Advertisement

ಮಹರ್ಷಿ ಬೆಳಕು: ಅನ್ನದ ಹಿಂದಿನ ಪ್ರೀತಿ

10:11 AM Feb 09, 2020 | mahesh |

ಭೋಜನ ಎಂಬುದು ಅವರವರ ಅಭಿರುಚಿ ಮತ್ತು ಸೌಲಭ್ಯಕ್ಕೆ ಸಂಬಂಧಿಸಿದ ವಿಷಯ. ಹಾಗಿದ್ದರೂ ಭಾರತೀಯ ಶಾಸ್ತ್ರಗಳು ಈ ಬಗ್ಗೆ ಅನೇಕ ವಿಧಿ-ನಿಷೇಧಗಳನ್ನು ಹೇಳಿದೆ. ಅದರಲ್ಲಿ ಯಾರ ಅನ್ನವನ್ನು ಬಳಸಬೇಕು, ಯಾರ ಅನ್ನವನ್ನು ಬಳಸಬಾರದು, ಯಾವ ಸಂದರ್ಭದಲ್ಲಿ ಬಳಸಬಹುದು ಇತ್ಯಾದಿ ವಿಷಯಗಳು ಸೇರಿವೆ. ಈ ಬಗ್ಗೆ ಮಹಾಭಾರತದಲ್ಲಿ ಒಂದು ಸ್ವಾರಸ್ಯವಾದ ಕಥೆಯಿದೆ.

Advertisement

ಪಾಂಡವರು ವನವಾಸ ಮುಗಿಸಿ ಬಂದ ನಂತರ, ಅವರಿಗೆ ನ್ಯಾಯವಾಗಿ ದಕ್ಕಬೇಕಾಗಿದ್ದ ರಾಜ್ಯವನ್ನು ಕೊಡಲು ದುರ್ಯೋಧನನು ನಿರಾಕರಿಸುತ್ತಾನೆ. ಆಗ ಯುದ್ಧವೇ ಅನಿವಾರ್ಯ ಎಂಬ ಪರಿಸ್ಥಿತಿ ಬಂದೊದಗುತ್ತದೆ. ಯುದ್ಧದಿಂದ ಆಗುವ ಸಾವು-ನೋವುಗಳನ್ನು ಮನಗಂಡ ಧರ್ಮರಾಯನು, ಯುದ್ಧ ಬಿಟ್ಟು ಬೇರೆ ಮಾರ್ಗದಿಂದ ರಾಜ್ಯ ಪಡೆಯಲು ಸಾಧ್ಯವೇ ಎಂದು ಯೋಚಿಸುತ್ತಾನೆ. ಸಂಧಾನಕ್ಕಾಗಿ ಶ್ರೀಕೃಷ್ಣನನ್ನು ತನ್ನ ದೂತನನ್ನಾಗಿ ಕಳುಹಿಸುತ್ತಾನೆ. ಕೃಷ್ಣನ ಆಗಮನವನ್ನೂ ಅದರ ಉದ್ದೇಶವನ್ನೂ ಅರಿತ ಕೌರವನು, ಕೃಷ್ಣನನ್ನು ಆತಿಥ್ಯದಿಂದ ಸಂಪ್ರೀತಿಗೊಳಿಸಿ, ಅವನನ್ನೇ ತಮ್ಮ ಕಡೆಗೆ ಸೆಳೆದುಕೊಳ್ಳಲು ಯೋಚಿಸುತ್ತಾನೆ. ಅದಕ್ಕಾಗಿ ಕೃಷ್ಣನಿಗೆ ಪ್ರಿಯವಾದ ಬಗೆ ಬಗೆಯ ಪದಾರ್ಥಗಳನ್ನು ಭೋಜನಕ್ಕಾಗಿ ಸಿದ್ಧಪಡಿಸಲಾಗುತ್ತದೆ.

ಆದರೆ, ಭಕ್ತಪ್ರಿಯನೂ, ಸರಳನೂ ಆದ ಭಗವಂತನು ನೇರವಾಗಿ ತನ್ನ ಅಂತರಂಗದ ಭಕ್ತನಾದ ವಿದುರನ ಮನೆಗೆ ದಯಮಾಡಿಸುತ್ತಾನೆ. ಅಲ್ಲಿ ಬಹಳ ಪ್ರೀತಿಯಿಂದ ವಿದುರನು ಸಮರ್ಪಿಸಿದ ಹಾಲು- ಹಣ್ಣುಗಳನ್ನು ಸ್ವೀಕರಿಸಿ ಸಂತೃಪ್ತನಾಗುತ್ತಾನೆ.

ಮಾರನೇ ದಿವಸ ಕೌರವನ ಸಭೆಗೆ ಪಾಂಡವರ ದೂತನಾಗಿ ದಯಮಾಡಿಸುತ್ತಾನೆ. ಆಗ ಹಿಂದಿನ ದಿವಸದ ಆತಿಥ್ಯದ ಸಿದ್ಧತೆಯನ್ನು ತಿಳಿಸುತ್ತಾ ಕೌರವನು, ಕೃಷ್ಣನನ್ನು ಹೀಯಾಳಿಸುತ್ತಾನೆ. “ನೀನು ಎಷ್ಟಾದರೂ ನೀಚ ಕುಲದವನು. ಆದ್ದರಿಂದಲೇ ನಿನಗೆ ಸಮಾನನಾದ, ಅಲ್ಪನಾದ ವಿದುರನಲ್ಲಿ ಆತಿಥ್ಯ ಸ್ವೀಕರಿಸಿದೆ. ಸರಿಯಾಯಿತು ಬಿಡು. ನಿನಗೆ ರಾಜೋಚಿತವಾದ ಭೋಜನವಾದರೂ ಏಕೆ?’ ಎಂದು.

ಅದಕ್ಕೆ ಕೃಷ್ಣನು ಕೊಡುವ ಉತ್ತರವು ಬಲು ಸೊಗಸಾಗಿದೆ. “ಎಲೈ ದುರ್ಯೋಧನನೇ ಯಾರಾದರೂ ಪ್ರೀತಿಯಿಂದ ಕೊಟ್ಟ ಅನ್ನವನ್ನು ಮಾತ್ರವೇ ಸ್ವೀಕರಿಸಬೇಕು ಅಥವಾ ಪ್ರೀತಿಯಿಂದ ಕೊಡದಿದ್ದರೂ ನಾವು ಆಪತ್ತಿನಲ್ಲಿದ್ದರೆ ಆಗ ದೊರಕುವ ಅನ್ನವನ್ನು ಬಳಸಬಹುದು. ಆದರೆ, ನೀನೇನೂ ಪ್ರೀತಿಯಿಂದ ನಮ್ಮನ್ನು ಆದರಿಸಲೂ ಇಲ್ಲ. ಆದರವಿಲ್ಲದಿದ್ದರೂ ಭುಂಜಿಸುವ ಅನಿವಾರ್ಯತೆಯೂ ನನಗೆ ಇರಲಿಲ್ಲ’ ಎನ್ನುತ್ತಾನೆ. ಈ ಮಾತು ಎಷ್ಟೊಂದು ಅರ್ಥಪೂರ್ಣ ಅಲ್ಲವೇ?

Advertisement

 - ಬಿ. ಜಿ.ಅನಂತ
ಸಂಸ್ಕೃತಿ ಚಿಂತಕರು, ಅಷ್ಟಾಂಗ ಯೋಗ ವಿಜ್ಞಾನ ಮಂದಿರಂ

Advertisement

Udayavani is now on Telegram. Click here to join our channel and stay updated with the latest news.

Next