Advertisement

ಪ್ರಧಾನಿ ಆರೋಗ್ಯ ವೃದ್ಧಿ ಮತ್ತು ಹಿಂದೂ ಕಾರ್ಯಕರ್ತರ ಶ್ರೇಯೋಭಿವೃದ್ಧಿಗಾಗಿ ಮಹಾರುದ್ರಯಾಗ

06:09 PM Mar 03, 2022 | Team Udayavani |

ಕಾಪು : ದೇಶದ ಪ್ರಧಾನಿ ನರೇಂದ್ರ ಮೋದಿ ಅವರ ಆರೋಗ್ಯ ವೃದ್ಧಿ, ಹಿಂದುತ್ವ ಮತ್ತು ಹಿಂದೂ ಕಾರ್ಯಕರ್ತರ ಶ್ರೇಯೋಭಿವೃದ್ಧಿಗಾಗಿ ಟೀಮ್ ಮೋದಿ ಕಾಪು ವಲಯದ ವತಿಯಿಂದ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯಶ್‌ಪಾಲ್ ಎ. ಸುವರ್ಣ ಅವರ ಸಹಕಾರದೊಂದಿಗೆ ಲೋಕಕಲ್ಯಾಣಾರ್ಥವಾಗಿ ಮಡುಂಬು ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಮಾ. 3ರಂದು ಅತಿ ಮಹಾರುದ್ರಯಾಗ ಸಂಪನ್ನಗೊಂಡಿತು.

Advertisement

ಕಾಪು ಶ್ರೀ ಲಕ್ಷ್ಮೀ ಜನಾರ್ದನ ದೇವಸ್ಥಾನದ ಅರ್ಚಕ ವೇ| ಮೂ| ಜನಾರ್ದನ ತಂತ್ರಿ ಅವರ ಮಾರ್ಗದರ್ಶನದಲ್ಲಿ ವೇ| ಮೂ| ಪೆರ್ಣಂಕಿಲ ಶ್ರೀಶ ಭಟ್, ವೇ| ಮೂ| ಶ್ರೀವತ್ಸ ಭಟ್ ಪಾವಂಜೆ ಅವರ ನೇತೃತ್ವದಲ್ಲಿ ೧೦ ಮಂದಿ ಋತ್ವಿಜರ ಸಹಕಾರದೊಂದಿಗೆ ಎಳ್ಳು, ಸಕ್ಕರೆ ಮತ್ತು ಜೇನು ತುಪ್ಪದಿಂದ ಮಿಶ್ರಿತ ದ್ರವ್ಯವನ್ನು ಸಿದ್ಧಪಡಿಸಿ ೧೦೦೦ ಸಂಖ್ಯೆಯಲ್ಲಿ ಯಾಗಕ್ಕೆ ಆಹುತಿ ನೀಡಿ, ವಿವಿಧ ಅರ್ಘ್ಯಗಳನ್ನು ಸಮರ್ಪಿಸಿ ಪೂರ್ಣಾಹುತಿ ನೀಡುವುದರೊಂದಿಗೆ ಅತಿ ಮಹಾರುದ್ರಯಾಗವನ್ನು ಪೂರ್ಣಗೊಳಿಸಲಾಯಿತು.

ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯಶ್‌ಪಾಲ್ ಎ. ಸುವರ್ಣ ಮಾತನಾಡಿ, ಟೀಮ್ ಮೋದಿ ಕಾಪು ವಲಯದ ನೇತೃತ್ವದಲ್ಲಿ ಋತ್ವಿಜರು, ಪೌರೋಹಿತರು ಮತ್ತು ಭಕ್ತಾಽಗಳ ಸಮ್ಮುಖದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಆರೋಗ್ಯ, ಸುಖ, ಶಾಂತಿ ಮತ್ತು ನೆಮ್ಮದಿಗಾಗಿ ಪ್ರಾರ್ಥಿಸಿ ಮಹಾರುದ್ರಯಾಗವನ್ನು ಪೂರ್ಣಗೊಳಿಸಲಾಗಿದೆ. ಯಾಗದಲ್ಲಿ ಪ್ರಧಾನಿ ಮೋದಿಯವರ ಆರೋಗ್ಯ, ಶಕ್ತಿ ತುಂಬುವಂತೆ ಹಾರೈಸಿ, ಹಿಂದೂ ಪರ ಕಾರ್ಯಕರ್ತರ ಶ್ರೇಯೋಭಿವೃದ್ಧಿಗಾಗಿ ಹರಕೆ ಸಲ್ಲಿಸಲಾಗಿದೆ. ವಿಶ್ವಕ್ಕೆ ಮೋದಿಯವರ ನೇತೃತ್ವದ ಅಗತ್ಯತೆಯಿದೆ. ದೇಶಕ್ಕೆ ಬಂದಿರುವ ಕಂಟಕ ದೂರವಾಗಿ, ಅತೀ ಶೀಘ್ರದಲ್ಲಿ ಹಿಂದೂ ರಾಷ್ಟ್ರದ ಘೋಷಣೆಗಾಗಿ ಪ್ರಾರ್ಥಿಸಲಾಗಿದೆ ಎಂದರು.

ಇದನ್ನೂ ಓದಿ : ಆಗುಂಬೆ ಘಾಟಿಯಲ್ಲಿ 10 ದಿನ ವಾಹನ ಸಂಚಾರ ನಿಷೇಧ: ಪರ್ಯಾಯ ಮಾರ್ಗ ಯಾವುದು?

ಮಡುಂಬು ಮಹಾಗಣಪತಿ ದೇವಸ್ಥಾನದ ಆಡಳಿತ ಮೊಕ್ತೇಸರ ವೇ| ಮೂ| ನಾರಾಯಣ ತಂತ್ರಿ, ಬಿಜೆಪಿ ರಾಜ್ಯ ಉಪಾಧ್ಯಕ್ಷೆ ನಯನಾ ಗಣೇಶ್, ರಾಜ್ಯ ಕಾರ್ಯಕಾರಣಿ ಸದಸ್ಯ ಸುರೇಶ್ ಪಿ. ಶೆಟ್ಟಿ ಗುರ್ಮೆ, ಕಾಪು ಕ್ಷೇತ್ರ ಬಿಜೆಪಿ ಅಧ್ಯಕ್ಷ ಶ್ರೀಕಾಂತ್ ನಾಯಕ್, ಬಿಜೆಪಿ ಮುಖಂಡರಾದ ಮಂಜುಳಾ ಪ್ರಸಾದ್, ಮಾಲಿನಿ ಶೆಟ್ಟಿ, ಅರುಣ್ ಶೆಟ್ಟಿ ಪಾದೂರು, ಅನಿಲ್ ಕುಮಾರ್, ಸುರೇಶ್ ದೇವಾಡಿಗ, ಸಂದೀಪ್ ಶೆಟ್ಟಿ ಕಲ್ಯ, ಟೀಮ್ ಮೋದಿ ಅಧ್ಯಕ್ಷ ಯೋಗೀಶ್ ಪೂಜಾರಿ ಹಾಗೂ ಟೀಮ್ ಮೋದಿ ಬಳಗದ ಸದಸ್ಯರು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next