಆಟಿಕೆಗಳ ವ್ಯಾಪಾರದ ಭರಾರಟೆಯೂ ಹೆಚ್ಚಿತ್ತು.
ಬೇಸಿಗೆ ಬಿಸಿ ಹೆಚ್ಚುತ್ತಿರುವುದಿರಂದ ವಿವಿಧ ಸಂಘಟನೆಯವರು ಭಕ್ತರಿಗೆ ಕುಡಿಯುವ ನೀರು, ವಿವಿಧ ರೀತಿಯ ಪ್ರಸಾದ ವಿತರಣೆ ವ್ಯವಸ್ಥೆ ಮಾಡಿದ್ದರು.