Advertisement
ವಿವಿಧ ಕಡೆಗಳಿಂದ ಪಾದಯಾತ್ರೆ ಆರಂಭಿಸಿದ್ದ ಪಾದಯಾತ್ರಿಗಳು ಮಾ.1ಕ್ಕೆ ಧರ್ಮಸ್ಥಳಕ್ಕೆ ತಲುಪಿ ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದು ಧರ್ಮಸ್ಥಳ ಧರ್ಮಾಧಿಕಾರಿಗಳನ್ನು ಭೇಟಿಯಾಗಿ ಆಶೀರ್ವಾದ ಪಡೆದರು. ಮಂಗಳವಾರ ದೇವಸ್ಥಾನವು ಯಾತ್ರಿಕರಿಂದ ಆವರಿಸಿತ್ತು.
ಶ್ರೀ ಕ್ಷೇತ್ರ ಧರ್ಮಸ್ಥಳವನ್ನು ವಿಶೇಷ ಹೂ ಸಹಿತ ವಿದ್ಯುತ್ ದೀಪಗಳಿಂದ ಸಿಂಗರಿಸಲಾಗಿದೆ. ಕ್ಷೇತ್ರದ ಡಿ.ಹರ್ಷೇಂದ್ರ ಕುಮಾರ್ ಅವರ ಮಾರ್ಗದರ್ಶನದಲ್ಲಿ ಸ್ವತ್ಛತೆಗೆ ಆದ್ಯತೆ ನೀಡಲಾಗಿದೆ. ಸನ್ನಿಧಾನದಲ್ಲಿ ಪ್ಲಾಸ್ಟಿಕ್ ಬಳಸದಂತೆ ಜಾಗೃತಿ ಫಲಕ ಸಹಿತ ಸೂಚನ ಫಲಕ ಅಳವಡಿಸಲಾಗಿದೆ. ಮಂಗಳವಾರ ಮುಂಜಾನೆಯಿಂದಲೇ ನೇತ್ರಾವತಿ ಸ್ನಾನ ಘಟ್ಟ ಸಹಿತ ಎಲ್ಲೆಡೆ ಭಕ್ತರು ತಂಗಿದ್ದರು. ದೇವಸ್ಥಾನ ಮುಂಭಾಗ ಧರ್ಮಸ್ಥಳ ಧರ್ಮಾಧಿಕಾರಿ ಡಾ| ಡಿ.ವೀರೇಂದ್ರ ಹೆಗ್ಗಡೆ ಅವರು ಅಹೋರಾತ್ರಿ ಜಾಗರಣೆಗೆ ಚಾಲನೆ ನೀಡಿದರು. ಸುಮಾರು 2 ಲಕ್ಷಕ್ಕೂ ಅಧಿಕ ಮಂದಿ ಕಳೆದ ಎರಡು ದಿನಗಳಲ್ಲಿ ದೇವರ ದರ್ಶನ ಪಡೆದಿದ್ದು, ಕ್ಷೇತ್ರದಿಂದ ನಿರಂತರ ಅನ್ನದಾನ ಸೇವೆ ನೆರವೇರಿತು. ಇಂದಬೆಟ್ಟುವಿನ ಅರ್ಧನಾರೀಶ್ವರ ಸ್ವಾಮಿ ಸನ್ನಿಧಿಯಲ್ಲಿ ಭಕ್ತರಿಂದ ಸಾಮೂಹಿಕ ಶಿವ ಸಹಸ್ರನಾಮ ಪಠಣ ನಡೆಯಿತು. ದೇವಸ್ಥಾನವನ್ನು ಹೂಗಳಿಂದ ಅಲಂಕರಿಸಲಾಗಿತ್ತು. ಶ್ರೀ ಕ್ಷೇತ್ರ ಓಡೀಲು ಮಹಾಲಿಂಗೇಶ್ವರ ದೇವಸ್ಥಾನ, ಉಜಿರೆ ಜನಾರ್ದನ ದೇವಸ್ಥಾನ, ಸುರ್ಯ ಶ್ರೀ ಸದಾಶಿವರುದ್ರ ದೇವಸ್ಥಾನ ಸಹಿತ ಪ್ರಮುಖ ದೇವಸ್ಥಾನಗಳಲ್ಲಿ ವಿಶೇಷ ಸೇವೆಗಳು ನಡೆದವು.
Related Articles
Advertisement
ಭಕ್ತರಿಂದ ಕಲಾ ಸೇವೆಶಿವರಾತ್ರಿ ಪ್ರಯುಕ್ತ ಭಕ್ತರು ದೇವಸ್ಥಾನದ ಮುಂಭಾಗ ಲಕ್ಷೋಪಮಂದಿ ಸೇರಿದ್ದರು. ಮುಂಜಾನೆವರೆಗು ಶಿವನಾಮಜಪದಲ್ಲಿ ತೊಡಗಿರುತ್ತಾರೆ. ಭಕ್ತಿಯಿಂದ ರಾಜ್ಯದ ನಾನಾ ಕಡೆಗಳಿಂದ ಬಂದ ಕಲಾ ತಂಡಗಳು ಡೊಳ್ಳು, ನಗಾರಿ, ಶಂಖ, ಸೇರಿದಂತೆ ವಿವಿಧ ಪ್ರಕಾರಗಳ ಕಲಾ ಸೇವೆಯನ್ನು ನೀಡಿದರು.