Advertisement
ಮಹಾಶಿವರಾತ್ರಿ ಪ್ರಯುಕ್ತ ದೇವಸ್ಥಾನ ಗಳಲ್ಲಿ ಸಿದ್ಧತೆ ನಡೆಸಲಾಗಿತ್ತು. ಬೆಳಗ್ಗಿ ನಿಂದಲೇ ವಿಶೇಷವಾಗಿ ರುದ್ರಾಭಿಷೇಕ, ವಿಶೇಷ ಅಭಿಷೇಕ, ಸೀಯಾಳಾಭಿಷೇಕ, ವಿವಿಧ ಪೂಜೆ ಪುನಸ್ಕಾರಗಳು ಜರಗಿದವು.ಶ್ರೀಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ ಸನ್ನಿಧಿ, ಉಜಿರೆ ಜನಾರ್ದನ ಸ್ವಾಮಿ ದೇವಸ್ಥಾನ, ಸುರ್ಯ ಸದಾಶಿವರುದ್ರ ಕ್ಷೇತ್ರ, ಪಜಿರಡ್ಕ ಸದಾಶಿವೇಶ್ವರ ದೇವಸ್ಥಾನ, ಚಾರ್ಮಾಡಿ ಪಂಚಲಿಂಗೇಶ್ವರ ದೇವಸ್ಥಾನ, ಕುತ್ಯಾರು ಶ್ರೀ ಸೋಮನಾಥೇಶ್ವರ, ಬಳಂಜ ಪಂಚಲಿಂಗೇಶ್ವರ, ಮಲೆಂಗಲ್ಲು ಉಮಾಮಹೇಶ್ವರ, ಕರಾಯ ಮಹಾಲಿಂಗೇಶ್ವರ, ಕುರಿಯ ಸದಾಶಿವ ಕ್ಷೇತ್ರ, ಶ್ರೀಕ್ಷೇತ್ರ ಓಡೀಲು ಮಹಾಲಿಂಗೇಶ್ವರ, ವೇಣೂರು ಮಹಾಲಿಂಗೇಶ್ವರ, ಇಂದಬೆಟ್ಟು ಅರ್ಧ ನಾರೀಶ್ವರ, ಕರಂಬಾರು ಕೆಳ್ಕರ ಶ್ರೀ ಮಹಾಲಿಂಗೇಶ್ವರ ದೇವಾಲಯ ಸಹಿತ ಇತರ ಪ್ರಮುಖ ಶಿವ ದೇವಸ್ಥಾನಗಳಲ್ಲಿ ದೇವರಿಗೆ ರುದ್ರಾಭಿಷೇಕ, ಮಹಾ ಪೂಜೆ ಭಜನ ಸೇವೆ ಜರಗಿತು. ಶಿವನಿಗೆ ಪ್ರಿಯವಾದ ಹೂವಿನ ಅಲಂಕಾರ ಸಹಿತ ಬಿಲ್ವಪತ್ರೆ, ರುದ್ರಾಕ್ಷಿ, ಎಕ್ಕ ಮುಂತಾ ದವುಗಳ ಸಮರ್ಪಣೆ, ಓಂ ನಮಃ ಶಿವಾಯ ಪಠಣ, ಭಜನೆ, ಪಂಚಾಕ್ಷರಿ ಮಂತ್ರ ಪಠಿಸಲು ಭಕ್ತರು ಶಿವ ದೇಗುಲಗಳಲ್ಲಿ ಸೇರಿದ್ದರು.
ಧರ್ಮಸ್ಥಳಕ್ಕೆ ಪಾದಯಾತ್ರೆ ಕೈಗೊಂಡಿರುವ ಭಕ್ತರ ಜತೆಗೆ ಹಾಸನದಿಂದ ಶ್ವಾನ ಹಿಂಬಾಲಿಸಿದೆ. ಹಾಸನ ಮೂಲದ ಮಂಜುನಾಥ್ ಅವರೊಡನೆ ಅವರ ಸಾಕುನಾಯಿ ಕೊಟ್ಟಿಗೆಹಾರ, ಬಣಕಲ್, ಚಾರ್ಮಾಡಿಯಾಗಿ ಧರ್ಮಸ್ಥಳವರೆಗೂ ಸುಮಾರು 130 ಕಿ.ಮೀ. ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಿದೆ. ಮಂಜುನಾಥ ಸ್ವಾಮಿಯ ದರ್ಶನ
ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಪಾದಯಾತ್ರಿ ಜನ ಸಾಗರವೇ ಸೇರಿದೆ. ಮುಂಜಾನೆಯಿಂದಲೇ ಭಕ್ತರು ಮಂಜುನಾಥ ಸ್ವಾಮಿಯ ದರ್ಶನ ಪಡೆದು ರಾತ್ರಿ ಜಾಗರಣೆಗೆ ದೇವಸ್ಥಾನ ಮುಂಭಾಗ ಸೇರಿದ್ದರು. ಈಗಾಗಲೇ 16 ಸಾವಿರಕ್ಕೂ ಹೆಚ್ಚು ಪಾದಯಾತ್ರಿಗಳಿಗೆ ಕ್ಷೇತ್ರದಿಂದ ವಸತಿ ಕಲ್ಪಿಸಲಾಗಿದೆ. ಸಂಜೆ 6ಕ್ಕೆ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರು ಶಿವ ಪಂಚಾಕ್ಷರಿ ಮಂತ್ರ ಜಪ ಉದ್ಘಾಟಿಸಿದ ಬಳಿಕ ಆಹೋರಾತ್ರಿ ಶಿವ ಭಜನೆ ಸಹಿತ ವಿವಿಧ ಸೇವೆಯಲ್ಲಿ ಲಕ್ಷೋಪಲಕ್ಷ ಮಂದಿ ಭಕ್ತರು ಭಾಗವಹಿಸಿದರು.