ಗಂಗಾವತಿ: ಮಹಾಶಿವರಾತ್ರಿ ನಿಮಿತ್ತ ನಗರದ ಶಿವದೇವಾಲಯಗಳಲ್ಲಿ ಶಿವ ಪಾರ್ವತಿಯರಿಗೆ ತ್ರಿಕಾಲ ಪೂಜೆ ಹಾಗೂ ಮಹಾರುದ್ರಾಭಿಷೇಕ ಧಾರ್ಮಿಕ ಕಾರ್ಯಕ್ರಮಗಳು ಶ್ರದ್ಧೆಯಿಂದ ಜರುಗಿದವು.
ಹಿರೇಜಮತಗಲ್ ಇತಿಹಾಸ ಪ್ರಸಿದ್ಧ ಶ್ರೀಪ್ರಸನ್ನ ಪಂಪಾ ವಿರೂಪಾಕ್ಷೇಶ್ವರ ದೇವಾಲಯದಲ್ಲಿ ಮಹಾಶಿವರಾತ್ರಿ ಹಬ್ಬ ಕಳೆ ಕಟ್ಟಿತ್ತು. ಬೆಳ್ಳಿಗ್ಗೆ ಗಂಗಾಜಲಾಭಿಷೇಕ ವಿವಿಧ ಪುಷ್ಪಗಳಿಂದ ವಿರೂಪಾಕ್ಷ ಹಾಗೂ ಪಂಪಾಂಬಿಕೆಗೆ ಅಲಂಕಾರ ಮಾಡಲಾಗಿತ್ತು. ಬೆಳ್ಳಿಗ್ಗೆ ಮಧ್ಯಾನ್ಹ ಹಾಗೂ ಸಂಜೆ ತ್ರಿಕಾಲ ಪೂಜೆಯನ್ನು ಮಾಡಲಾಯಿತು. ಸಂಜೆ ಸ್ಥಳೀಯ ಭಜನಾ ಮಂಡಳಿಯಿಂದ ಶಿವಧ್ಯಾನ ಭಜನೆ ಜರುಗಿತು.
ನೀಲಕಂಠೇಶ್ವರ ದೇವಾಲಯ: ನೀಲಕಂಠೇಶ್ವರ ದೇಗುಲದಲ್ಲಿ ಶಿವರಾತ್ರಿ ನಿಮಿತ್ತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.ಬೆಳಗಿನಿಂದ ಶಿವಭಕ್ತರು ಕ್ಯೂ ನಲ್ಲಿ ನಿಂತು ಅಭಿಷೇಕದಲ್ಲಿ ಪಾಲ್ಗೊಂಡು ತೀರ್ಥ ಹಣ್ಣ ಹಂಪಲಿನ ಪ್ರಸಾದ ಸ್ವೀಕಾರ ಮಾಡಿದರು. ನೀಲಕಂಠೇಶ್ವರನಿಗೆ ಕ್ಷೀರಾಭಿಷೇಕ ಸೇರಿ ವಿವಿಧ ಹೂವುಗಳಿಂದ ಅಲಂಕಾರ ಮಾಡಲಾಗಿತ್ತು.
ದೇವಘಾಟದಲ್ಲಿರುವ ಅಮೃತೇಶ್ವರ, ವಾಣಿಭದ್ರೇಶ್ವರ ಬೆಟ್ಟದಲ್ಲಿರುವ ಚಂದಾಲಿಂಗೇಶ್ವರ, ಶ್ರೀಚನ್ನಬಸವಸ್ವಾಮಿ ಮಠದ ಶ್ರೀಮಲ್ಲಿಕಾರ್ಜುನ ದೇವರಿಗೆ ವಿಶೇಷ ಅಭಿಷೇಕ ಅಲಂಕಾರ ಮಾಡಲಾಗಿತ್ತು. ನಗರೇಶ್ವರ ದೇವಾಲಯ, ದ್ವಾದಶ ಜ್ಯೋರ್ತಿಲಿಂಗ ದೇವಾಲಯ, ಶ್ರೀರಾಮಲಿಂಗೇಶ್ವರ, ಜಯನಗರದ ಶ್ರೀಗಂಗಾಧರೇಶ್ವರ, ಹಿರೇಜಂತಗಲ್ ಮುಡ್ಡಾಣೇಶ್ವರ, 27 ನೇ ವಾರ್ಡಿನ ಅಖಂಡೇಶ್ವರ, ಪಂಪಾಸರೋವರದ ಈಶ್ವರ ಲಿಂಗ, ಅಂಜನಾದ್ರಿ ಬೆಟ್ಟದ ಕೆಳಗಿನ ಪಂಪಾಪತಿ ದೇವರು ಸೇರಿ ನಗರದ ಎಲ್ಲಾ ಶಿವ ದೇವಾಲಯಗಳಲ್ಲಿ ಮಹಾಶಿವರಾತ್ರಿ ಹಬ್ಬದ ನಿಮಿತ್ತ ವಿಶೇಷ ಅಲಂಕಾರ ಮಾಡಲಾಗಿತ್ತು. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ದೇವಾಲಯಗಳಿಗೆ ತೆರಳಿ ಶಿವ ದರ್ಶನ ಪಡೆದು ಪಾವನರಾದರು.
ತಾಲ್ಲೂಕಿನ ಹನುಮನಹಳ್ಳಿಯ ಹತ್ತಿರ ಇರುವ ತುಂಗಭದ್ರಾ ನದಿ ಚಕ್ರತೀರ್ಥದ ಶ್ರೀ ಕೋಟಿಲಿಂಗ ಗಳಿಗೆ ಭಕ್ತರು ಮಹಾಶಿವರಾತ್ರಿ ನಿಮಿತ್ಯ ಪೂಜೆಗೈದರು .